ಬಿಬಿಎಂಪಿ ಮಾದರಿಯಲ್ಲೇ 5 ರು.ಗೆ ಉಪಾಹಾರ ಹಾಗೂ 10ರು.ಗೆ ಮಧ್ಯಾಹ್ನ-ಸಂಜೆ ಊಟ ವಿತರಿಸಲು ತೀರ್ಮಾನಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ನೀಡುವ ‘ಇಂದಿರಾ ಕ್ಯಾಂಟಿನ್’ ಯೋಜನೆಯ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸರ್ಕಾರ ಈಗ ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಇಂದಿರಾ ಕ್ಯಾಂಟೀನ್ ಹಾಗೂ 15 ಅಡುಗೆ ಮನೆ ನಿರ್ಮಿಸಲು ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಿ ರುವ ಇಂದಿರಾ ಕ್ಯಾಂಟೀನ್‌ಗೆ ಬಡವರು, ಸಾಮಾನ್ಯ ಜನರಿಂದ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ರಾಜ್ಯದ ಇತರೆ ಕಡೆಗಳಲ್ಲಿ ವಿಸ್ತರಿಸಲು ಆದೇಶಿಸಿದೆ.
ಬಿಬಿಎಂಪಿ ಮಾದರಿಯಲ್ಲೇ 5 ರು.ಗೆ ಉಪಾಹಾರ ಹಾಗೂ 10ರು.ಗೆ ಮಧ್ಯಾಹ್ನ-ಸಂಜೆ ಊಟ ವಿತರಿಸಲು ತೀರ್ಮಾನಿಸಲಾಗಿದೆ. 173 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜನಸಂಖ್ಯಾವಾರು 25 ಸಾವಿರ ಜನಸಂಖ್ಯೆಗೆ ಪ್ರತಿ ಹೊತ್ತಿಗೆ 200 ಊಟ, 45 ಸಾವಿರ ಜನಸಂಖ್ಯೆ ಒಳಗಿನ ನಗರ ಪಟ್ಟಣದಲ್ಲಿ 300, 45 ಸಾವಿರದಿಂದ 1 ಲಕ್ಷದವರೆಗೆ 500 ಊಟ, 1 ಲಕ್ಷಕ್ಕಿಂತ ಅಧಿಕವಾಗಿದ್ದರೆ ಸರಾಸರಿ 1 ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್ ಸಂಖ್ಯೆ ಹೆಚ್ಚಳ ಮಾಡಲು ನಿರ್ದೇಶನ ನೀಡಲಾಗಿದೆ.
ಇಂದಿರಾ ಕ್ಯಾಂಟೀನ್‌ಗೆ ನಿಯಮ
ಕ್ಯಾಂಟೀನ್ ನಿರ್ಮಾಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಒಂದು ಅಥವಾ ಎರಡು ಕ್ಯಾಂಟೀನ್ ಅಗತ್ಯವಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಡುಗೆ ಕೋಣೆ ಸಹಿತ ಕ್ಯಾಂಟೀನ್ ಮಾಡಲಾಗುವುದು. ಎರಡಕ್ಕಿಂತ ಹೆಚ್ಚು ಕ್ಯಾಂಟೀನ್ ಹೊಂದಿರುವ ಪಟ್ಟಣಗಳಲ್ಲಿ ಕ್ಯಾಂಟೀನ್ ಕಟ್ಟಡ ಹಾಗೂ ಅಡುಗೆ ಕೋಣೆ ಪ್ರತ್ಯೇಕಿಸಿ, ಸಾಮಾನ್ಯ ಅಡುಗೆ ಕೋಣೆಗಳನ್ನು ನಿರ್ಮಿಸಲಾಗುವುದು. ಈ ರೀತಿ 99 ಕ್ಯಾಂಟೀನ್ ಮತ್ತು ಮೂರು ಪ್ರತ್ಯೇಕ ಅಡುಗೆ ಕೋಣೆಗಳನ್ನು ಪೂರ್ವಸಿದ್ಧತಾ ಉಪಕರಣ (ಪ್ರಿಕಾಸ್ಟ್) ಬಳಸಿ ನಿರ್ಮಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ 148 ಕ್ಯಾಂಟೀನ್ ಹಾಗೂ 12 ಪ್ರತ್ಯೇಕ ಅಡುಗೆ ಕೋಣೆಗಳನ್ನು ಸಾಂಪ್ರದಾಯಿಕ ಕಟ್ಟಡವಾಗಿ ನಿರ್ಮಿಸಲಾಗುವುದು. ಆಹಾರ ಸರಬರಾಜುದಾರರ ಆಯ್ಕೆ ಬಗ್ಗೆ ಟೆಂಡರ್ ಪ್ರಕ್ರಿಯೆಯನ್ನು ಸಂಬಂಧಿಸಿದ ಡೀಸಿಗೆ ನಿರ್ವಹಿಸಲು ಅವಕಾಶ ನೀಡಲಾಗುವುದು.
ಯಾವುದೇ ಸರ್ಕಾರಿ ಜಾಗದಲ್ಲಿ ಕಟ್ಟಡ
ಆಹಾರ ಪೂರೈಕೆಗೆ ಪ್ರತಿ ತಿಂಗಳಿಗೆ ತಗಲುವ ಸಹಾಯಧನದ ಶೇ.30ರಷ್ಟು ಕಾರ್ಮಿಕ ಇಲಾಖೆಯಿಂದ ಹಾಗೂ ಬಾಕಿ ಶೇ.70ರಷ್ಟು ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಅನುದಾನದಿಂದ ಭರಿಸಬೇಕು ಎಂದು ಸೂಚಿಸಲಾಗಿದೆ.
