ಬೆಂಗಳೂರು (ಫೆ. 22):  ಲೋಹದ ಹಕ್ಕಿಗಳ ನಡುವೆ ಪುಟ್ಟ-ಪುಟ್ಟಪಾತರಗಿತ್ತಿಗಳಂತೆ ನೂರಾರು ಡ್ರೋನ್‌​ಗಳು ಓಡಾಡಿ ಗುರು​ವಾರ ಯಲ​ಹಂಕದ ಬಾನಂಗ​ಳ​ವನ್ನು ಮನ​ಮೋ​ಹಕಗೊಳಿ​ಸಿ​ದವು!

ಹೌದು, ಈ ಪರಿ ಡ್ರೋನ್‌​ಗಳು ಯಲ​ಹಂಕ ವಾಯುನೆಲೆಯ ಬಾನ ತುಂಬೆಲ್ಲ ಚೆಲ್ಲಾಟವಾಡಲು ಕಾರಣ ಡ್ರೋನ್‌ ಒಲಿಂಪಿ​ಕ್ಸ್‌. ಇದೇ ಮೊದಲ ಬಾರಿಗೆ ಏರೋ ಇಂಡಿಯಾ ಪ್ರದರ್ಶನಲ್ಲಿ ‘ಡ್ರೋನ್‌ ಒಲಿಂಪಿಕ್‌’ ಸ್ಪರ್ಧೆ ಆಯೋಜಿಸಲಾ​ಗಿತ್ತು. ಇಸ್ರೇಲ್‌, ಉಕ್ರೇನ್‌, ರಷ್ಯಾ, ಚೀನಾ ಸೇರಿ ವಿವಿಧ ರಾಷ್ಟ್ರಗಳಿಂದ ಸುಮಾರು 128 ಡ್ರೋನ್‌ಗಳು ‘ಡ್ರೋನ್‌ ಒಲಿಂಪಿಕ್‌’ ಸ್ಪರ್ಧೆಯಲ್ಲಿ ಭಾಗಹಿಸಿ ಶಕ್ತಿ ಪ್ರದರ್ಶನ ಮಾಡಿದವು.

ಏರೋ ಇಂಡಿಯಾದ ಎರಡನೇ ದಿನವಾದ ಗುರುವಾರ ವಿಶೇಷವಾಗಿ ಡ್ರೋನ್‌ ಸ್ಪರ್ಧೆ ಮತ್ತು ಹಾರಾಟಕ್ಕೆ ಒತ್ತು ನೀಡಲಾಗಿತ್ತು. ಸ್ಪರ್ಧೆಗೆಂದು ಹಾರಿದ ಡ್ರೋನ್‌ಗಳು ಸಾರಂಗ್‌, ಸೂರ್ಯ ಕಿರಣ, ತೇಜಸ್‌ ಹಾಗೂ ಏರ್‌ಜಟ್‌ಗಳ ರೀತಿಯಲ್ಲಿ ಆಗಸದಲ್ಲಿ ಚಿತ್ತಾರ ಬಿಡಿಸಿ ನೋಡುಗರನ್ನು ಬೆರಗುಗೊಳಿಸಿದವು.

ಇನ್ನು ಸಣ್ಣ ಗಾತ್ರದ ಡ್ರೋನ್‌ಗಳು ಹೂವಿನಿಂದ ಹೂವಿಗೆ ಹಾರಿದ ಪಾತರಗಿತ್ತಿಗಳಂತೆ ಹಾರಿದರೆ, ಕೆಲ ಡ್ರೋನ್‌ಗಳು ವಾಯುನೆಲೆಯ ರನ್‌ವೇನಲ್ಲಿ ಆರ್ಭಟಿಸಿದವು. ತಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದವು. ಇನ್ನು ಕೆಲ ಡ್ರೋನ್‌ಗಳು ಹಾರುವ ಮುನ್ನವೇ ರೆಕ್ಕೆ ಬಿಡಿದು ನೆಲಕಚ್ಚಿ ಸುಮ್ಮನಾದವು. ಮತ್ತೆ ಕೆಲ ಡ್ರೋನ್‌ಗಳು ಆರಂಭದಲ್ಲಿ ಹಾರುವುದಕ್ಕೆ ತಿಣುಕಾಡಿದರೂ ನಂತರ ತಮ್ಮ ನೈಜ ಪ್ರದರ್ಶನದ ಮೂಲಕ ನೋಡುಗರನ್ನು ರಂಜಿಸಿದವು.

