ನವದೆಹಲಿ(ಅ. 14): ರಷ್ಯಾ ದೇಶದ ಅತ್ಯುನ್ನತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎನಿಸಿರುವ ಎಸ್-400 ಟ್ರಯಂಫ್(S-400 Triumf) ಅನ್ನು ಕೊಳ್ಳಲು ಭಾರತ ಮುಂದಾಗಿದೆ. ನಾಳೆ ಶನಿವಾರ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಮತ್ತು ರಷ್ಯಾ ದೇಶಗಳು ಈ ಒಪ್ಪಂದಕ್ಕೆ ಸಹಿಹಾಕುವ ನಿರೀಕ್ಷೆ ಇವೆ. ಸದ್ಯಕ್ಕೆ ಭಾರತವು 5 ಕ್ಷಿಪಣಿ ವ್ಯವಸ್ಥೆಗಳನ್ನು ಕೊಳ್ಳಲು ಯೋಜಿಸಿದೆ. ಕಳೆದ ವರ್ಷ ಚೀನಾ ದೇಶ ಕೂಡ ಈ ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿತ್ತು. ಅಲ್ಲಿಗೆ, ರಷ್ಯಾ, ಚೀನಾ ಬಿಟ್ಟರೆ ಈ ಕ್ಷಿಪಣಿ ವ್ಯವಸ್ಥೆ ಹೊಂದಿರುವ ಮೂರನೇ ದೇಶ ಭಾರತವಾಗಲಿದೆ. ಆರ್ಮೇನಿಯಾ, ಬಿಲಾರಸ್, ಕಜಕಸ್ತಾನ್, ಇರಾನ್, ಈಜಿಪ್ಟ್, ಸೌದಿ ಅರೇಬಿಯಾ ಮೊದಲಾದ ದೇಶಗಳೂ ಈ ಕ್ಷಿಪಣಿ ವ್ಯವಸ್ಥೆ ಕೊಳ್ಳಲು ಆಸಕ್ತಿ ತೋರಿಸುತ್ತಿವೆ.

ಏನಿದು ಟ್ರಯಂಫ್?
ಆಲ್ಮಾಜ್-ಆಂಟೇ ಎಂಬ ರಷ್ಯನ್ ಸರಕಾರೀ ಸಂಸ್ಥೆ ಅಭಿವೃದ್ಧಿಪಡಿಸಿರುವ ಎಸ್-400 ಟ್ರಯಂಫ್ ಎಂಬುದು ದೂರ ಶ್ರೇಣಿಯ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ ಆಗಿದೆ. ಇದು ಏಕಕಾಲದಲ್ಲಿ 36 ಟಾರ್ಗೆಟ್'ಗಳ ಮೇಲೆ ದೃಷ್ಟಿಯಲ್ಲಿಟ್ಟುಕೊಂಡು ಮೂರು ರೀತಿಯ ಕ್ಷಿಪಣಿಗಳನ್ನು ಹಾರಿಸಬಲ್ಲುದು. ಜೊತೆಗೆ, ಶತ್ರುಗಳಿಂದ ನಡೆಯಬಹುದಾದ ಪ್ರತಿದಾಳಿಯನ್ನು ತಡೆಯಲು ರಕ್ಷಣಾ ವ್ಯೂಹ ರಚಿಸಬಲ್ಲುದು. 400 ಕಿಮೀ ದೂರದಲ್ಲಿರುವ ಶತ್ರುಗಳ ಯುದ್ಧವಿಮಾನ, ಕ್ಷಿಪಣಿ ಮತ್ತು ಡ್ರೋನ್'ಗಳನ್ನು ಇದು ಹೊಡೆದುರುಳಿಸಬಹುದು. ಸೆಕೆಂಡ್'ಗೆ ಇದು 4.8 ಕಿಮೀ ವೇಗದಲ್ಲಿ ಹಾರಬಲ್ಲುದು. ಅಂದರೆ, ಗಂಟೆಗೆ 17 ಸಾವಿರ ಕಿಮೀ ವೇಗದಲ್ಲಿ ಇದು ಟಾರ್ಗೆಟ್ ಬಳಿಗೆ ಹೋಗುತ್ತದೆ. 400 ಕಿಮೀ ದೂರದ ಟಾರ್ಗೆಟನ್ನು ಇದು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸಬಲ್ಲುದು. 2007ರಿಂದ ಇದು ರಷ್ಯಾದ ಸೇನೆಯಲ್ಲಿ ಬಳಕೆಯಲ್ಲಿದೆ.

ಇತರ ಯೋಜನೆಗಳು:
ಭಾರತ ಮತ್ತು ರಷ್ಯಾ ದೇಶಗಳು ಇಂತಹ 18 ಯೋಜನೆಗಳಿಗೆ ಸಹಿಹಾಕುವ ನಿರೀಕ್ಷೆ ಇದೆ. ಭಾರತದ ನೌಕಾಪಡೆಗೋಸ್ಕರ ಪ್ರಾಜೆಕ್ಟ್ 11356 ಫ್ರಿಗೇಟ್ಸ್ ನಿರ್ಮಿಸಲು ರಷ್ಯಾ ಮುಂದಾಗಿದೆ. ಅತ್ಯಾಧುನಿಕ ಹಾಗೂ ಒಳ್ಳೆಯ ಸಾಮರ್ಥ್ಯದ ಕೆಎ-226ಟಿ ಹೆಲಿಕಾಪ್ಟರ್'ಗಳನ್ನು ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ತಯಾರಿಸುವ ಪ್ರಸ್ತಾವವಿದೆ. ನಾಳೆ ಮೋದಿ ಮತ್ತು ಪುಟಿನ್ ಭೇಟಿ ಸಂದರ್ಭದಲ್ಲಿ ಈ ಎಲ್ಲ ಯೋಜನೆಗಳಿಗೆ ಸಹಿ ಬೀಳಲಿದೆ.