ಇನ್ನು ಮುಂದೆ ರಾಜಧಾನಿ ನಾಗರಿಕರಿಗೆ ಈ ರೀತಿ ಯಾವುದೇ ಕಿರಿಕಿರಿ ಇಲ್ಲ. ಕ್ಷಣಾರ್ಧದಲ್ಲಿ ಅವರ ಸಂಚಾರ ಸಮಸ್ಯೆ ಪರಿಹಾರವಾಗಲಿದೆ. ಅದೂ ವಾಟ್ಸಪ್ ಗ್ರೂಪ್‌'ನಿಂದ. ವಿಶೇಷ ಅಂದರೆ ಇಂತಹದೊಂದು ಐಡಿಯಾ ನೀಡಿದ್ದು ಇಂದಿರಾ ನಗರ ನಾಗರಿಕ ಸಮಿತಿ.

ಬೆಂಗಳೂರು (ನ.20) : ನಿಮ್ಮ ಏರಿಯಾದಲ್ಲಿ ಸಂಚಾರ ವ್ಯವಸ್ಥೆ ಸಮಸ್ಯೆ ಇದೆಯೇ? ಆ ಬಗ್ಗೆ ಪೊಲೀಸರಿಗೆ ಹೇಳಿದ್ರು ಸಮಸ್ಯೆ ಬಗೆಹರಿದಿಲ್ವೇ ಅಥವಾ ಪೊಲೀಸರಿಗೆ ಹೇಳೋದು ಹೇಗೆ ಗೊತ್ತಾಗುತ್ತಿಲ್ಲವೇ..?

ಇನ್ನು ಮುಂದೆ ರಾಜಧಾನಿ ನಾಗರಿಕರಿಗೆ ಈ ರೀತಿ ಯಾವುದೇ ಕಿರಿಕಿರಿ ಇಲ್ಲ. ಕ್ಷಣಾರ್ಧದಲ್ಲಿ ಅವರ ಸಂಚಾರ ಸಮಸ್ಯೆ ಪರಿಹಾರವಾಗಲಿದೆ. ಅದೂ ವಾಟ್ಸಪ್ ಗ್ರೂಪ್‌'ನಿಂದ. ವಿಶೇಷ ಅಂದರೆ ಇಂತಹದೊಂದು ಐಡಿಯಾ ನೀಡಿದ್ದು ಇಂದಿರಾ ನಗರ ನಾಗರಿಕ ಸಮಿತಿ. ನಗರ ವ್ಯಾಪ್ತಿಯ ಸುಗಮ ಸಂಚಾರ ಹಾಗೂ ನಾಗರಿಕರಲ್ಲಿ ಸಂಚಾರ ಶಿಸ್ತು ರೂಪಿಸಲು ಮುಂದಾಗಿರುವ ಪೊಲೀಸರು, ಆ ನಿಟ್ಟಿನಲ್ಲಿ ಅಡಿ ಇಟ್ಟಿರುವ ಮತ್ತೊಂದು ನೂತನ ಹೆಜ್ಜೆ ಇದಾಗಿದೆ. ಈಗಿನ ಅಧುನಿಕ ಯುಗದ ಪರಿಣಾಮಕಾರಿ ಸಂವಹನ ಮಾಧ್ಯಮವಾಗಿರುವ ‘ವಾಟ್ಸಪ್’ಅನ್ನೇ ಸಂಚಾರ ಸಮಸ್ಯೆಗೆ ಪರಿಹಾರಾಸ್ತ್ರವಾಗಿ ಪೊಲೀಸರು ಪ್ರಯೋಗಿಸಿದ್ದಾರೆ.

ಈಗಾಗಲೇ ಇಂದಿರಾ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯ ನಾಗರಿಕ ಸಮಿತಿ ಹಾಗೂ ಪೊಲೀಸರ ವಾಟ್ಸಪ್ ಗ್ರೂಪ್ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು, ಹಂತ ಹಂತವಾಗಿ ವಾಟ್ಸಪ್ ಗ್ರೂಪ್‌'ಗಳು ನಗರ ಎಲ್ಲ ಸಂಚಾರ ಠಾಣೆಗಳಲ್ಲೂ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೇಗೆ ಗ್ರೂಪ್?: ಸಾರ್ವಜನಿಕರು ಅಥವಾ ಸ್ಥಳೀಯ ನಾಗರಿಕ ಸಮಿತಿ ಸದಸ್ಯರು, ತಮ್ಮ ಏರಿಯಾ ವ್ಯಾಪ್ತಿಯ ಸಂಚಾರ ಠಾಣೆ ಇನ್ಸ್‌'ಪೆಕ್ಟರ್, ಎಸಿಪಿ ಹಾಗೂ ಡಿಸಿಪಿ ಅವರನ್ನು ಸೇರಿಸಿ ವಾಟ್ಸ್‌'ಆಪ್ ಗ್ರೂಪ್ ರೂಪಿಸಬೇಕು. ಈ ಗ್ರೂಪ್‌'ನಲ್ಲಿ ಸಂಚಾರ ಸಮಸ್ಯೆಗಳು ಚರ್ಚೆ ನಡೆಯಲಿದೆ.

ಇಲ್ಲಿ ಸಂಚಾರ ಸಮಸ್ಯೆಗಳ ಕುರಿತು ಭಾವಚಿತ್ರಗಳ ಸಮೇತ ನಾಗರಿಕರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ವಿಷಯ ತಿಳಿದ ಪೊಲೀಸರು, ಕೂಡಲೇ ಆ ಸ್ಥಳದಲ್ಲಿ ಉಂಟಾಗಿರುವ ತೊಂದರೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಅಭಿಷೇಕ್ ಗೋಯೆಲ್ ಹೇಳಿದ್ದಾರೆ. ಠಾಣಾ ಮಟ್ಟದಲ್ಲಿ ನಾಗರಿಕ ಸಮಿತಿ ರಚಿಸಲಾಗಿದೆ. ಪ್ರತಿ ವಾರ ಆಯಾ ಠಾಣಾಧಿಕಾರಿಗಳ ಮಟ್ಟದಲ್ಲಿ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಕುಂದು ಕೊರತೆಗಳ ಅಹವಾಲು ಅಲಿಸಲಾಗುತ್ತಿತು.

ಈಗ ಇದನ್ನು ಮತ್ತೊಂದು ರೀತಿ ನಾಗರಿಕರ ಜತೆ ಸಂಪರ್ಕಕ್ಕೆ ವಾಟ್ಸಪ್ ಗ್ರೂಪ್ ರೂಪಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೊದಲು ಇಂದಿರಾ ನಗರ ನಾಗರಿಕರು ಗ್ರೂಪ್ ಮಾಡಿದರು. ಅದರಿಂದ ಪ್ರೇರಣೆಗೊಂಡು ಇತರೆ ಠಾಣೆಗಳಲ್ಲಿ ಸಹ ಗ್ರೂಪ್ ಅನ್ನು ನಾಗರಿಕ ಸಮಿತಿ ಸದಸ್ಯರು ರಚಿಸುತ್ತಿದ್ದಾರೆ ಎಂದು ಡಿಸಿಪಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.