1985ರವರೆಗೂ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಅವರ ಗಡ್ಡದಷ್ಟೇ ಆಪ್ತವಾದುದು ಸಿಗಾರ್. ಆದರೆ, ಸಿಗಾರ್'ನಿಂದ ಆರೋಗ್ಯಕ್ಕೆ ಹಾನಿಕರ ಎಂದು ಜ್ಞಾನೋದಯವಾಯಿತು. ಸಿಗಾರ್'ನಿಂದ ನೀವು ಮಾಡುವ ಅತ್ಯುತ್ತಮ ಕೆಲಸವೆಂದರೆ ಅದನ್ನು ನಿಮ್ಮ ವೈರಿಗೆ ನೀಡುವುದು ಎಂದು ಅವರು ಆಗಾಗ ಹೇಳುತ್ತಿದ್ದರು.

ನವದೆಹಲಿ: ಜಗತ್ತು ಕಂಡ ಅತ್ಯಂತ ಪ್ರಭಾವಿ ವ್ಯಕ್ತಿತ್ವಗಳಲ್ಲಿ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಕೂಡ ಒಬ್ಬರು. ನ. 26ರಂದು ವಿಧಿವಶರಾದ ಕ್ಯಾಸ್ಟ್ರೋ ಅಪರಿಮಿತ ಧೈರ್ಯ ಮತ್ತು ನಿಷ್ಠುರತೆಗೆ ಹೆಸರಾಗಿದ್ದವು. ಕ್ಯಾಸ್ಟ್ರೋ ಬಗ್ಗೆ ಒಂದಷ್ಟು ವಿಚಾರಗಳು ಇಲ್ಲಿವೆ.

* 1959ರಿಂದ 2008ರವರೆಗೆ ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ವಿಶ್ವದಲ್ಲಿ ಅತೀ ಹೆಚ್ಚು ಕಾಲ ಆಡಳಿತ ನಡೆಸಿದವರ ಪೈಕಿ ಕ್ಯಾಸ್ಟ್ರೋಗೆ ಮೂರನೇ ಸ್ಥಾನವಿದೆ.

* ಸುದೀರ್ಘ ಭಾಷಣಕ್ಕೆ ಅವರು ಖ್ಯಾತಿ. ವಿಶ್ವ ಸಂಸ್ಥೆಯಲ್ಲಿ 1960ರ ಸೆ.26ರಂದು ಅವರು 4ಗಂಟೆ 29 ನಿಮಿಷ ಭಾಷಣ ಮಾಡಿದ್ದರು. ವಿಶ್ವಸಂಸ್ಥೆಯ ಇತಿಹಾಸದಲ್ಲೇ ಇದು ಸುದೀರ್ಘ ಭಾಷಣ ಎಂಬ ದಾಖಲೆ ದಾಖಲಾಗಿದೆ. 1998ರಲ್ಲಿ ಅವರು ಐದನೇ ಬಾರಿ ಕ್ಯೂಬಾ ಅಧ್ಯಕ್ಷರಾಗಿ ಆಯ್ಕೆಯಾದಾಗ ಸಂಸತ್'ನಲ್ಲಿ ಅವರು ಬರೋಬ್ಬರಿ ಏಳೂವರೆ ಗಂಟೆ ಕಾಲ ಭಾಷಣ ಮಾಡಿದ್ದರು.

* ಫಿಡೆಲ್ ಕ್ಯಾಸ್ಟ್ರೋ ಅವರ ಮೇಲೆ 634 ಕೊಲೆಯತ್ನಗಳಾಗಿವೆಯಂತೆ. ವಿಷದ ಮಾತ್ರಗಳು, ವಿಷದ ಸಿಗಾರ್, ರಾಸಾಯನಿಕ ಮಿಶ್ರಿತ ಡೈವಿಂಗ್ ಧಿರಿಸು ಇತ್ಯಾದಿ ವಿಧಾನಗಳಲ್ಲಿ ಅವರನ್ನು ಕೊಲ್ಲಲು ಪಿತೂರಿಗಳು ನಡೆದಿದ್ದವಂತೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯಿಂದಲೇ ತನ್ನನ್ನು ಕೊಲ್ಲುವ ಯತ್ನ ಹಲವು ಬಾರಿ ನಡೆದಿದೆ ಎಂದು ಕ್ಯಾಸ್ಟ್ರೋ ಅವರೇ ಸ್ವತಃ ಹೇಳಿಕೊಂಡಿದ್ದರು.

