Asianet Suvarna News Asianet Suvarna News

ಇದು ಸದ್ದಿಲ್ಲದ ದೇಶ ಸೇವೆ: ವಿಶ್ವದ ಎತ್ತರದ ಹೆದ್ದಾರಿಯನ್ನೊಮ್ಮೆ ನೋಡು ಗುರುವೇ!

ಜನಪ್ರಿಯತೆಯ ಹಂಗಿಲ್ಲ, ಸೆಲಿಬ್ರಿಟಿಯ ಹಂಬಲವಿಲ್ಲ! ಮೌನ ದೇಶಸೇವೆಯಲ್ಲಿ ನಿರತರಾಗಿದ್ದಾರೆ ದೇಶದ ಇಂಜಿನಿಯರಗಳು! ಲಡಾಕ್ ನ ಎತ್ತರದ ಶಿಖರದ ಮೇಲೆ ಹೆದ್ದಾರಿ ನಿರ್ಮಾಣ ಕಾರ್ಯ! ಮೈನಸ್ 50 ಡಿಗ್ರಿ ಉಷ್ಣಾಂಶದಲ್ಲಿ ಹಗಲಿರುಳು ದುಡಿಮೆ! ಶೀಘ್ರದಲ್ಲೇ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣ

Indian Engineers Building Worlds Highest Highway In Ladakh
Author
Bengaluru, First Published Nov 20, 2018, 4:01 PM IST

ನವದೆಹಲಿ(ನ.20): ನಮ್ಮ ದೇಶದಲ್ಲಿ ರಾಜಕೀಯ ನಾಯಕರು, ಕ್ರಿಕೆಟ್ ಆಟಗಾರರು ಪಡೆದುಕೊಳ್ಳುವಷ್ಟು ಜನಮನ್ನಣೆ, ವಿಶ್ವಾಸ, ಪ್ರೀತಿಯನ್ನು ಬೇರೆ ಕ್ಷೇತ್ರಗಳ ಜನ ಪಡೆದುಕೊಳ್ಳುವುದು ತುಂಬ ವಿರಳ. ಉದ್ದುದ್ದ ಭಾಷಣ, ಮರಳು ಮಾಡುವ ನುಡಿಗಳಿಂದ ರಾಜಕೀಯ ನಾಯಕರು ತುಂಬ ಸಲೀಸಾಗಿ ಜನನಾಯಕನಾದರೆ, ಒಂದೆರಡು ಸಿಕ್ಸರ್ ಗಳಿಂದ, ಬಾಲಿವುಡ್ ನಟಿಮಣಿಗಳೊಂದಿಗೆ ವಿವಾಹವಾಗುವುದರಿಂದ ಕ್ರಿಕೆಟ್ ಆಟಗಾರರು ಜನಪ್ರೀಯತೆ ಗಳಿಸಿಬಿಡುತ್ತಾರೆ.

ಆದರೆ ಇವರಿಷ್ಟೇ ಅಲ್ಲದೇ ಈ ದೇಶವನ್ನು ಕಟ್ಟುವಲ್ಲಿ ಜನಸಾಮಾನ್ಯನ ಜೊತೆಗೆ ಇನ್ನೂ ಹಲವು ಕ್ಷೇತ್ರಗಳ ಮೇಧಾವಿಗಳೂ ಕಾರಣೀಭೂತರಾಗಿದ್ದಾರೆ. ಆದರೆ ಇವರ ಸಾಧನೆ ಮಾತ್ರ ಮರೀಚಿಕೆಯಾಗುವುದು ನೋವಿನ ಸಂಗತಿ. ಸದ್ದಿಲ್ಲದೇ ದೇಶ ಸೇವೆ ಮಾಡುತ್ತಿರುವ ಅಂತ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಕ್ಷೇತ್ರ ಕೂಡ ಒಂದು.

ಹೌದು, ದೇಶಕ್ಕೆ ವಿಶ್ವ ವಿಖ್ಯಾತ ಆಣೆಕಟ್ಟುಗಳು, ಆಧುನಿಕ ಕಟ್ಟಡಗಳು, ಉತ್ತಮ ದರ್ಜೆಯ ರಸ್ತೆಗಳು, ಅಷ್ಟೇ ಏಕೆ ಇಡೀ ವಿಶ್ವವೇ ತಲೆದೂಗುವಂತ ಪ್ರತಿಮೆಗಳನ್ನು ನಿರ್ಮಿಸಿ ದೇಶದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಇಂಜಿನಿಯರಿಂಗ್ ವಿಭಾಗ ನಿಜಕ್ಕೂ ಮೌನವಾಗಿಯೇ ದೇಶ ಸೇವೆ ಮಾಡುತ್ತಿದೆ.

ಇದೀಗ ಇಂತದ್ದೇ ಮತ್ತೊಂದು ಸಾಧನೆಯನ್ನು ದೇಶದ ಇಂಜಿನಿಯರಗಳು ಮಾಡುತ್ತಿದ್ದಾರೆ. ಲಡಾಕ್ ನ 18 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ನಮ್ಮ ಇಂಜಿನಿಯರಗಳು ನಿರತರಾಗಿದ್ದಾರೆ.

ಬಾರ್ಡರ್ ರೋಡ್ ಆರ್ಗನೈಸೇಶನ್(ಬಿಆರ್ ಓ) ಈ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದು ಈಗಾಗಲೇ 50 ಕಿ.ಮೀ. ಉದ್ದದ ಹೆದ್ದಾರಿ ಸಂಚಾರ ಯೋಗ್ಯವಾಗಿದೆ.

ಮೈನಸ್ 50 ಡಿಗ್ರಿ ಶೀತ ಉಷ್ಣಾಂಶದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಇಂಜಿನಿಯರಗಳು ಮತ್ತು ಕಾರ್ಮಿಕರು, ಜಗತ್ತಿನ ಅತ್ಯಂತ ಎತ್ತರದ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಿಲಿಟರಿ ಮತ್ತು ಸಿವಿಲ್ ಇಂಜಿನಿಯರಗಳ ಜಂಟಿ ಸಹಭಾಗಿತ್ವದಲ್ಲಿ ಈ ಹೆದ್ದಾರಿ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.

ಒಟ್ಟಿನಲ್ಲಿ ಸದ್ದಿಲ್ಲದೇ ದೇಶ ಸೇವೆಯಲ್ಲಿ ನಿರತವಾಗಿರುವ ಈ ಇಂಜಿನಿಯರಗಳು ಮತ್ತು ಕಾರ್ಮಿಕರಿಗೆ ನಮ್ಮದೊಂದು ಸಲಾಂ ಹೇಳಲೇಬೇಕು.

Follow Us:
Download App:
  • android
  • ios