ಬಿಎಸ್’ವೈ ಬದಲಿಸಿ ರಿಸ್ಕ್ ತೆಗೆದುಕೊಳ್ಳುತ್ತಾ ಬಿಜೆಪಿ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 1:37 PM IST
Is BJP highcommand Yadiyurappa step down by his post?
Highlights

ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೆಂಬ ಮಾತು ಬಿಜೆಪಿ ಹೈ ಕಮಾಂಡ್ ಕಿವಿ ತಲುಪಿದೆ. ಯಡಿಯೂರಪ್ಪನವರನ್ನು ಬದಲಿಸಲು ಹೈ ಕಮಾಂಡ್ ಮನಸು ಮಾಡುತ್ತಾ? ಲೋಕಸಭಾ ಚುನಾವಣೆವರೆಗೆ ಯಥಾಸ್ಥಿತಿ ಮುಂದುವರೆಯುತ್ತಾ? ಕುತೂಹಲ ಮೂಡಿಸಿದೆ. 

ಬೆಂಗಳೂರು (ಜು. 31): ಕೈಗೆ ಬಂದ ತುತ್ತು ಬಾಯಿಗೆ ಬರದೆ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾದ ನಂತರ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಿಸಬೇಕು ಎಂಬ ಬೇಡಿಕೆ ರಾಜ್ಯ ಆರೆಸ್ಸೆಸ್ ನಾಯಕರಿಂದ ಅಮಿತ್ ಶಾಗೆ ಹೋಗಿದೆಯಂತೆ.

ವಯಸ್ಸಿನ ಕಾರಣದಿಂದ ಎರಡು ಜವಾಬ್ದಾರಿ ನಿಭಾಯಿಸುವುದು ಬಿಎಸ್‌ವೈಗೆ ಕಷ್ಟವಾಗುತ್ತದೆ ಎಂಬುದು ಆರೆಸ್ಸೆಸ್ ವಾದ. ಆದರೆ, ಮುಂದಿನ  ಲೋಕಸಭಾ ಚುನಾವಣೆವರೆಗೆ ತನ್ನನ್ನೇ ಎರಡೂ ಸ್ಥಾನದಲ್ಲಿ ಮುಂದುವರೆಸಿ, ಇಲ್ಲವಾದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ ಎಂದು ಯಡಿಯೂರಪ್ಪ ಅವರು ಅಮಿತ್ ಶಾರನ್ನು ಅಹಮದಾಬಾದ್‌ನಲ್ಲಿ ಭೇಟಿಯಾದಾಗ ಹೇಳಿ ಬಂದಿದ್ದಾರೆ. ಇದನ್ನು ಕೂಡ ಹೈಕಮಾಂಡ್ ಪರಿಗಣಿಸಿದೆ.

ಆದರೆ ಈಗ ಸಂಘದ ನಾಯಕರು ಮತ್ತೆ ಮಧ್ಯಪ್ರವೇಶ ಮಾಡಿರುವುದರಿಂದ ಅಮಿತ್ ಶಾ ಏನು ಮಾಡುತ್ತಾರೆಂಬ ಕುತೂಹಲ ರಾಜಕೀಯ ವಲಯದಲ್ಲಿದೆ. ಮಹತ್ವದ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಯಡಿಯೂರಪ್ಪ ಇಚ್ಛೆಗೆ ವಿರುದ್ಧವಾಗಿ ಅವರನ್ನು ಬದಲಾವಣೆ ಮಾಡುವ ರಿಸ್ಕ್ ಅನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುತ್ತಾ ಎಂಬುದು ಪ್ರಶ್ನೆ. 

ಈಗಲೇ ಅಶೋಕ್, ರವಿ, ನಳಿನ್ ರೇಸ್
ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆಗಲೇ ಅವರ ಜಾಗಕ್ಕೆ ಈ ಬಾರಿ ಒಕ್ಕಲಿಗರನ್ನು ನೇಮಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಆರ್ ಅಶೋಕ್ ಮತ್ತು ಸಿ ಟಿ ರವಿ ಮಧ್ಯೆ ಪ್ರಬಲ ಪೈಪೋಟಿ ಶುರುವಾಗಿದೆ.

ಸಂತೋಷ್ ಜಿ ಬೆಂಬಲದ ಕಾರಣದಿಂದ ಮಂಗಳೂರು ಸಂಸದ ನಳಿನ್ ಕುಮಾರ ಕಟೀಲು ಕೂಡ ಸ್ಪರ್ಧೆಯಲ್ಲಿದ್ದಾರೆ. ಒಂದು ವೇಳೆ ಅನಿವಾರ್ಯವಾಗಿ ತಾನು ಕೆಳಗೆ ಇಳಿಯಲೇಬೇಕಾದಲ್ಲಿ ಯಡಿಯೂರಪ್ಪನವರು ದಲಿತ ಬೋವಿ ಸಮುದಾಯಕ್ಕೆ ಸೇರಿದ ಅರವಿಂದ ಲಿಂಬಾವಳಿ ಹೆಸರು ಹೇಳಬಹುದು. ಆದರೆ ಕಪ್ಪು ಕುದುರೆಯಾಗಿ ಕೊನೆಯ ಗಳಿಗೆಯಲ್ಲಿ ದಲಿತ ಎಡ ವರ್ಗಕ್ಕೆ ಸೇರಿರುವ ಗೋವಿಂದ ಕಾರಜೋಳ ಹೆಸರು ಪ್ರತ್ಯಕ್ಷವಾದರೂ ಆಶ್ಚರ್ಯವಿಲ್ಲ.

ಇದಕ್ಕಾಗಿ ಸಿ ಟಿ ರವಿ ಮತ್ತು ಗೋವಿಂದ ಕಾರಜೋಳ ಈಗಾಗಲೇ ಒಂದೆರಡು ಸುತ್ತು ದಿಲ್ಲಿ ರೌಂಡ್ಸ್ ಮುಗಿಸಿದ್ದಾರೆಂಬ ಮಾತುಗಳೂ ಇವೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader