ಅಮಿತ್ ಶಾ ಕೇಸ್ ಜಡ್ಜ್ ಸಾವಿನ ಉನ್ನತ ತನಿಖೆಗೆ ರಾಹುಲ್ ಆಗ್ರಹ

First Published 13, Jan 2018, 8:22 AM IST
Investigate The Death Of  Judge Says Rahul Gandhi
Highlights

ವಿಶೇಷ ಸಿಬಿಐ ನ್ಯಾಯಾಧೀಶ ನ್ಯಾ. ಬಿ.ಎಚ್. ಲೋಯಾ ಸಾವಿನ ಕುರಿತಂತೆ ಸುಪ್ರೀಂಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಸುಪ್ರೀಂಕೋರ್ಟ್ ಕಾರ್ಯ ನಿರ್ವಹಣೆಯ ಕುರಿತು 4ನ್ಯಾಯಮೂರ್ತಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ರಾಹುಲ್ ಈ ಒತ್ತಾಯ ಮಾಡಿದ್ದಾರೆ.

ನವದೆಹಲಿ: ವಿಶೇಷ ಸಿಬಿಐ ನ್ಯಾಯಾಧೀಶ ನ್ಯಾ. ಬಿ.ಎಚ್. ಲೋಯಾ ಸಾವಿನ ಕುರಿತಂತೆ ಸುಪ್ರೀಂಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಸುಪ್ರೀಂಕೋರ್ಟ್ ಕಾರ್ಯ ನಿರ್ವಹಣೆಯ ಕುರಿತು 4ನ್ಯಾಯಮೂರ್ತಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ರಾಹುಲ್ ಈ ಒತ್ತಾಯ ಮಾಡಿದ್ದಾರೆ.

ಲೋಯಾ ಸಾವಿಗೂ, ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಈ ಹಿಂದೆ ಆರೋಪಿಯಾಗಿ ಬಳಿಕ ಕ್ಲೀನ್‌ಚಿಟ್ ಪಡೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ನಂಟಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ರಾಹುಲ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಜೊತೆಗೆ ರಾಹುಲ್‌ರ ಈ ಪ್ರತಿಕ್ರಿಯೆ ಅಮಿತ್ ಶಾ ಮತ್ತು ಬಿಜೆಪಿಗೆ ನೀಡಿದ ಪರೋಕ್ಷ ಟಾಂಗ್ ಎಂದು ಬಣ್ಣಿಸಲಾಗಿದೆ. ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸುಪ್ರೀಂಕೋರ್ಟ್‌ನ ಆಡಳಿತ ವೈಖರಿ ಬಗ್ಗೆ ನಾಲ್ವರು ನ್ಯಾಯಾಧೀಶರು ವ್ಯಕ್ತಪಡಿಸಿರುವ ಆತಂಕ ಅತ್ಯಂತ ಮಹತ್ವವಾದುದು ಮತ್ತು ನ್ಯಾ. ಬಿ.ಎಚ್.ಲೋಯಾ ನಿಗೂಢ ಸಾವಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಅತ್ಯುನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಸುಪ್ರೀಂಕೋರ್ಟ್‌ನ ಘನತೆಯನ್ನು ಕಾಪಾಡದೇ ಹೋದಲ್ಲಿ, ಪ್ರಜಾಪ್ರಭುತ್ವ ಉಳಿಯದು ಎಂಬ ನ್ಯಾ. ಚಲಮೇಶ್ವರ್ ಎಂಬ ಹೇಳಿಕೆ ಅತ್ಯಂತ ಮಹತ್ವದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಅವರು ನ್ಯಾ. ಲೋಯ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದಾರೆ.

ನನ್ನ ಪ್ರಕಾರ, ಇದು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಮತ್ತು ಅದನ್ನು ಸುಪ್ರೀಂ ಕೋರ್ಟ್ ಉನ್ನತ ಮಟ್ಟದಲ್ಲಿ ನಿರ್ವಹಿಸಬೇಕು. ಸುಪ್ರೀಂ ಕೋರ್ಟ್ ಮೇಲೆ ನಂಬಿಕೆಯಿರುವವರು, ನ್ಯಾಯದ ಸಿದ್ಧಾಂತದ ಮೇಲೆ ಪ್ರೀತಿಯಿರುವ ಎಲ್ಲ ಪ್ರಜೆಗಳು ವಿಷಯವನ್ನು ಗಮನಿಸುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

loader