ನವದೆಹಲಿ: ಶತಮಾನಗಳಿಂದ ಸಂಶೋಧಕರಿಗೆ ನಿಗೂಢವಾಗಿಯೇ ಉಳಿದಿರುವ ಹಿಮಮಾನವ ‘ಯೇತಿ’ ಹೆಜ್ಜೆ ಗುರುತು ತನಗೆ ಸಿಕ್ಕಿದೆ ಎಂದು ಭಾರತೀಯ ಸೇನೆ ಫೋಟೋಗಳನ್ನು ಟ್ವೀಟ್ ಮಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. 

ಸೇನೆಯ ಪರ್ವತಾರೋಹಣ ತಂಡ ನೇಪಾಳದ ಮಾಕಲು ಬೇಸ್ ಕ್ಯಾಂಪ್ ಬಳಿ ಏ. 9ರಂದು ‘ಪೌರಾಣಿಕ ಮೃಗ’ದ ಹೆಜ್ಜೆ ಗುರುತನ್ನು ಪತ್ತೆ ಮಾಡಿದೆ. ಈ ಹೆಜ್ಜೆ 215 ಇಂಚುಗಳಷ್ಟಿದೆ.

10 ದಿನಗಳ ಹಿಂದೆಯೇ ಈ ಕುರಿತು ಮಾಹಿತಿ ಲಭ್ಯವಾಗಿತ್ತು. ಆದರೆ ಬಹಿರಂಗಪಡಿಸಿರಲಿಲ್ಲ. ಈ ಹಿಂದಿನ ವಾದಗಳ ಜತೆಗೆ ಈ ಫೋಟೋ ಸಾಕ್ಷ್ಯ ಹೋಲಿಕೆಯಾಗುತ್ತಿದ್ದ ಕಾರಣ ಈಗ ಬಿಡುಗಡೆ ಮಾಡಿದ್ದೇವೆ. ಯೇತಿ ಬಗ್ಗೆ ಮತ್ತೆ ಕುತೂಹಲ ಕೆರಳಿಸಲು ಇದು ಸಹಕಾರಿಯಾಗಲಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೇತಿ ಕುರಿತ ಸಾಕ್ಷ್ಯವನ್ನು ಸೆರೆ ಹಿಡಿದು, ವಿಷಯ ತಜ್ಞರಿಗೆ ಹಸ್ತಾಂತರಿಸಲಾಗಿದೆ. ವೈಜ್ಞಾನಿಕವಾಗಿಯೇ ಇದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ಯೇತಿ ಹೆಜ್ಜೆ ಗುರುತಿನ ವಿಡಿಯೋ ಕೂಡ ಇದ್ದು, ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.