ಬೆಂಗಳೂರು ನಗರದ 300 ಸ್ಥಳಗಳಲ್ಲಿ ಉಚಿತ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ಒದಗಿಸುವ ಸಲುವಾಗಿ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ವೈ-ಫೈ ಹಬ್ ಟವರ್‌ಗಳ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಿದೆ.

ಬೆಂಗಳೂರು (ಜ.25): ಬೆಂಗಳೂರು ನಗರದ 300 ಸ್ಥಳಗಳಲ್ಲಿ ಉಚಿತ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ಒದಗಿಸುವ ಸಲುವಾಗಿ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ವೈ-ಫೈ ಹಬ್ ಟವರ್‌ಗಳ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಿದೆ.

ಈಗಾಗಲೇ ವಿಧಾನಸೌಧ ಮುಂಭಾಗ ಹಾಗೂ ರೇಡಿಯೋ ಸ್ಟೇಷನ್ ಬಳಿ ವೈ-ಫೈ ಟವರ್‌ಗಳನ್ನು ಸ್ಥಾಪಿಸಲಾಗಿದ್ದು, ಉಳಿದೆಡೆಯೂ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಬಿಎಸ್ಎನ್‌ಎಲ್ ಮತ್ತು ಖಾಸಗಿ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ 11 ಮಹಾನಗರ ಪಾಲಿಕೆಗಳು ಹಾಗೂ 2600 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲೂ ವೈ-ಫೈ ಹಬ್ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿ ಯಲ್ಲಿ ಯೋಜನೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.

ರಾಜ್ಯದ ಗ್ರಾಮೀಣ ಭಾಗದಲ್ಲಿ ಜನವರಿ ಅಂತ್ಯಕ್ಕೆ ಉಚಿತ ಇಂಟರ್‌ನೆಟ್ ಸೇವೆ ಆರಂಭವಾಗಲಿದ್ದು, ಈಗಾಗಲೇ 11 ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ವಾಗಿ 1 ಜಿಬಿ ಸಾಮರ್ಥ್ಯದ ಇಂಟರ್‌ನೆಟ್ ಪೂರೈಕೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಉಳಿದ 2600 ಗ್ರಾ.ಪಂ.ಗಳ ವ್ಯಾಪ್ತಿಯಲ್ಲೂ ಶೀಘ್ರ ಯೋಜನೆ ಅನುಷ್ಠಾನಗೊಳ್ಳಲಿದೆ.

ಈಗಾಗಲೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಬಿಎಸ್‌ಎನ್‌ಎಲ್ ರೂಟರ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದು, ನಗರ ಪ್ರದೇಶಗಳಲ್ಲಿ ಖಾಸಗಿ ಆಪರೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಉಚಿತ ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಪ್ರದೇಶ ಉಚಿತ ಇಂಟರ್ ನೆಟ್ ಸೌಲಭ್ಯ ವ್ಯಾಪ್ತಿಗೆ ಒಳಪಡಿಸುವ ಗುರಿಯನ್ನು ಇಲಾಖೆ ಹೊಂದಿದೆ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ.