ಬೆಂಗಳೂರು(ನ.19) ದೇಶದಲ್ಲಿ ಎಲ್ಲ ದಿನಾಚರಣೆಗಳನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಒಂದೊಂದಕ್ಕೆ ಒಂದೊಂದು ಅರ್ಥವೂ ಇದೆ. ಆದರೆ ವಿಶ್ವ ಪುರುಷರ ದಿನ? ಪುರುಷರಿಗೆ ಒಂದು ದಿನ ಮೀಸಲಿದೆ ಎನ್ನುವುದೆ ಬಹುತೇಕರಿಗೆ ಗೊತ್ತಿಲ್ಲ. ಇನ್ನು ಪುರುಷರ ಹಕ್ಕು, ಭಾವನೆ ಅವರ ಮನಸ್ಥಿತಿ ಅರಿಯುವುದು? ಹೌದು ಇದೊಂದು ದೊಡ್ಡ ಪ್ರಶ್ನೆಯೇ.. ಪುರುಷರಿಗೂ ಒಂದು ದಿನವಿದೆ.. ಅವರ ಹಕ್ಕು ಕಾಪಾಡಲು ಸಂಘ-ಸಂಸ್ಥೆಗಳಿವೆ..

ಪ್ರಪಂಚದಲ್ಲಿ ಪ್ರತಿ ದಿನ ಅದೆಷ್ಟೋ ಪುರುಷರು ಹೆಂಡತಿಯಿಂದ, ಹೆಂಡತಿ ಕುಟುಂಬದವರಿಂದ, ಗೆಳತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ. ಮಾತು ಹಾಸ್ಯಾಸ್ಪದವಾಗಿಯೂ ಕಾಣಬಹುದು ಆದರೆ ಕಟು ಸತ್ಯ. ಮಹಿಳೆಯರ ರೀತಿ ಪುರುಷರ ಮೇಲೂ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಬೆಳಕಿಗೆ ಬರುವುದು ತುಂಬಾ ಕಡಿಮೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವಾದರೆ ಅದು ದೊಡ್ಡ ಮಟ್ಟದ ಸುದ್ದಿಯಾಗುತ್ತದೆ.. ಅದೆ ಪುರುಷನೊಬ್ಬನ ಮೇಲೆ ದೌರ್ಜನ್ಯವಾದರೆ ಅದು ಸುದ್ದಿಗೆ ಅರ್ಹವಾಗುವುದೇ ಇಲ್ಲ.

ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್(ಎಸ್ಐಎಫ್ಎಫ್) ಎಂಬ ಸಂಸ್ಥೆ ಪುರುಷರ ಹಕ್ಕು ಕಾಪಾಡುವ ಕೆಲಸ ಮಾಡಿಕೊಂಡು ಬರುತ್ತಿದೆ. ಬೆಂಗಳೂರು ಮೂಲದ ಸಂಸ್ಥೆಯ ಶಾಖೆಗಳು ಹೈದರಾಬಾದ್ ಮತ್ತು ದೆಹಲಿಯಲ್ಲಿಯೂ ಇವೆ. 2005ರಲ್ಲಿ ಆರಂಭವಾದ ಸಂಸ್ಥೆ ನೊಂದ ಪುರುಷರಿಗೆ ಚೈತನ್ಯ ತುಂಬುವ ಕಾರ್ಯದಲ್ಲಿ ನಿರತವಾಗಿದೆ.

ದಿಢೀರ್ ರಜೆ, ಬೆಂಗಳೂರಿಗೆ ಬಂದ ಮಂಗಳೂರಿಗನ ಆಕ್ರೋಶದ ಪರಿ ವೈರಲ್

ಪ್ರತಿ ವರ್ಷ 20 ಸಾವಿರ ಪುರುಷರು: ಪ್ರತಿ ವರ್ಷ 20  ಸಾವಿರ ಪುರುಷರು ಒಂದಿಲ್ಲ ಒಂದು ಕಾರಣದಿಂದ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ನಕಲಿ ವರದಕ್ಷಿಣೆ ಕೇಸು, ಕೌಟಂಬಿಕ ದೌರ್ಜನ್ಯ, ಸುಳ್ಳು ಅತ್ಯಾಚಾರ ಪ್ರಕರಣ, ಕೆಲಸದ ಜಾಗದಲ್ಲಿ ಪುರುಷರ ಮೇಲೆ ಪುರುಷ ಮತ್ತು ಮಹಿಳೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ಸಂಸ್ಥೆಯ ಅಂಕಿ ಅಂಶಗಳು ಮಾಹಿತಿ ನೀಡುತ್ತವೆ. ಎಸ್ಐಎಫ್ಎಫ್ ಉಳಿದ ಎನ್ ಜಿಒಗಳ ನೆರವನ್ನು ಪಡೆದುಕೊಳ್ಳುತ್ತಿದೆ. ಇಡಿ ದೇಶದಲ್ಲಿ ಒಂದು ವರ್ಷಕ್ಕೆ ದಾಖಲಾಗುವ ಅಥವಾ ಬೆಳಕಿಗೆ ಬರುವ ಪ್ರಕರಣ ಬರೋಬ್ಬರಿ 70 ಸಾವಿರ.

ಮಿಸ್ ಕಾಲ್ ಕೊಡಿ: ಒಂದು ವೇಳೆ ಪುರುಷರು ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದರೆ ಏನು ಮಾಡಬೇಕು ಅದಕ್ಕೂ ಉತ್ತರವನ್ನು ಸಂಸ್ಥೆ ನೀಡಿದೆ.  9278978978 ಮಿಸ್ ಕಾಲ್ ಮಿಸ್ ಕಾಲ್ ನೀಡಿದರೆ ಸಾಕು. ಸಂಸ್ಥೆ ಸಹಾಯ ಹಸ್ತ ಚಾಚುತ್ತದೆ. ಬೆಂಗಳೂರು ಜಯನಗರ ರಾಜೀವ್ ಗಾಂಧಿ ಇನ್ಸಿಟ್ಯೂಟ್ ಸಮೀಪ ಕಚೇರಿ ಇದೆ.

ಗ್ರಾಮೀಣ ಪುರುಷರ ಮೇಲೂ ದೌರ್ಜನ್ಯ: ನಗರ ಮಾತ್ರವಲ್ಲ ಗ್ರಾಮೀಣ ಪುರುಷರ ಮೇಲೆಯೂ ದೌರ್ಜನ್ಯ ನಡೆಯುತ್ತಿದೆ. ಸಂಸ್ಥೆ ಸಾಮಾಜಿಕ ತಾಣ, ವಾಟ್ಸಪ್, ದೂರವಾಣಿ ಮೂಲಕ ಸಂಪರ್ಕ ಸಾಧಿಸಿದ್ದು ಗ್ರಾಮೀಣ ಭಾಗದ ಪುರುಷರಿಗೂ ಸಲಹೆ ಮತ್ತು ನೆರವು ನೀಡುತ್ತಿದೆ.

ಶಿಕ್ಷಣ ಮತ್ತು ಜಾಗೃತಿ: ಸಮಸ್ಯೆ ಎದುರಿಸುವ ಪುರುಷ ಒಮ್ಮೆ ಸಂಸ್ಥೆ ಸಂಪರ್ಕಕ್ಕೆ ಬಂದರೆ ಅವರಿಗೆ ನೆರವು ನೀಡುವುದರೊಂದಿಗೆ ಸಲಹೆ ಮತ್ತು ಕಾನೂನಾತ್ಮಕ ತಿಳಿವಳಿಕೆಯನ್ನು ನೀಡುತ್ತದೆ. ಮೊದಲಿಗೆ ದೌರ್ಜನ್ಯಕ್ಕೆ ಗುರಿಯಾದ ಪುರುಷರ ಮನಸ್ಥಿತಿ ಸುಧಾರಣೆ ಮಾಡಿ ಅವರಿಗೆ ಶಾಂತಿ ನೀಡುವುದು ಮೊದಲ ಗುರಿ ಎಂದು ಸಂಸ್ಥೆಯ ಅನಿಲ್ ಹೇಳುತ್ತಾರೆ. ಪ್ರತಿ ವರ್ಷ ಬೇರೆ ಬೇರೆ ಕಾರಣದಿಂದ 1.5 ಲಕ್ಷ ಜನ ಪುರುಷರಿಗೆ ತಮ್ಮ ಮಕ್ಕಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕಕಾರಿ ಮಾಹಿತಿಯನ್ನು ನೀಡುತ್ತಾರೆ. 26 ರಿಂದ 35 ವರ್ಷದೊಳಗಿನ ಪುರುಷರೇ ಹೆಚ್ಚಾಗಿ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಶೇ. 75 ರಷ್ಟು ಪಾಲನ್ನು ಹೊಂದಿದ್ದಾರೆ ಎಂಬ ಅಂಶವನ್ನು ತಿಳಿಸುತ್ತಾರೆ.

ಗಂಡ ಅಡುಗೆ ಸರಿಯಿಲ್ಲವೆಂದರೆ ದೌರ್ಜನ್ಯವಲ್ಲ

ಏನು ಮಾಡಬಹುದು? ನಕಲಿ ಪ್ರಕರಣದಿಂದ ಅನೇಕರು ಖಿನ್ನತೆಗೆ ಗುರಿಯಾಗಿದ್ದರು ಇನ್ನು ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಕಲಿ ಪ್ರಕರಣ ದಾಖಲಿಸಿದರೆ ಅವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಭಾರತದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಒಂದು ವೇಳೆ ಈ ರೀತಿ ದಂಡ ಮತ್ತು ಜೈಲು ಶಿಕ್ಷೆ ಜಾರಿಯಾಗುವ ಭಯ ಉಂಟಾದರೆ ನಕಲಿ ಪ್ರಕರಣ ದಾಖಲಿಸುವವರ ಸಂಖ್ಯೆ ಕಡಿಮೆ ಆಗಬಹುದು.

ಒಟ್ಟಿನಲ್ಲಿ ಪುರುಷರಿಗೂ ಒಂದು ಮನಸ್ಸಿದೆ.. ಅವರಿಗೂ ಅವರದ್ದೇ ಆದ ಹಕ್ಕುಗಳಿದೆ.. ಅವರ ಜವಾಬ್ದಾರಿಯನ್ನು ನಿರ್ವಹಿಸಲು ಸ್ವಾತಂತ್ರ್ಯವಿದೆ.. ಅವರ ಬದುಕಿನ ಕಷ್ಟಗಳ ನಿವಾರಣೆಗೆ ಕೇವಲ ಅವರೊಬ್ಬರೆ ಹೋರಾಡಬೇಕಿಲ್ಲ ಎಂಬುದನ್ನು ಸಮಾಜ ಅರಿತುಕೊಂಡರೆ ಆಧುನಿಕ ಸಮಾಜದ ಪುರುಷ ಸರಿಯಾದ ಉಸಿರಾಟ ಮಾಡಲು ಸಾಧ್ಯ.