ನವದೆಹಲಿ :  ಭಾರತದ ಸಂಪೂರ್ಣ ಸ್ವದೇಶೀ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿಯಾದ ‘ಐಎನ್‌ಎಸ್‌ ಅರಿಹಂತ್‌’ ತನ್ನ ಪ್ರಪ್ರಥಮ ‘ದಾಳಿ ತಡೆ ಗಸ್ತು’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಇತ್ತೀಚೆಗೆ ಪೂರ್ಣಗೊಳಿಸಿದೆ. ಈ ಮೂಲಕ 6 ಸಾವಿರ ಟನ್‌ ಭಾರದ ಇಂಥ ಅತ್ಯಾಧುನಿಕ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸುವ, ನಿರ್ಮಿಸುವ ಹಾಗೂ ಕಾರ್ಯಾಚರಣೆಗೆ ಒಳಪಡಿಸುವ ಸಾಮರ್ಥ್ಯವುಳ್ಳ ಬೆರಳೆಣಿಕೆಯಷ್ಟು ದೇಶಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ.

ಈವರೆಗೆ ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ ಹಾಗೂ ಬ್ರಿಟನ್‌- ಈ ಸಾಮರ್ಥ್ಯವನ್ನು ಹೊಂದಿದ ದೇಶಗಳಾಗಿದ್ದವು. ಈಗ ಭಾರತ ಕೂಡ ಈ ‘ಬಿಗ್‌-5’ ದೇಶಗಳ ಪಟ್ಟಿಗೆ ಸೇರಿಕೊಂಡಿದ್ದು ವಿಶೇಷ. 700 ಕಿ.ಮೀ.ನಿಂದ ಹಿಡಿದು 3,500 ಕಿ.ಮೀ. ದೂರದವರೆಗಿನ ಕ್ಷಿಪಣಿಗಳನ್ನು ಹಾರಿಸಬಲ್ಲ ಹಾಗೂ ಶತ್ರು ಕ್ಷಿಪಣಿಗಳನ್ನು ರಹಸ್ಯವಾಗಿ ಸಮುದ್ರದಾಳದಲ್ಲಿ ಕುಳಿತು ನಾಶಪಡಿಸುವ ಸಾಮರ್ಥ್ಯ ‘ಅರಿಹಂತ್‌’ (ಕನ್ನಡದಲ್ಲಿ ಶತ್ರುನಾಶಕ ಎಂದರ್ಥ) ಜಲಾಂತರ್ಗಾಮಿಗೆ ಇದೆ.

3 ದಶಕಗಳಿಂದ ಐಎನ್‌ಎಸ್‌ ಅರಿಹಂತ್‌ ಜಲಾಂತರ್ಗಾಮಿಯ ನಿರ್ಮಾಣ ಪ್ರಕ್ರಿಯೆ ಸಾಗಿದ್ದು, ಯುಪಿಎ-2 2016ರಲ್ಲಿ ಇದನ್ನು ಮೊದಲ ಬಾರಿ ರಕ್ಷಣಾ ಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತಾದರೂ ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ ಈಗ ‘ದಾಳಿ ತಡೆ ಗಸ್ತು’ ಯಶಸ್ವಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್‌ಗಳಲ್ಲಿ ಇದು ಭಾರತದ ರಕ್ಷಣಾ ಬಲಕ್ಕೆ ಯಶಸ್ವಿಯಾಗಿ ಸೇರಿಕೊಂಡ ವಿಚಾರವನ್ನು ಬಹಿರಂಗಗೊಳಿಸಿದರು.

‘ಧನ ತ್ರಯೋದಶಿಯು (ದೀಪಾವಳಿಯ ಮೊದಲ ದಿನ) ಈ ಸಲ ಅತಿ ವಿಶೇಷವಾಗಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಭಾರತದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟರ್‌ನಲ್ಲಿ ಘೋಷಿಸಿದರು. ಇದಲ್ಲದೆ, ‘ಭಾರತದ ಅಣ್ವಸ್ತ್ರ ಬ್ಲ್ಯಾಕ್‌ಮೇಲರ್‌ಗಳಿಗೆ ಇದೊಂದು ದಿಟ್ಟಪ್ರತಿಕ್ರಿಯೆ’ ಎನ್ನುವ ಮೂಲಕ ಅಣ್ವಸ್ತ್ರ ಬೆದರಿಕೆ ಹಾಕುವ ಪಾಕಿಸ್ತಾನ ಹಾಗೂ ಇತರ ಕೆಲವು ದೇಶಗಳಿಗೆ ಮೋದಿ ತೀಕ್ಷ$್ಣ ಎಚ್ಚರಿಕೆ ನೀಡಿದರು.

