ಮೈಸೂರು(ಡಿ.09): ಕಂದಾಯ ಇಲಾಖೆ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಮೇಲಿನ ತೂಗುತ್ತಿಯನ್ನ ರಾಜ್ಯ ಸರ್ಕಾರ ಪಾರು ಮಾಡಲು ಯತ್ನಿಸಿದೆ. ಮೈಸೂರು ಮಿನರಲ್ಸ್'ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಅಕ್ರಮಗಳನ್ನ ಕೈ ಬಿಡುವ ಪ್ರಸ್ತಾಪಕ್ಕೆ ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ, ಗಣಿ ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಅವಧಿಯ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ಕೋರಿ ವಿಶೇಷ ತನಿಖಾ ತಂಡ  ಒಂದು ತಿಂಗಳ ಹಿಂದೆಯೇ ಪತ್ರ ಬರೆದಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಬಳ್ಳಾರಿವರೆಗೂ ಪಾದಯಾತ್ರೆಯಲ್ಲಿ ತೆರಳಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಆರೋಪಿ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಆರೋಪಗಳು ತನಿಖೆಯಲ್ಲಿ ಸಾಬೀತಾಗಿದ್ದರೂ ಅಂಥ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ಸರ್ಕಾರ ಅನುಮತಿ ನೀಡದೇ ಮೀನ ಮೇಷ ಎಣಿಸುತ್ತಿದೆ.

ಕಂದಾಯ ಇಲಾಖೆ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪ ಸಾಬೀತು

ಗಂಗಾರಾಂ ಬಡೇರಿಯಾ ಈ ಹಿಂದೆ ಗಣಿ ಇಲಾಖೆಯ ನಿರ್ದೇಶಕರಾಗಿದ್ದರು. ಆಗ ಅಕ್ರಮ ಗಣಿಗಾರಿಕೆ ನಡೆದಿವೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್​ ಹೆಗ್ಡೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ವಿಶೇಷ ತನಿಖಾ ತಂಡ ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ಬಡೇರಿಯಾ ವಿರುದ್ಧ ಕೇಳಿ ಬಂದಿದ್ದ ಆರೋಪಗಳೆಲ್ಲವೂ ತನಿಖೆಯಲ್ಲಿ ಸಾಬೀತಾಗಿವೆ. ಹೀಗಾಗಿ ವಿಚಾರಣೆಗೆ ಅನುಮತಿ ಕೊಡಬೇಕು ಅಂತ ವಿಶೇಷ ತನಿಖಾ ತಂಡದ ಇನ್ಸ್'ಪೆಕ್ಟರ್​​ ಬಸವರಾಜ್​ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ. ಆದರೆ ಈ ಪತ್ರ ಆಧರಿಸಿ ವಿಚಾರಣೆಗೆ ಅನುಮತಿ ಕೊಡುತ್ತಿಲ್ಲ.

ಬಡೇರಿಯಾ ವಿರುದ್ಧ ಆರೋಪಗಳೇನು?

ಆರೋಪ-1

- ಸ್ಪಾರ್ಕ್‌ಲೈನ್ ಮೈನಿಂಗ್ ಸಂಸ್ಥೆ ಗೆ ಅನುಕೂಲ

- ಅರಣ್ಯ ಭೂಮಿಯನ್ನು ಪಟ್ಟಾ ಎಂದು ಮಂಜೂರು

- ವಿವಿಧ ನಿಯಮ ಮೀರಿ ಗಣಿಗಾರಿಕೆಗೆ ಅವಕಾಶ

- ಅರಣ್ಯ ಪ್ರದೇಶವೆಂದು ಲೋಕಾಯುಕ್ತ ತಿಳಿಸಿತ್ತು

- ಪರಿಗಣಿಸದೆ ಅರಣ್ಯೇತರ ಪ್ರದೇಶವೆಂದ ಅಧಿಕಾರಿ

ಆರೋಪ-2

- ಜಂತಕಲ್​ ಮೈನಿಂಗ್ ಕಂಪೆನಿಗೆ ಅನುಕೂಲ

- ಹೊಳಲ್ಕೆರೆ ಬಳಿ ದಾಸ್ತಾನು ಅದಿರು ಸಾಗಿಸಲು ಅನುಮತಿ

- ಕಾನೂನು ಬಾಹಿರವಾಗಿ ಅದಿರು ಸಾಗಾಟಕ್ಕೆ ಗ್ರೀನ್​ ಸಿಗ್ನಲ್​

ಮೈಸೂರು ಮಿನರಲ್ಸ್​ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲೂ ಗಂಗಾರಾಂ ಬಡೇರಿಯಾ ಅವರ ವಿರುದ್ಧ ಹಲವು ಆರೋಪಗಳು ಕೇಳ್ಬಂದಿದ್ದವು. ಆರೋಪಗಳಿಗೆ ಲೋಕಾಯುಕ್ತ ವರದಿಯಲ್ಲೂ ಸಾಕಷ್ಟು ಪುರಾವೆಗಳಿದ್ವು. ಈ ಆರೋಪಗಳಿಂದ್ಲೇ ಗಂಗಾರಾಂ ಬಡೇರಿಯಾ ಅವ್ರನ್ನು ಕೈ ಬಿಡ್ಲಿಕ್ಕೆ ಸಲ್ಲಿಕೆಯಾಗಿರೋ ಪ್ರಸ್ತಾವನೆಗೆ ಹಿರಿಯ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಅದೇ ಗಂಗಾರಾಂ ಬಡೇರಿಯಾ ಅವರನ್ನು ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲು ಎಸ್​ಐಟಿಗೆ ಅನುಮತಿ ಕೊಡ್ದೇ ಇರುವುದರ ಬಗ್ಗೆ ಹಿರಿಯ ಸಚಿವರು ಮಾತನಾಡುತ್ತಿಲ್ಲ.