ನವದೆಹಲಿ(ಡಿ.29): ‘ಕಾಶ್ಮೀರವನ್ನು ಭಾರತದ ಕಪಿಮುಷ್ಟಿ ಯಿಂದ ವಿಮೋಚನೆಗೊಳಿಸಲು ಕೋಲ್ಕತಾ,ಬೆಂಗಳೂರು ಹಾಗೂ ನವದೆಹಲಿಯ ಮೇಲೆ ಯುದ್ಧ ಸಾರಿ’ ಎಂದು ಅಲ್ ಖೈದಾ ಭಾರತ ಉಪಖಂಡ ಸಂಘಟನೆಯ ಹೆಸರಿನಲ್ಲಿ ವಿಡಿಯೋವೊಂದು ಬಿಡುಗಡೆಯಾಗಿದೆ.

ಈ ಸಂಘಟನೆಯ ಭಾರತ ಉಪಖಂಡದ ನಾಯಕ ಉಸಾಮಾ ಮೆಹಮೂದ್ ಎಂಬಾತ ವಿಡಿಯೋ ಬಿಡುಗಡೆ ಮಾಡಿದ್ದು, ಈ ಮೇಲ್ಕಾಣಿಸಿದ ನಗರಗಳ ಮೇಲೆ ದಾಳಿ ಮಾಡುವಂತೆ ಕರೆ ನೀಡಿದ್ದಾನೆ. ‘ಆದರೆ ವಿಡಿಯೋದಲ್ಲಿ ಹುರುಳಿಲ್ಲ. ಈ ಹಿಂದಿನ ಹಳೆಯ ಬೆದರಿಕೆಯನ್ನೇ ಪುನರಾವರ್ತಿಸಿ ಸುಮ್ಮನೇ ಭಯ ಹುಟ್ಟಿಸಲಾಗುತ್ತಿದೆ. ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ. ಈವರೆಗೂ ವಿಡಿಯೋದಲ್ಲಿ ಹೆಸರಿಸಿರುವ ಯಾವ ನಗರಗಳಿಗೂ ಈ ಬಗ್ಗೆ ಸಲಹಾ ಮಾರ್ಗದರ್ಶಿಗಳನ್ನು ನೀಡಿಲ್ಲ’ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.