45 ದಿನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆಯಾಗಿದ್ದು, ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು [ಆ.03]: ರಾಜ್ಯದಲ್ಲಿ ನೂತನ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ‘ವರ್ಗಾವಣೆ ಪರ್ವ’ ಮುಂದುವರೆದಿದ್ದು, ಶುಕ್ರವಾರ ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಒಂಭತ್ತು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ.
ತಮ್ಮನ್ನು ಅಲ್ಪಾವಧಿಯಲ್ಲೇ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ ಆದೇಶವನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾರಣಕ್ಕಾಗಿಯೇ ಅವರು ನೂತನ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸುವ ವೇಳೆ ಗೈರಾಗಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಐಜಿಪಿ ಹುದ್ದೆಯಲ್ಲಿದ್ದ ಅಲೋಕ್ ಕುಮಾರ್ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಆಯುಕ್ತರನ್ನಾಗಿ ಜೂ.17ರಂದು ಸರ್ಕಾರ ನೇಮಿಸಿತ್ತು. ಅಂದು ಸೇವಾ ಹಿರಿತನ ಪರಿಗಣಿಸದೆ ಕಿರಿಯ ಅಧಿಕಾರಿಗೆ ಸರ್ಕಾರ ಮಣೆ ಹಾಕಿದೆ ಎಂದು ಕೆಲ ಹಿರಿಯ ಎಡಿಜಿಪಿಗಳು ಅಸಮಾಧಾನ ಹೊರಹಾಕಿದ್ದರು.
