ನ್ಯೂಯಾರ್ಕ್[ಜ.17]: ಜಿಮ್‌ ಯೊಂಗ್‌ ಕಿಮ್‌ ಅವರ ರಾಜೀನಾಮೆಯಿಂದ ತೆರವಾಗುತ್ತಿರುವ ವಿಶ್ವಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಪೆಪ್ಸಿಕೋ ಕಂಪನಿಯ ಮಾಜಿ ಮುಖ್ಯಸ್ಥೆ ಹಾಗೂ ಕರ್ನಾಟಕದ ಸೊಸೆ ಇಂದ್ರಾ ನೂಯಿ ಹೆಸರನ್ನು ಅಮೆರಿಕ ಗಂಭೀರವಾಗಿ ಪರಿಗಣಿಸುತ್ತಿದೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಿರಿಯ ಮಗಳು ಇವಾಂಕಾ ಅವರದ್ದೂ ಸೇರಿದಂತೆ ಅನೇಕ ಹೆಸರುಗಳು ವಿಶ್ವ ಬ್ಯಾಂಕ್‌ನ ಉನ್ನತ ಹುದ್ದೆಗೆ ಕೇಳಿಬಂದಿದ್ದವು. ಆದರೆ ಇದೀಗ ಇಂದ್ರಾ ನೂಯಿ ಪರವಾಗಿ ಇವಾಂಕಾ ಅವರೇ ಲಾಬಿ ಆರಂಭಿಸಿದ್ದಾರೆ ಎಂದು ಅಮೆರಿಕದ ‘ದ ನ್ಯೂಯಾರ್ಕ್ ಟೈಮ್ಸ್‌’ ವರದಿ ಮಾಡಿದೆ.

ಹೆಸರಿಗೆ ‘ವಿಶ್ವ ಬ್ಯಾಂಕ್‌’ ಎಂಬ ಹೆಸರು ಇದ್ದರೂ, ಆ ಬ್ಯಾಂಕಿನ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಅಮೆರಿಕ ನಿರ್ಧರಿಸುತ್ತದೆ. ಸಾಂಪ್ರದಾಯಿಕವಾಗಿ ಅಮೆರಿಕ ಪ್ರಜೆಗಳೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಉಳಿದೆಲ್ಲಾ ದೇಶಗಳಿಗಿಂತ ವಿಶ್ವ ಬ್ಯಾಂಕ್‌ನಲ್ಲಿ ಅಮೆರಿಕದ ಪಾಲು ಹೆಚ್ಚಿನ ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣ.

ಇಂದ್ರಾ ನೂಯಿ ತಮಿಳುನಾಡು ಮೂಲದವರು. ಆದರೆ ಅವರ ಪತಿ ರಾಜ್‌ ಕಿಶನ್‌ ನೂಯಿ ಅವರು ಮಂಗಳೂರು ಬಳಿಯ ಗುರುಪುರ ಸಮೀಪದ ನೂಯಿಯವರು. ಮೈಸೂರು ವಿವಿಯಲ್ಲಿ ಓದಿದವರು. ಫೆ.1ರಿಂದ ಅನ್ವಯವಾಗುವಂತೆ ಹಾಲಿ ಅಧ್ಯಕ್ಷ ಜಿಮ್‌ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.