ನವದೆಹಲಿ: ಭಾರತೀಯ ವಾಯುಪಡೆಗೆ ಶಕ್ತಿ ತುಂಬಿದ, ಹಲವು ಯುದ್ಧಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೋವಿಯತ್‌ ರಷ್ಯಾ ನಿರ್ಮಿತ ಮಿಗ್‌ ವಿಮಾನವನ್ನು ತಾನೇ ತಯಾರಿಸುತ್ತಿರುವ ಭಾರತ ಇದೀಗ ರಷ್ಯಾಗೆ ಉಡುಗೊರೆಯಾಗಿ ನೀಡಲು ಸಜ್ಜಾಗಿದೆ.

ಭಾರತ ಜತೆಗಿನ ಶೃಂಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಅ.5ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ನವದೆಹಲಿಗೆ ಆಗಮಿಸಲಿದ್ದು, ಆ ವೇಳೆ ಮಿಗ್‌-21 ವಿಮಾನ ರಷ್ಯಾಗೆ ಉಡುಗೊರೆಯಾಗಿ ಸಿಗಲಿದೆ.

1964ರಿಂದ ಭಾರತ ಮಿಗ್‌ ಯುದ್ಧ ವಿಮಾನಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿತು. ಸುಮಾರು 1200 ವಿಮಾನಗಳನ್ನು ಆ ದೇಶದಿಂದ ಖರೀದಿಸಿತ್ತು. ಇದೇ ರೀತಿಯ ಬೇರೊಂದು ವಿಮಾನ ಖರೀದಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕ ಹಾಗೂ ಬ್ರಿಟನ್‌ ಅಡ್ಡಿಪಡಿಸಿದ್ದವು. 

ಈ ಮಧ್ಯೆ, ಸೋವಿಯತ್‌ ರಷ್ಯಾ ವಿಭಜನೆಯಾದ ಬಳಿಕ ರಷ್ಯಾ ವಾಯುಪಡೆ ಬಳಿ ಮಿಗ್‌-21 ವಿಮಾನ ಇರಲಿಲ್ಲ. ಭಾರತದ ರಕ್ಷಣಾ ಪರಿಕರಗಳಲ್ಲಿ ಶೇ.60ರಷ್ಟುರಷ್ಯಾದವೇ ಆಗಿದ್ದರೂ, ರಷ್ಯಾ ಮಾತ್ರ ಮಿಗ್‌ ವಿಮಾನ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾನೇ ಉತ್ಪಾದಿಸುವ ಮಿಗ್‌ ವಿಮಾನವನ್ನು ಭಾರತವು ರಷ್ಯಾಗೆ ಉಡುಗೊರೆ ನೀಡುತ್ತಿದೆ.