* ಕ್ಯಾಸ್ಟ್ರೋ ಅವರ ಪ್ರಮುಖ ದೈಹಿಕ ವಿಶೇಷಣವೆಂದರೆ ಅವರ ಗಡ್ಡವೇ. ಇಂಥ ಈ ದಾಡಿಯನ್ನೇ ಇಲ್ಲವಾಗಿಸಿಬಿಟ್ಟರೆ ಅವರ ಇಮೇಜ್ ಕಳೆಗುಂದಿಬಿಡಬಹುದೆಂಬುದು ಆಲೋಚನೆ ಅವರ ವಿರೋಧಿಗಳದ್ದು. ಹೀಗಾಗಿ, ಅವರ ಗಡ್ಡ ಸಂಪೂರ್ಣ ಉದುರಿಹೋಗಲೆಂಬ ಕಾರಣಕ್ಕೆ ಅವರಿಗೆ ಪೌಡರ್ ಕೊಡಲಾಗಿತ್ತಂತೆ. ಆದರೆ, ಅದು ವರ್ಕೌಟ್ ಆಗಲಿಲ್ಲ.

* ಫಿಡೆಲ್ ಕ್ಯಾಸ್ಟ್ರೋ ಮಾರ್ಕ್ಸ್'ವಾದಿ-ಲೆನಿನ್'ವಾದಿ ಕಮ್ಯೂನಿಸ್ಟ್ ನೇತಾರ. ಕ್ಯೂಬಾದ ಮಗ್ಗುಲಿನಲ್ಲಿ ಇರುವುದು ಅಮೆರಿಕದಂಥ ದೈತ್ಯ ಹಾಗೂ ಪ್ರಬಲ ರಾಷ್ಟ್ರ. ಕ್ಯೂಬಾವನ್ನು ಮುರಿದುಮುಕ್ಕಲು ಅಮೆರಿಕ ನಿರಂತರವಾಗಿ ಯತ್ನಿಸಿದೆ. ಆರ್ಥಿಕ ದಿಗ್ಬಂಧನ ಹಾಕಿ ಕ್ಯೂಬಾವನ್ನು ಜರ್ಝರಿತಗೊಳಿಸುವ ಪ್ರಯತ್ನ ನಡೆದಿದೆ. ಐದು ದಶಕಗಳ ಕಾಲ ಎಲ್ಲ ಕಷ್ಟ, ಅನಿಷ್ಟಗಳನ್ನು ಸಹಿಸಿಕೊಂಡು ಕ್ಯೂಬಾದ ಆಡಳಿತವನ್ನು ಐದು ದಶಕಗಳ ಕಾಲ ಮಾಡಿದ ಹೆಗ್ಗಳಿಗೆ ಕ್ಯಾಸ್ಟ್ರೋ ಅವರದ್ದು.

* 1985ರವರೆಗೂ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಅವರ ಗಡ್ಡದಷ್ಟೇ ಆಪ್ತವಾದುದು ಸಿಗಾರ್. ಆದರೆ, ಸಿಗಾರ್'ನಿಂದ ಆರೋಗ್ಯಕ್ಕೆ ಹಾನಿಕರ ಎಂದು ಜ್ಞಾನೋದಯವಾಯಿತು. ಸಿಗಾರ್'ನಿಂದ ನೀವು ಮಾಡುವ ಅತ್ಯುತ್ತಮ ಕೆಲಸವೆಂದರೆ ಅದನ್ನು ನಿಮ್ಮ ವೈರಿಗೆ ನೀಡುವುದು ಎಂದು ಅವರು ಆಗಾಗ ಹೇಳುತ್ತಿದ್ದರು.

* 2012ರಲ್ಲಿ ಟೈಮ್ ಮ್ಯಾಗಜಿನ್ ಪತ್ರಿಕೆಯು ಪ್ರಕಟಿಸಿದ ಸಾರ್ವಕಾಲಿಕ 100 ಅತೀ ಹೆಚ್ಚು ಪ್ರಭಾವಿ ವ್ಯಕ್ತಿತ್ವಗಳ ಪಟ್ಟಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಅವರನ್ನೂ ಒಳಗೊಳ್ಳಲಾಗಿದೆ.