ಜಕಾರ್ತಾ(ಆ.21): ಮಸೀದಿಯ ಧ್ವನಿವರ್ಧಕದಿಂದ ತನಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದ ಮಹಿಳೆಯೊಬ್ಬಳಿಗೆ ದೈವನಿಂದನೆ ಆರೋಪದಲ್ಲಿ ಇಂಡೋನೇಷ್ಯಾ ಕೋರ್ಟ್‌ 18 ತಿಂಗಳ ಜೈಲುವಾಸ ವಿಧಿಸಿದೆ. 

ಚೀನಾ ಮೂಲದ ಮಹಿಳೆ ಮೀಲಿಯಾನಾ ಎಂಬಾಕೆ ತನ್ನ ಮನೆ ಪಕ್ಕದಲ್ಲಿರುವ ಮಸೀದಿಯ ಧ್ವನಿವರ್ಧಕದಿಂದ ತುಂಬ ತೊಂದರೆಯಾಗುತ್ತಿದ್ದು, ಧ್ವನಿವರ್ಧಕ ತೆಗೆಯುವಂತೆ ಕೋರಿದ್ದಳು. 

ಈ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆದು ಮೀಲಿಯಾನಾ ಧರ್ಮ ನಿಂದನೆ ಮಾಡಿದ್ದಾಳೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅಲ್ಲದೇ ಮೀಲಿಯಾನಾಳಿಗೆ 18 ತಿಂಗಳ ಜೈಲುವಾಸದ ಶಿಕ್ಷೆ ಕೂಡ ಪ್ರಕಟಿಸಿದರು.

ನ್ಯಾಯಾಧೀಶ ವಾಹ್ಯು ಪ್ರಸೆತ್ಯೊ ವಿಬೊವೊ ತೀರ್ಪು ಪ್ರಕಟಿಸುತ್ತಿದ್ದಂತೆ ಮೀಲಿಯಾನಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಬಳಿಕ ಆಕೆಯ ಕೈಗಳಿಗೆ ಕೋಳ ತೊಡಿಸಿ ಜೈಲಿಗೆ ಕೊಂಡೊಯ್ಯಲಾಯಿತು. 44 ವರ್ಷದ ಮೀಲಿಯಾನಾ ದೈವ ನಿಂದನೆ ಮಾಡುವ ಮೂಲಕ ಇಸ್ಲಾಂ ವಿರುದ್ಧ ಅಪರಾಧವೆಸಗಿದ್ದಾಳೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. 

ಮಸೀದಿಗಳ ಧ್ವನಿವರ್ಧಕಗಳಿಂದ ತನಗೆ ತೊಂದರೆಯಾಗುತ್ತಿದೆ ಎಂದು ಮೀಲಿಯಾನಾ ದೂರು ನೀಡಿದ ಹಿನ್ನೆಲೆಯಲ್ಲಿ 2016ರ ಜುಲೈನಲ್ಲಿ ಸುಮಾತ್ರಾದ ಬಂದರು ಪಟ್ಟಣ ತಂಜುಂಗ್‌ ಬಲಾಯ್‌ನಲ್ಲಿ 14 ಬೌದ್ಧ ಮಂದಿರಗಳನ್ನು ಉದ್ರಿಕ್ತ ಗುಂಪುಗಳು ಸುಟ್ಟು ಹಾಕಿದ್ದವು.