ನವದೆಹಲಿ(ಆ.23): ಬಾಲಾಕೋಟ್ ವಾಯುದಾಳಿ ಮರುದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ವಾಯು ಕಾದಾಟದ ವೇಳೆ,  ಭಾರತ ತನ್ನದೇ ಹೆಲಿಕಾಪ್ಟರ್’ವೊಂದನ್ನು ಹೊಡೆದುರುಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. 

ಬುದ್ಗಾಂನಲ್ಲಿ ಪಾಕಿಸ್ತಾನದ ವಾಯುಪಡೆ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ, ಭಾರತೀಯ ವಾಯುಪಡೆಯ ಮಿಗ್ -17 ಹೆಲಿಕಾಪ್ಟರ್’ನ್ನು ಕ್ಷಿಪಣಿಯಿಂದ ಹೊಡೆದುರುಳಿಸಲಾಗಿತ್ತು. 

ದುರ್ಘಟನೆಯಲ್ಲಿ ಆರು ಸೇನಾ ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಗ್ರೂಪ್ ಕ್ಯಾಪ್ಟನ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದ್ದು, ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ವಾಯುಸೇನಾ ಮೂಲಗಗಳು ತಿಳಿಸಿವೆ. 

ಘಟನೆಯ ಕುರಿತು ಏರ್ ಕಮಾಂಡರ್ ಶ್ರೇಣಿಯ ಅಧಿಕಾರಿಗಳಿಂದ ತನಿಖೆಗೆ ಭಾರತೀಯ ವಾಯುಪಡೆ ಕೇಂದ್ರ ಕಚೇರಿಯಿಂದ ಆದೇಶಿಸಲಾಗಿತ್ತು. ಅದರಂತೆ ಇದೀಗ ತನಿಖಾ ವರದಿ ಬಹಿರಂಗಗೊಂಡಿದ್ದು, ಚಾತುರ್ಯದಿಂದ ತನ್ನದೇ ಹೆಲಿಕಾಪ್ಟರ್’ನ್ನು ವಾಯುಪಡೆ ಹೊಡೆದುರುಳಿಸಿದೆ ಎಂಬುದು ಸ್ಪಷ್ಟವಾಗಿದೆ. 

ಹೆಲಿಕಾಪ್ಟರ್’ನಲ್ಲಿ ಶತ್ರುಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ  ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಭೂಮಿಯ ಮೇಲಿನ ಸಿಬ್ಬಂದಿ ಹಾಗೂ  ಹೆಲಿಕಾಪ್ಟರ್ ಸಿಬ್ಬಂದಿ ನಡುವೆ ಸಂವಹನ ಹಾಗೂ ಸಮನ್ವಯತೆಯ ಕೊರತೆ ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಸೇನಾ ಕಾನೂನಿನ ಪ್ರಕಾರ ತಪಿತಸ್ಥರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥರು ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.