ಬೆಂಗಳೂರು (ಮಾ. 04):  ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಉಗ್ರನ ಪರವಾಗಿ ಹೆಸರಾಂತ ಪ್ರಭಾವಿ ಮುಸ್ಲಿಂ ಸಂಘಟನೆಯೊಂದು ನ್ಯಾಯಾಲಯಕ್ಕೆ ದಂಡದ ಮೊತ್ತ ಪಾವತಿಸಿದೆಯೇ?

ಇಂಥÜದ್ದೊಂದು ಬಲವಾದ ಸಂಶಯವನ್ನು ಈಗ ರಾಜ್ಯ ಗುಪ್ತಚರ ಇಲಾಖೆ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿದೆ. ಅಲ್ಲದೆ, ದಂಡದ ಮೊತ್ತ ಪಾವತಿಸಿದೆ ಎನ್ನಲಾದ ಮುಂಬೈ ಹಾಗೂ ಗುಜರಾತ್‌ ಮೂಲದ ಸಂಘಟನೆಯ ಹಣದ ಮೂಲದ ಬೆನ್ನು ಹತ್ತಿವೆ.

ಮುಂಬೈ ಹಾಗೂ ಗುಜರಾತ್‌ನ ಈ ಸಂಘಟನೆಯ ಘಟಕದಿಂದ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಗೌಹರ್‌ ಅಜೀಜ್‌ ಖೊಮೇನಿ ಪರವಾಗಿ ಹಣ ಪಾವತಿಯಾಗಿದೆ ಎನ್ನಲಾಗಿದ್ದು, ಇದೀಗ ಕೇಂದ್ರ ತನಿಖಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿವೆ.

ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಯಾಲಯಕ್ಕೆ ಉಗ್ರನ ಪರ 2.70 ಲಕ್ಷ ರು. ದಂಡದ ಮೊತ್ತ ಪಾವತಿಯಾಗಿದೆ. ಈ ಪ್ರಭಾವಿ ಸಂಘಟನೆ ಶೈಕ್ಷಣಿಕ, ಸಾಮಾಜಿಕದಂತಹ ಜನಪರ ಕಾಳಜಿ ಕೆಲಸದಲ್ಲಿ ತೊಡಗಿದೆ.

ವಿಧ್ವಂಸಕ ಕೃತ್ಯ ಎಸಗಿರುವ ಉಗ್ರನಿಗೆ ಆರ್ಥಿಕ ನೆರವು ನೀಡಿದೆ ಎನ್ನಲಾದ ಸಂಘಟನೆಯ ಮೂಲ ಉದ್ದೇಶವನ್ನೇ ಸಂಶಯದಿಂದ ನೋಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕೇಂದ್ರ ತನಿಖಾ ಸಂಸ್ಥೆಯೊಂದರ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ವಿಪರ್ಯಾಸವೆಂದರೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ (ಕೇಂದ್ರ ಅಪರಾಧ ವಿಭಾಗ) ಈ ವಿಚಾರ ಗಮನಕ್ಕೆ ಬಂದಿಲ್ಲ. ಉಗ್ರನಾದ ಕಾರಣ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ದಂಡ ಪಾವತಿಸಿದ್ದು ಏಕೆ?:

ಕಳೆದ 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳ ಪೈಕಿ ಪ್ರಕರಣದ 5ನೇ ಆರೋಪಿ ಬಿಹಾರದ ದರ್ಭಾಂಗಾ ಜಿಲ್ಲೆಯ ಅಜೀಜ್‌ ಖೋಮಾನಿ, ಮಧುಬನಿ ಜಿಲ್ಲೆಯ 12ನೇ ಆರೋಪಿ ಕಮಲ್‌ ಹಸನ್‌ ಮತ್ತು ದರ್ಭಾಂಗಾ ಜಿಲ್ಲೆಯ 13ನೇ ಆರೋಪಿ ಕಫೀಲ್‌ ಅಖ್ತರ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.

ಪ್ರಕರಣದಲ್ಲಿ ಆರೋಪಿಗಳು ನೇರ ಭಾಗಿಯಾಗಿದ್ದಾರೆ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಮನ್ನಣೆ ಮಾಡಿದ್ದ ವಿಚಾರಣಾ ನ್ಯಾಯಾಲಯ, ‘ಸ್ಫೋಟಕ ವಸ್ತುಗಳ ಕಾಯ್ದೆ-1908, ಸಾರ್ವಜನಿಕ ಸ್ವತ್ತಿಗೆ ಹಾನಿ ಪ್ರತಿಬಂಧಕ ಕಾಯ್ದೆ- 1984’ರ ಅನ್ವಯ ಕಾನೂನು ಬಾಹಿರ ಅಪರಾಧಿಗಳಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಜೀಜ್‌ ಗೋಮೆನಿ, ಕಮಲ್‌ ಹಸನ್‌ಗರ ತಲಾ 7.5 ಲಕ್ಷ ರು. ದಂಡ ಮತ್ತು ಪಿಲ್‌ ಅಕ್ತರ್‌ಗೆ 10 ಲಕ್ಷ ರು. ದಂಡ ವಿಧಿಸಿತ್ತು. ದಂಡ ಪಾವತಿಸದಿದ್ದಲ್ಲಿ 50 ಸಾವಿರ ರು.ಗಳಿಗೆ ಒಂದು ವರ್ಷದಂತೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು 2018ರ ಜುಲೈ 8 ರಂದು ಆದೇಶ ಹೊರಡಿಸಿತ್ತು.