ಐಎನ್‌ಎಸ್‌ ಅರಿಹಂತ್‌ ಜಲಾಂತರ್ಗಾಮಿಯ ‘ದಾಳಿ ಗಸ್ತು ತಡೆ’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯನ್ನು ದಿಲ್ಲಿಯ ತಮ್ಮ ನಿವಾಸಕ್ಕೆ ಬರಮಾಡಿಕೊಂಡ ಮೋದಿ ಅವರಿಗೆ ಸತ್ಕಾರ ನೀಡಿದರು. ಬಳಿಕ ಸರಣಿ ಟ್ವೀಟ್‌ಗಳಲ್ಲಿ ಜಲಾಂತರ್ಗಾಮಿಯ ಯಶಸ್ವಿ ಪರೀಕ್ಷೆ ಹಾಗೂ ಅದರಿಂದ ಭಾರತಕ್ಕೆ ಆಗುವ ಪ್ರಯೋಜನಗಳನ್ನು ಸರಣಿ ಟ್ವೀಟ್‌ಗಳಲ್ಲಿ ಮೋದಿ ಬಿಚ್ಚಿಟ್ಟರು.

‘ಭಾರತದ ಹೆಮ್ಮೆಯಾದ ಐಎನ್‌ಎಸ್‌ ಅರಿಹಂತ್‌ ಸಬ್‌ಮರೀನ್‌ ಯಶಸ್ವಿಯಾಗಿ ದಾಳಿ ತಡೆ ಗಸ್ತನ್ನು ಇತ್ತೀಚೆಗೆ ಪೂರೈಸಿದೆ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಅರಿಹಂತ್‌ ಸಿಬ್ಬಂದಿಗೆ ಕೃತಜ್ಞತೆ. ನಿಮ್ಮನ್ನು ನಮ್ಮ ಇತಿಹಾಸ ಯಾವತ್ತೂ ಮರೆಯಲ್ಲ’ ಎಂದು ಮೋದಿ ಹೇಳಿದರು.

‘ಐಎನ್‌ಎಸ್‌ ಅರಿಹಂತ್‌ ಬಾಹ್ಯ ಬೆದರಿಕೆಗಳಿಂದ ದೇಶವನ್ನು ರಕ್ಷಿಸುವಲ್ಲಿ ನೆರವಾಗಲಿದೆ. ಜತೆಗೆ ಪ್ರಾದೇಶಿಕ ಶಾಂತಿ ಸ್ಥಾಪನೆಗೆ ನೆರವಾಗಲಿದೆ. ಈ ವಿದ್ಯಮಾನವು ದೇಶದ ದೊಡ್ಡ ಸಾಧನೆ.ಪ್ರಸಕ್ತ ಯುಗದಲ್ಲಿ ಇಂಥ ವಿಶ್ವಾಸಾರ್ಹ ಅಣ್ವಸ್ತ್ರ ತಡೆ ಅತ್ಯಾವಶ್ಯಕ. ಅಣ್ವಸ್ತ್ರ ಬ್ಲ್ಯಾಕ್‌ಮೇಲ್‌ನಲ್ಲಿ ತೊಡಗಿರುವವರಿಗೆ ಐಎನ್‌ಎಸ್‌ ಅರಿಹಂತ್‌ ಒಂದು ದಿಟ್ಟಉತ್ತರ. ಧನತ್ರಯೋದಶಿಯಂದು ಭಾರತಕ್ಕೆ ವಿಶೇಷ ಕೊಡುಗೆ ದೊರಕಿದೆ’ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಕೊಂಡಾಡಿದರು.

ಜಲಾಂತರ್ಗಾಮಿಯಿಂದ ಹಾರಿಸಲಾಗುವ ಬಾಬರ್‌ ಕ್ಷಿಪಣಿಯನ್ನು ಇತ್ತೀಚೆಗೆ ಪಾಕಿಸ್ತಾನ ಪರೀಕ್ಷಿಸಿತ್ತು. ಇನ್ನು 2015ರಲ್ಲೇ ಚೀನಾ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ತನ್ನ ರಕ್ಷಣಾಪಡೆಗೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಭಾರತದ ಪ್ರಧಾನಮಂತ್ರಿಗಳು ‘ಬ್ಲ್ಯಾಕ್‌ಮೇಲ್‌’ ಪದ ಬಳಸಿ ಎಚ್ಚರಿಕೆ ನೀಡಿರುವುದು ಗಮನಾರ್ಹ.

