ತಿರುವನಂತಪುರಂ[ಜು.27]: ಕಳೆದ ವರ್ಷದ ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ವಾಯು ಸೇನೆ(ಐಎಎಫ್‌) ಕೇರಳ ಸರ್ಕಾರಕ್ಕೆ ಸೇವಾ ವೆಚ್ಚವಾಗಿ ಬರೋಬ್ಬರಿ 113 ಕೋಟಿ ರು. ಭರಿಸುವಂತೆ ಹೇಳಿದೆ. ಆದರೆ ಇದನ್ನು ಕಟ್ಟಲು ಹಿಂದೇಟು ಹಾಕಿರುವ ಕೇರಳ ಸರ್ಕಾರ, ವಿನಾಯಿತಿ ನೀಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಮೊರೆ ಹೋಗಿದೆ.

ಇಷ್ಟೊಂದು ದೊಡ್ಡ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಭರಿಸುವುದು ದೊಡ್ಡ ಹೊರೆಯಾಗಲಿದೆ. ರಾಜ್ಯ ಹಾನಿ ಸ್ಥಿತಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಿದೆ. 2018ರಲ್ಲಿ ಭಾರೀ ಮಳೆಗೆ ಕೇರಳದ ಬಹುತೇಕ ಭಾಗ ಜಲಾವೃತಗೊಂಡು, ಅಪಾರ ಹಾನಿ ಸಂಭವಿಸಿತ್ತು. ಆ ಸಂದರ್ಭದಲ್ಲಿ ಐಎಎಫ್‌ಗೆ ಸೇರಿದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ಐಎಎಫ್‌ ಬರೋಬ್ಬರಿ 113.69 ಕೋಟಿ ರು. ಭರಿಸುವಂತೆ ಕೇರಳ ಸರ್ಕಾರಕ್ಕೆ ಬಿಲ್‌ ಕಳುಹಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ವಿಪತ್ತಿನ ಕ್ಷಣದಲ್ಲಿ ಐಎಎಫ್‌ ರಾಜ್ಯದ ನೆರವಿಗೆ ಬಂದಿರುವ ಬಗ್ಗೆ ಅಭಿನಂದಿಸುತ್ತೇನೆ. ಸದ್ಯದ ಸ್ಥಿತಿಯಲ್ಲಿ ಕೇರಳ ಸರ್ಕಾರದಿಂದ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟ. ವಿಶೇಷ ಪ್ರಕರಣವೆಂದು ಪರಿಗಣಿಸಿ ವಿನಾಯಿತಿ ನೀಡಿ ಎಂದು ಮನವಿ ಮಾಡಿಕೊಂಡಿದೆ.