ಮಹಾಮಳೆಗೆ ತತ್ತರಿಸಿರುವ ಕೇರಳ! ನೆರೆ ಸಂತ್ರಸ್ತರ ನೆರವಿಗೆ ಭಾರತೀಯ ರೈಲ್ವೆ! ಉಚಿತವಾಗಿ ಪರಿಹಾರ ಸಾಮಗ್ರಿ ರವಾನಿಸಲು ನಿರ್ಧಾರ

ತಿರುವನಂತಪುರಂ(ಆ.18): ಮಹಾಮಳೆಗೆ ತತ್ತರಿಸಿರುವ ಕೇರಳಕ್ಕೆ ದೇಶದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಈಗಾಗಲೇ ಕೇರಳಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಸಾಧ್ಯವಾದ ಎಲ್ಲಾ ನೆರವನ್ನೂ ನೀಡಲು ಸಿದ್ಧ ಎಂದು ಘೋಷಿಸಿದೆ.

ಅದರಂತೆ ಭಾರತೀಯ ರೈಲ್ವೆ ಕೂಡ ಕೇರಳ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಉಚಿತವಾಗಿ ಸಾಮಾನು ಸರಂಜಾಮು ರವಾನಿಸಲು ನಿರ್ಧರಿಸಿದೆ.

ಕೇರಳಕ್ಕೆ ದೇಶದ ಮೂಲೆ ಮೂಲೆಯಿಂದ ಪರಿಹಾರ ಸಾಮಗ್ರಿಗಳು ರವಾನೆಯಾಗುತ್ತಿದ್ದು, ಇವುಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸುವುದೇ ಕಷ್ಟದ ಕೆಲಸವಾಗಿದೆ. ಹೀಗಾಗಿ ಸಾಧ್ಯವಾದಷ್ಟೂ ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ರವಾನಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 

ಭೂಕುಸಿತದಿಂದ ಅಲ್ಲಲ್ಲಿ ರೈಲು ಹಳಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಇವುಗಳ ತೆರವು ಕಾರ್ಯಾಚರಣೆಯನ್ನೂ ಕೂಡ ರೈಲ್ವೆ ಇಲಾಖೆ ಚುರುಕುಗೊಳಿಸಿದೆ. ಇದರ ಜೊತೆಗೆ ಪರಿಹಾರ ಸಾಮಗ್ರಿಗಳನ್ನು ತುರ್ತಾಗಿ ರವಾನಿಸಲು ಸಜ್ಜಾಗಿದೆ.