ಬುಧವಾರದಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 60 ಪೈಸೆ, ಪ್ರತೀ ಲೀಟರ್ ಡೀಸೆಲ್ ಮೇಲೆ 56 ಪೈಸೆ ಇಳಿಕೆ ಪ್ರಕಟಿಸಿದ್ದ ಇಂಡಿಯನ್ ಆಯಿಲ್ |  ಆದರೆ ವಾಸ್ತವ ಬೇರೆ, ಇಂಡಿಯನ್ ಆಯಿಲ್ ಅಧಿಕಾರಿಗಳಿಂದ ಎಡವಟ್ಟು

ನವದೆಹಲಿ: ಬುಧವಾರ ಬೆಳಗ್ಗೆ ಪೆಟ್ರೋಲ್, ಡೀಸೆಲ್ ದರಗಳನ್ನು ನೋಡಿ ಕೊಂಚ ನಿರಾಳರಾಗಿದ್ದ ವಾಹನ ಸವಾರರಿಗೆ ಪೆಚ್ಚಾಗುವ ಬೆಳವಣಿಗೆ ತೈಲ ಮಾರುಕಟ್ಟೆಯಲ್ಲಿ ನಡೆದಿದೆ. 

ತೈಲ ಬೆಲೆಗಳನ್ನು ಪರಿಷ್ಕರಿಸಿ ವೆಬ್‌ಸೈಟ್‌ನಲ್ಲಿ ಹಾಕುವ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದು, ಇದೀಗ ವಾಹನ ಸವಾರರ ಮುನಿಸಿಗೆ ಕಾರಣವಾಗಿದೆ.

ವಾಸ್ತವದಲ್ಲಿ, ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಕೇವಲ 1 ಪೈಸೆ ಕಡಿಮೆಯಾಗಿದ್ದು, ವೆಬ್‌ಸೈಟ್‌ನಲ್ಲಿ ಪೆಟ್ರೋಲ್ ದರ 60 ಪೈಸೆ, ಡೀಸೆಲ್ 56 ಪೈಸೆ ಕಡಿತವಾಗಿದೆಯೆಂದು ಪ್ರಕಟಿಸಿತ್ತು.

ಕಳೆದ ಮೇ.14ರಿಂದ ಸತತವಾಗಿ ತೈಲಬೆಲೆ ಏರಿಕೆಯಾಗುತ್ತಿದ್ದು, ಜನರಿಗೆ ಶಾಕ್ ಮೂಡಿಸಿದೆ. ಕಳೆದ 2 ವಾರಗಳಲ್ಲಿ ಪೆಟ್ರೋಲ್ ದರದಲ್ಲಿ 3.8 ರು. ಡೀಸೆಲ್ ದರದಲ್ಲಿ 3.38 ರಷ್ಟು ಏರಿಕೆಯಾಗಿತ್ತು. 

16 ದಿನಗಳ ಬಳಿಕವಾದರೂ ದರಗಳಲ್ಲಿ ಕೊಂಚ ಪ್ರಮಾಣದಲ್ಲಾದರೂ ಕಡಿತವಾಗಿದೆಯೆಂದು ಬಳಕೆದಾರರು ನಿಟ್ಟುಸಿರು ಬಿಡುವ ಮುನ್ನವೇ ಮತ್ತೊಮ್ಮೆ ತಲೆ ಮೇಲೆ ಕೈಹೊತ್ತು ಕೂರುವ ಸನ್ನಿವೇಶ ಎದುರಾಗಿದೆ. 

ಹಾಗಾಗಿ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ- ರೂ. 79.70 ಹಾಗೂ ಡೀಸೆಲ್ ದರ- ರೂ. 70.49 ಆಗಿದೆ