ಲಂಚ ಸ್ವೀಕಾರ ಮಾಡುವಾದ ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್‌ ಹಾಗೂ ಅವರ ಮಧ್ಯವರ್ತಿ ಕಾನ್‌ಸ್ಟೇಬಲ್‌ ಸೇರಿ ಮೂವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೇಸ್ ದಾಖಲಿಸುವುದಾಗಿ ಬೆದರಿಸಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. 

ಬೆಂಗಳೂರು :  ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಸ್ನೂಕರ್‌ ಅಕಾಡೆಮಿ ಮಾಲಿಕರೊಬ್ಬರಿಂದ .30 ಸಾವಿರ ‘ಮಂತ್ಲಿ’ ಪಡೆಯುವಾಗ ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್‌ ಹಾಗೂ ಅವರ ಮಧ್ಯವರ್ತಿ ಕಾನ್‌ಸ್ಟೇಬಲ್‌ ಸೇರಿ ಮೂವರು ಎಸಿಬಿ ಬಲೆಗೆ ಶನಿವಾರ ಬಿದ್ದಿದ್ದಾರೆ.

ಇನ್ಸ್‌ಪೆಕ್ಟರ್‌ ಜಿ.ಎಚ್‌.ಮುನಿಕೃಷ್ಣ, ಕಾನ್‌ಸ್ಟೇಬಲ್‌ ಉಮೇಶ್‌ ಹಾಗೂ ಮಧ್ಯವರ್ತಿ ಅಶ್ರಫ್‌ ಬಂಧಿತರಾಗಿದ್ದು, ಈ ಬಗ್ಗೆ ಎಸಿಬಿಗೆ ಸ್ನೂಕರ್‌ ಕ್ಲಬ್‌ ಮಾಲಿಕ ಸೈಯದ್‌ ಇಸ್ಮಾಯಿಲ್‌ ದೂರು ಕೊಟ್ಟಿದ್ದರು. ಅದರನ್ವಯ ಕಾರ್ಯಾಚರಣೆಗಿಳಿದ ಎಸಿಬಿ ಅಧಿಕಾರಿಗಳು, ಠಾಣೆಯಲ್ಲಿ ಸೈಯದ್‌ ಅವರಿಂದ .30 ಸಾವಿರ ಹಣವನ್ನು ಇನ್ಸ್‌ಪೆಕ್ಟರ್‌ ಪರವಾಗಿ ಉಮೇಶ್‌ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಣಸವಾಡಿ ಸಮೀಪ ಸ್ನೂಕರ್‌ ಅಕಾಡೆಮಿ ಸೈಯದ್‌ ನಡೆಸುತ್ತಿದ್ದು, ಪ್ರತಿ ತಿಂಗಳು ಇಂತಿಷ್ಟುಮಾಮೂಲಿ ಕೊಡುವಂತೆ ಅವರಿಗೆ ಇನ್ಸ್‌ಪೆಕ್ಟರ್‌ ಮುನಿಕೃಷ್ಣ ತಾಕೀತು ಮಾಡಿದ್ದರು. ಅಲ್ಲದೆ, ನಿನ್ನ ಮೇಲೆ ಠಾಣೆಯಲ್ಲಿ ದಾಖಲಾಗಿರುವ ಹಳೆ ಪ್ರಕರಣಗಳ ತನಿಖೆಯಲ್ಲಿ ಸಹಕರಿಸುವುದಾಗಿ ಕ್ಲಬ್‌ ಮುಖ್ಯಸ್ಥರಿಗೆ ಇನ್ಸ್‌ಪೆಕ್ಟರ್‌ ಭರವಸೆ ನೀಡಿದ್ದರು. ಹೀಗೆ ಬೆದರಿಸಿ ಕೆಲ ತಿಂಗಳು ಆರೋಪಿಗಳು ಮಂತ್ಲಿ ವಸೂಲಿ ಮಾಡಿದ್ದರು. ಆದರೆ ಮೂರು ತಿಂಗಳಿಂದ .80 ಸಾವಿರ ಮಂತ್ಲಿ ಸಂದಾಯವಾಗಿರಲಿಲ್ಲ. ಇದರಿಂದ ಕೆರಳಿದ ಇನ್ಸ್‌ಪೆಕ್ಟರ್‌, ನೀನು ಹಣ ಕೊಡದೆ ಹೋದರೆ ಅಕ್ರಮವಾಗಿ ಚಟುವಟಿಕೆ ನಡೆದಿದೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಧಮಕಿ ಹಾಕಿದ್ದರು ಎನ್ನಲಾಗಿದೆ.

ಹಣಕ್ಕಾಗಿ ಪೊಲೀಸರ ಒತ್ತಡದಿಂದ ಬೇಸತ್ತ ಸೈಯದ್‌, ಈ ಬಗ್ಗೆ ಶನಿವಾರ ಎಸಿಬಿಯಲ್ಲಿ ದೂರು ಕೊಟ್ಟಿದ್ದರು. ಅದರನ್ವಯ ಭ್ರಷ್ಟಾಚಾರ ಆರೋಪದಡಿ ಎಫ್‌ಐಆರ್‌ ದಾಖಲಿಸಿದ ಎಸಿಬಿ ಅಧಿಕಾರಿಗಳು, ಆರೋಪಿಗಳ ರೆಡ್‌ಹ್ಯಾಂಡ್‌ ಸಮೇತ ಬಲೆಗೆ ಬೀಳಿಸಲು ದೂರುದಾರರ ಜತೆ ಮಾರುವೇಷದಲ್ಲಿ ಕಾರ್ಯಾಚರಣೆಗಿಳಿದರು. ಮಧ್ಯಾಹ್ನ ಇನ್ಸ್‌ಪೆಕ್ಟರ್‌ ಪರವಾಗಿ ಹಣ ಪಡೆಯುವಾಗ ಉಮೇಶ್‌ ಬಲೆಗೆ ಬಿದ್ದಿದ್ದಾನೆ. ಈ ವಸೂಲಿ ಕೃತ್ಯದಲ್ಲಿ ಇನ್ಸ್‌ಪೆಕ್ಟರ್‌ ಮಧ್ಯವರ್ತಿಗಳಾಗಿ ಕಾನ್‌ಸ್ಟೇಬಲ್‌ ಉಮೇಶ್‌ ಮತ್ತು ಖಾಸಗಿ ವ್ಯಕ್ತಿ ಅಶ್ರಫ್‌ ಕೆಲಸ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.