ಅಣ್ವಸ್ತ್ರ ಜಲಾಂತರ್ಗಾಮಿಯ ವಿಶೇಷತೆ

ಅಣ್ವಸ್ತ್ರ ಜಲಾಂತರ್ಗಾಮಿಯು ದೇಶದ ರಣನೀತಿಯ ಪ್ರಮುಖ ಅಸ್ತ್ರವಾಗಿದ್ದು, ಶತ್ರು ದೇಶಗಳು ನಡೆಸುವ ಕ್ಷಿಪಣಿ ದಾಳಿಯನ್ನು ಸಮುದ್ರದ ಒಳಗಿನಿಂದಲೇ ಪತ್ತೆ ಮಾಡುತ್ತದೆ. ಬಹುಕಾಲದವರೆಗೆ ಸಮುದ್ರದಾಳದಲ್ಲಿ ಇದು ಎಲ್ಲಿ ಅಡಗಿದೆ ಎಂಬುದನ್ನು ಶತ್ರುಗಳಿಗೆ ಪತ್ತೆ ಮಾಡಲೂ ಆಗದು. ವೈರಿ ದೇಶಗಳ ಸಮುದ್ರ ತಟದ ಬಹು ಸನಿಹಕ್ಕೆ ಯಾರಿಗೂ ಗೊತ್ತಾಗದ ಹಾಗೆ ಇದು ನುಸುಳಬಲ್ಲದು. ತಾನು ಹೊತ್ತು ತಂದ ಕ್ಷಿಪಣಿಗಳನ್ನು ಅವರ ಪ್ರದೇಶಕ್ಕೆ ಚಿಮ್ಮಿಸಬಲ್ಲದು. ಭೂಮಾರ್ಗದ ಮೂಲಕ ಚಿಮ್ಮಿಸಲು ಆಗದ ಕಮ್ಮಿ ದೂರದ ಕ್ಷಿಪಣಿಗಳನ್ನು ವೈರಿ ದೇಶದ ಸನಿಹಕ್ಕೆ ಒಯ್ದು, ಆ ದೇಶದ ಮೇಲೆ ದಾಳಿ ನಡೆಸುವ ಶಕ್ತಿ ಇದಕ್ಕಿದೆ. ಹೀಗಾಗಿ ವೈರಿಗಳನ್ನು ಹದ್ದುಬಸ್ತಿನಲ್ಲಿಡಲು ಭಾರತದ ಪಾಲಿಗೆ ‘ಐಎನ್‌ಎಸ್‌ ಅರಿಹಂತ್‌’ ಒಂದು ಪ್ರಮುಖ ಅಸ್ತ್ರ.

ಐಎನ್‌ಎಸ್‌ ಅರಿಹಂತ್‌ ಹಾದಿ

ವಿನ್ಯಾಸ: 1990ರ ದಶಕ

ಯೋಜನೆಗೆ ಅನುಮೋದನೆ: 1998

ನಿರ್ಮಾಣ ಆರಂಭ: 2009

ನಿರ್ಮಾಣ ಪೂರ್ಣ: 2013

ನೌಕಾಪಡೆಗೆ ಅಳವಡಿಕೆ: 2016

ದಾಳಿ ತಡೆ ಗಸ್ತು: 2018

ಐಎನ್‌ಎಸ್‌ ಅರಿಹಂತ್‌ ಬಾಹ್ಯ ಬೆದರಿಕೆಗಳಿಂದ ದೇಶ ರಕ್ಷಿಸಲು ನೆರವಾಗಲಿದೆ. ಜತೆಗೆ ಪ್ರಾದೇಶಿಕ ಶಾಂತಿ ಸ್ಥಾಪನೆಗೆ ನೆರವಾಗಲಿದೆ. ಈ ವಿದ್ಯಮಾನವು ದೇಶದ ದೊಡ್ಡ ಸಾಧನೆ. ಪ್ರಸಕ್ತ ಯುಗದಲ್ಲಿ ಇಂಥ ವಿಶ್ವಾಸಾರ್ಹ ಅಣ್ವಸ್ತ್ರ ತಡೆ ಅತ್ಯಾವಶ್ಯಕ. ಅಣ್ವಸ್ತ್ರ ಬ್ಲ್ಯಾಕ್‌ಮೇಲ್‌ನಲ್ಲಿ ತೊಡಗಿರುವವರಿಗೆ ಐಎನ್‌ಎಸ್‌ ಅರಿಹಂತ್‌ ಒಂದು ದಿಟ್ಟಉತ್ತರ.

- ನರೇಂದ್ರ ಮೋದಿ, ಪ್ರಧಾನ ಮಂತ್ರಿ