ನವದೆಹಲಿ (ಸೆ. 01):  ಕಪ್ಪುಹಣದ ವಿರುದ್ಧ ಭಾರತ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಭಾನುವಾರದಿಂದ ಇನ್ನಷ್ಟುಬಲ ಸಿಗಲಿದೆ. ಕಾರಣ, ತೆರಿಗೆ ವಂಚಕರ ಸ್ವರ್ಗವೆಂದೇ ಬಣ್ಣಿತ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಎಲ್ಲಾ ಬ್ಯಾಂಕ್‌ ಖಾತೆಗಳ ಮಾಹಿತಿ ಭಾನುವಾರದಿಂದ ಭಾರತದ ತೆರಿಗೆ ಅಧಿಕಾರಿಗಳಿಗೆ ಲಭ್ಯವಾಗಲಿದೆ.

ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ತನ್ನ ನಾಗರಿಕರು ಹೊಂದಿರುವ ಬ್ಯಾಂಕ್‌ ಖಾತೆಗಳ ಮಾಹಿತಿ ನೀಡುವಂತೆ ಬಹಳ ವರ್ಷಗಳಿಂದ ಭಾರತ ಸರ್ಕಾರ ಒತ್ತಾಯಿಸುತ್ತಲೇ ಬಂದಿತ್ತು.

ಅಂತಿಮವಾಗಿ ಈ ಕುರಿತಿ ಮಾಹಿತಿ ಹಂಚಿಕೊಳ್ಳಲು 2016 ರಲ್ಲಿ ಉಭಯ ದೇಶಗಳು ಒಪ್ಪಂದದಕ್ಕೆ ಸಹಿ ಹಾಕಿದ್ದವು. ಈ ಕುರಿತ ಒಪ್ಪಂದಕ್ಕೆ ಉಭಯ ದೇಶಗಳ ಸಂಸತ್ತಿನ ಅನುಮೋದನೆ ಸಿಕ್ಕು, ವಿವಿಧ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು, ಆ ವ್ಯವಸ್ಥೆ 2019ರ ಸೆ.1ರಿಂದ ಜಾರಿಗೆ ಬರುತ್ತಿದೆ.

ಹೀಗಾಗಿ 2018 ಜ.1ರ ಬಳಿಕ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಎಲ್ಲಾ ಬ್ಯಾಂಕ್‌ ಖಾತೆಗಳ ಮಾಹಿತಿ ಇನ್ನು ಸ್ವಯಂಚಾಲಿತವಾಗಿ, ಭಾರತದ ತೆರಿಗೆ ಅಧಿಕಾರಿಗಳಿಗೆ ರವಾನೆಯಾಗಲಿದೆ. ಜೊತೆಗೆ 2018ರಲ್ಲಿ ಮುಚ್ಚಲ್ಪಟ್ಟ ಬ್ಯಾಂಕ್‌ ಖಾತೆಗಳ ಪೂರ್ಣ ಮಾಹಿತಿಯೂ ಸಿಗಲಿದೆ. ಆದರೆ ಒಪ್ಪಂದದ ಅನ್ವಯ, ತೆರಿಗೆ ವಂಚನೆಯಾಗಿರದ ಹೊರತೂ, ಈ ಮಾಹಿತಿಯನ್ನು ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತೆ ಇಲ್ಲ.

2018ರಲ್ಲಿ ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿದ್ದ ವರದಿ ಅನ್ವಯ, ಆ ದೇಶದ ಬ್ಯಾಂಕ್‌ಗಳಲ್ಲಿ ವಿಶ್ವದ ವಿವಿಧ ದೇಶಗಳ ಜನರು 100 ಲಕ್ಷ ಕೋಟಿ ರು. ಹಣ ಜಮೆ ಮಾಡಿದ್ದರು. ಈ ಪೈಕಿ ಭಾರತೀಯರು 7000 ಕೋಟಿ ರು. ಹಣ ಜಮೆ ಮಾಡಿದ್ದರು. ಆದರೆ ಇವೆಲ್ಲವೂ ಕಪ್ಪುಹಣ ಎಂದೇನಲ್ಲ.

ಭಾರೀ ಕಪ್ಪುಹಣ: ಒಂದು ಲೆಕ್ಕಾಚಾರದ ಪ್ರಕಾರ ಈ ಹಿಂದಿನ ವರ್ಷಗಳಲ್ಲಿ ಭಾರತೀಯರು ಸ್ವಿಸ್‌ ಬ್ಯಾಂಕ್‌ ಸೇರಿದಂತೆ ತೆರಿಗೆ ವಂಚಕರಿಗೆ ನೆರವು ನೀಡುವ ದೇಶಗಳಲ್ಲಿ ಇಟ್ಟಿದ್ದ ಕಪ್ಪುಹಣದ ಮೊತ್ತ ಸುಮಾರು 90 ಲಕ್ಷ ಕೋಟಿ ರು. ಆದರೆ ಭಾರೀ ಟೀಕೆಯ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಸ್ವಿಜರ್ಲೆಂಡ್‌ ಸರ್ಕಾರವು, ತನ್ನ ದೇಶದಲ್ಲಿ ಕಪ್ಪು ಹಣ ಇಟ್ಟಿರುವ ವಿದೇಶಿಯರ ಮಾಹಿತಿ ಬಹಿರಂಗ ಮಾಡುವ ನೀತಿ ಜಾರಿಗೆ ತಂದಿತು. ಬಳಿಕ, ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಕಪ್ಪುಹಣ ಇಡುವ ಬದಲು ಇತರೆ ದೇಶಗಳಿಗೆ ತಮ್ಮ ಖಾತೆಗಳನ್ನು ವರ್ಗಾಯಿಸಿದರು.