ಆದರೆ, ಮೂವರು ಆರೋಪಿಗಳು ‘ನಾವು ಆರ್ಥಿಕವಾಗಿ ದುರ್ಬಲರಾಗಿದ್ದೇವೆ. ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡ ಪಾವತಿಸಲು ಶಕ್ತರಾಗಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡ ಪಾವತಿಸುವುದು ನಮಗೆ ಕಷ್ಟವಿದೆ. ಈ ಹಿನ್ನೆಲೆಯಲ್ಲಿ ಬಾರಿ ಮೊತ್ತ ದಂಡವನ್ನು ಮಾರ್ಪಾಡು ಮಾಡಿ’ ಎಂದು ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ದಂಡದ ಮೊತ್ತವನ್ನು ಶೇ.65ರಷ್ಟುಕಡಿಮೆ ಮಾಡಿ ಅಂದರೆ ತಲಾ 2.70 ಲಕ್ಷ ರು.ಗಳಿಗೆ ವಿಧಿಸಿ ಫೆ.24 ರಂದು ಆದೇಶಿಸಿತ್ತು.

ಡಿ.ಡಿ.ಮೂಲಕ ಪಾವತಿ

ಕೋರ್ಟ್‌ ಆದೇಶ ಬರುತ್ತಿದ್ದಂತೆ ಫೆ.27 ರಂದು ಅಪರಾಧಿಗಳ ಪೈಕಿ ಗೌಹರ್‌ ಅಜೀತ್‌ ಖೊಮೇನಿ ನ್ಯಾಯಾಲಯಕ್ಕೆ 2.70 ಲಕ್ಷ ರು. ದಂಡದ ಹಣವನ್ನು ಪಾವತಿಸಿದ್ದಾನೆ. ಈ ಹಣ ಡಿ.ಡಿ. (ಡಿಮ್ಯಾಂಡ್‌ ಡ್ರಾಫ್ಟ್‌) ಮೂಲಕ ಪಾವತಿಯಾಗಿದೆ. ಈ ಹಣವನ್ನು ಮುಂಬೈ ಹಾಗೂ ಗುಜರಾತ್‌ ರಾಜ್ಯದ ಅಹಮದಾಬಾದ್‌ನ ಮುಸ್ಲಿಂ ಸಂಘಟನೆ ಪಾವತಿ ಮಾಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.

ದೇಶದ್ರೋಹಿಯೊಬ್ಬನಿಗೆ ಮುಸ್ಲಿಂ ಸಂಘಟನೆ ದಂಡದ ಹಣ ಪಾವತಿ ಮಾಡುವ ಮೂಲಕ ನೆರವು ನೀಡಿರುವುದು ಆ ಸಂಸ್ಥೆಯ ಉದ್ದೇಶವನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ದೇಶದೊಳಗಿದ್ದುಕೊಂಡು, ದೇಶದ್ರೋಹಿಯೊಬ್ಬನಿಗೆ ನೆರವು ನೀಡಿರುವುದು ಆತಂಕಕ್ಕೀಡುವಂತೆ ಮಾಡಿದೆ.

ಹೀಗಾಗಿ ಸಂಸ್ಥೆ ಬಗ್ಗೆ ಗುಪ್ತಚರ ಇಲಾಖೆ ಹಾಗೂ ಕೇಂದ್ರ ತನಿಖಾ ಸಂಘಟನೆಯ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯವರು ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ಉಗ್ರನಾಗಿರುವ ಕಾರಣ ಆತನಿಗೆ ಮುಸ್ಲಿಂ ಸಂಘಟನೆ ಹಣ ನೀಡಿರುವ ಶಂಕೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಕೇಂದ್ರ ತನಿಖಾ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಅರಬ್‌ ದೇಶದದಿಂದ ಹಣ?

ಉಗ್ರ ಪರವಾಗಿ ದಂಡದ ಹಣ ಪಾವತಿಸಿದ ಪ್ರಭಾವಿ ಮುಸ್ಲಿಂ ಸಂಘಟನೆಯ ಕೇಂದ್ರ ಕಚೇರಿ ಕಚೇರಿ ದೆಹಲಿಯಲ್ಲಿದ್ದು, ದೇಶದ ಪ್ರತಿ ರಾಜ್ಯಗಳಲ್ಲಿಯೂ ತನ್ನ ಘಟಕವನ್ನು ಹೊಂದಿದೆ. ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಸಾಮಾಜಿಕ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸಂಘಟನೆಗೆ ಅರಬ್‌ ದೇಶಗಳಿಂದ ‘ಝಕಾತ್‌’ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಹಣ ಬರಿದು ಬರುತ್ತಿದೆ. ದೇಶದ್ರೋಹಿಯೊಬ್ಬನ ನೆರವಿಗೆ ಸಂಘಟನೆ ಹಣ ಬಳಕೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಸಂಘಟನೆಯ ಮೂಲ ಉದ್ದೇಶವನ್ನೇ ಕೇಂದ್ರ ತನಿಖಾ ಸಂಸ್ಥೆಗಳು ಸಂಶಯದಿಂದ ನೋಡುವಂತೆ ಮಾಡಿದೆ.

ಏನಿದು ಪ್ರಕರಣ?

2010ರ ಏಪ್ರಿಲ್‌ 17 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಐಪಿಎಲ್‌ ಮ್ಯಾಚ್‌ ನಡೆಯುತ್ತಿದ್ದ ವೇಳೆ ಗೇಟ್‌ ಸಂಖ್ಯೆ 11 ಮತ್ತು 15ರ ಬಳಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಭದ್ರತಾ ಸಿಬ್ಬಂದಿ ಸೇರಿ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಯಾಸೀನ್‌ ಭಟ್ಕಳ್‌ ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲಾಗಿತ್ತು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.

- ಎನ್. ಲಕ್ಷ್ಮಣ್