ನವದೆಹಲಿ(ಸೆ.30): ಭಾರತೀಯ ಯೋಧರ ಕಾರ್ಯಾಚರಣೆ ಕುರಿತು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಜೈಶಂಕರ್ ಅವರು ಚೀನಾ, ಅಮೆರಿಕ, ರಷ್ಯಾ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳು ಸೇರಿ ಒಟ್ಟು 22 ದೇಶಗಳ ರಾಯಭಾರಿಗಳಿಗೆ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿದ್ಧವಾಗಿ ಕೂತಿದ್ದರು. ಈ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಈ ರೀತಿಯ ದಾಳಿ ಅನಿವಾರ್ಯವಾಗಿತ್ತು ಎಂದು ವಿದೇಶಿ ರಾಯಭಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಜತೆಗೆ, ಸದ್ಯ ಮತ್ತೆ ಈ ರೀತಿಯ ದಾಳಿ ನಡೆಸುವ ಉದ್ದೇಶ ಸೇನೆಗೆ ಇಲ್ಲ ಎಂದೂ ಭಾರತ ಮಾಹಿತಿ ನೀಡಿದರು.
ಬಾಂಗ್ಲಾ ಬಹಿರಂಗ ಬೆಂಬಲ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ನಡೆಸಿದ ದಾಳಿಗೆ ವಿಶ್ವಾದ್ಯಂತ ಬೆಂಬಲ ವ್ಯಕ್ತವಾಗಿದೆ. ಮೊತ್ತ ಮೊದಲು ಭಾರತದ ದಾಳಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದು ನೆರೆಯ ಬಾಂಗ್ಲಾದೇಶ. ದೇಶದ ಭೂಭಾಗ ಹಾಗೂ ಸಾರ್ವಭೌಮತ್ವದ ಮೇಲಿನ ಯಾವುದೇ ದಾಳಿಗೆ ಪ್ರತಿಕ್ರಿಯೆ ನೀಡುವ ಅಕಾರ ಭಾರತಕ್ಕಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಈ ನಡುವೆ, ಚೀನಾ ಕೂಡ ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದು ಎರಡೂ ದೇಶಗಳ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನತೆ ಶಮನಗೊಳಿಸಲು ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಈ ನಡುವೆ, ಭಾರತ ನಡೆಸಿದ ದಾಳಿ ಕುರಿತು ಭಾರತ ಅಮೆರಿಕಕ್ಕೂ ಮಾಹಿತಿ ನೀಡಿತ್ತು. ಅಮೆರಿಕ ಪ್ರವಾಸದಲ್ಲೇ ಇರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ರಕ್ಷಣಾ ಸಲಹೆಗಾರ ಸುಸಾನ್ ರೈಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಉದ್ವಿಗ್ನ ಸ್ಥಿತಿ
ಭಾರತೀಯ ಯೋಧರ ದಾಳಿ ಬಳಿಕ ಪಾಕ್ ಗಡಿಯಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತವು ಪಾಕ್ ಗಡಿಗೆ ಹೊಂದಿಕೊಂಡಂತಿರುವ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗೂ ಗುಜರಾತ್‌ನ ಗಡಿ ಗ್ರಾಮಗಳಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಈ ಗ್ರಾಮಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಿಎಸ್‌ಎ್ ಯೋಧರಿಗೆ ಗಡಿಯಲ್ಲಿ ಕಟ್ಟೆಚ್ಚರದಿಂದಿರುವಂತೆ ಸೂಚಿಸಲಾಗಿದೆ. ಪಾಕಿಸ್ತಾನವು ಯಾವುದೇ ಕ್ಷಣದಲ್ಲೂ ತಿರುಗಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮೂರೂ ಪಡೆಗಳಿಗೆ ಸನ್ನದ್ಧವಾಗಿರುವಂತೆ ಆದೇಶಿಸಲಾಗಿದೆ.
