ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪ್ರತಿಷ್ಠಿತ ಗೌರವ ಸಲ್ಲಿಕೆಯಾಗಿದೆ. ನರೇಂದ್ರ ಮೋದಿ ಅವರು ಈ ವರ್ಷದ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನವದೆಹಲಿ[ಅ.24] ಪ್ರಧಾನಿ ನರೇಂದ್ರ ಮೋದಿ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಮಂತರು ಮತ್ತು ಬಡವರ ನಡುವಣ ಆರ್ಥಿಕ ಹಾಗೂ ಸಾಮಾಜಿಕ ಅಂತರ ತಗ್ಗಿಸಲು ಭಾರತ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಮೋದಿ ಈ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ.
ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನ (ಸಿಯೋಲ್ ಪೀಸ್ ಪ್ರೈಜ್ ಕಲ್ಚರಲ್ ಫೌಂಡೇಶನ್) ಅಧ್ಯಕ್ಷ ಕ್ವೋನ್ ಇ-ಹ್ಯೋಕ್ ಈ ಸಂಬಂಧ ಅಧಿಕೃತ ಪ್ರಕಟಣೆ ನೀಡಿದ್ದು ಕಳೆದ ಗುರುವಾರ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆಯ್ಕೆ ಸಮಿತಿ ಅಧ್ಯಕ್ಷ ಚೋ ಚಂಗ್ ಹೋ ನೇತೃತ್ವದ 12 ಸದಸ್ಯರ ತಂಡವು ದೇಶಗಳ ಮುಖ್ಯಸ್ಥರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿದ್ವಾಂಸರು, ಪತ್ರಕರ್ತರು, ಸಾಂಸ್ಕೃತಿಕ ವ್ಯಕ್ತಿಗಳು, ಕಲಾವಿದರು, ಕ್ರೀಡಾಪಟುಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರು ಸೇರಿದಂತೆ ಜಗತ್ತಿನ 100 ಮಂದಿ ಅಭ್ಯರ್ಥಿಗಳ ಪಟ್ಟಿಯಿಂದ ಸಮಗ್ರ ಅಧ್ಯಯನ ನಡೆಸಿದ ಮೇಲೆ ಅಂತಿಮವಾಗಿ ನರೇಂದ್ರ ಮೋದಿ ಗೌರವಕ್ಕೆ ಪಾತ್ರರಾದರು.
ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ 14ನೇ ಜಾಗತಿಕ ನಾಯಕ ಎಂಬ ಹಿರಿಮೆಯೂ ಮೋದಿ ಅವರಿಗೆ ಸಲ್ಲಿಕೆಯಾಗಿದೆ. ಮೋದಿ ಅವರ ಆರ್ಥಿಕ ನೀತಿ ಮತ್ತು ನೋಟು ಅಮಾಣ್ಯೀಕರಣದಂಥ ದಿಟ್ಟ ತೀರ್ಮಾನಗಳನ್ನು ಸಮಿತಿ ಕೊಂಡಾಡಿದೆ. ಪ್ರಶಸ್ತಿ ಫಲಕ ಹಾಗೂ 2 ಲಕ್ಷ ಡಾಲರ್ ಧನವನ್ನು ಪುರಸ್ಕಾರ ಒಳಗೊಂಡಿರುತ್ತದೆ.