ದೊಡ್ಡ ರೆಕ್ಕೆಯ ಡ್ರೋನ್‌ಗಳ ರೆಕ್ಕೆ ಬಡಿತ ಜೋರಾಗಿ ಕೇಳಿಬಂದರೂ ಹೆಚ್ಚು ಎತ್ತರಕ್ಕೆ ಹಾರುವುದಕ್ಕೆ ಸಾಧ್ಯವಾಗಲಿಲ್ಲ. ಕೆಲ ಡ್ರೋನ್‌ಗಳ ರೆಕ್ಕೆ ಸಣ್ಣವಾಗಿದ್ದರೂ ಕಣ್ಣಿಗೆ ಕಾಣದಷ್ಟುಎತ್ತರಕ್ಕೆ ಹಾರಿ ಗುರಿ ಮುಟ್ಟಿದವು.

ಹೇಗಿತ್ತು ಡ್ರೋನ್‌ ಒಲಿಂಪಿಕ್‌?

ಸರ್ವೆಲೆನ್ಸ್‌ ಸ್‌, ವೈಟ್‌ ಡ್ರಾಪ್‌ಚಾಲೆಂಜ್ಸ್  ಪಾರ್ಮೇಷನ್‌ ಪ್ಲೈಯಿಂಗ್‌ ಸೇರಿ ಒಟ್ಟು ಮೂರು ವಿಭಾಗದಲ್ಲಿ ಡ್ರೋನ್‌ ಒಲಿಂಪಿಕ್‌ ಆಯೋಜಿಸಲಾಗಿತ್ತು. ಸರ್ವೆಲೆನ್ಸ್‌ ಸ್‌ ವಿಭಾಗದಲ್ಲಿ ತೂಕದ ಆಧಾರದ ಮೇಲೆ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಉಳಿದಂತೆ ವೈಟ್‌ ಡ್ರಾಪ್‌ಚಾಲೆಂಜ್ಸ್ ಹಾಗೂ ಪಾರ್ಮೇಷನ್‌ ಪ್ಲೈಯಿಂಗ್‌ ವಿಭಾಗದಲ್ಲಿ ಸಾಮಾನ್ಯ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಸರ್ವೆಲೆನ್ಸ್‌ ಸ್ಪರ್ಧೆ ಹೇಗಿತ್ತು?

ಡ್ರೋನ್‌ನಲ್ಲಿ ಅಳವಡಿಸಿರುವ ಕ್ಯಾಮೆರಾ ಹೇಗೆ ಛಾಯಾಚಿತ್ರ ಸಂಗ್ರಹಣೆ ಮಾಡುತ್ತದೆ, ಎಷ್ಟುಎತ್ತರದಿಂದ ನಿರ್ದಿಷ್ಟಗುರಿ ಗುರುತಿಸುತ್ತದೆ, ಎಷ್ಟುದೂರದಲ್ಲಿ, ಎಷ್ಟುಎತ್ತರ ಹಾರಾಟ ಮಾಡುವ ಸಾಮರ್ಥ್ಯ ಹೀಗೆ ವಿವಿಧ ಅಂಶಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುತ್ತದೆ.

ನಾಲ್ಕು ಕೆ.ಜಿ, ನಾಲ್ಕರಿಂದ ಏಳು ಕೆ.ಜಿ, ಹೈಬ್ರಿಡ್‌ ವಿನ್ಯಾಸದಲ್ಲಿ ನಾಲ್ಕು ಕೆ.ಜಿ, ನಾಲ್ಕರಿಂದ 20 ಕೆಜಿ ಎಂಬ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಡ್ರೋನ್‌ಗಳು ಪೊಲೀಸ್‌, ರಕ್ಷಣಾ ಇಲಾಖೆಗೆ ಬಳಕೆ ಮಾಡಲಾಗುತ್ತದೆ.

ವೈಟ್‌ ಡ್ರಾಪ್‌ಚಾಲೆಂಜ್ಸ್ ಮುಟ್ಟಿದ್ದು ಹೇಗೆ?

ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ನಾಗರಿಕ ಕ್ಷೇತ್ರದಲ್ಲಿ ಬಳಸುವ ಡ್ರೋನ್‌ಗಳು. ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಆಧಾರದ ಮೇಲೆ ಇಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನೀಡಲಾಗಿರುವ ವಸ್ತುವನ್ನು ನಿಗದಿತ ಸ್ಥಳಕ್ಕೆ ಆಗಸದಿಂದ ಕೆಳಗೆ ಬಿಡಬೇಕು. ಗುರಿಯ ಸಮೀಪ ವಸ್ತುವನ್ನು ಲ್ಯಾಂಡಿಂಗ್‌ ಮಾಡುವ ಡ್ರೋನ್‌ಗೆ ಹೆಚ್ಚಿನ ಅಂಕ ಸಿಗಲಿದೆ. ಕೆಲ ಡ್ರೋನ್‌ಗಳು ನೀಡಲಾಗಿದ್ದ ಮೆಡಿಕಲ್‌ ಕಿಟ್‌ಗಳನ್ನು ತುಂಬಾ ಹತ್ತಿರಕ್ಕೆ ಲ್ಯಾಂಡ್‌ ಮಾಡಿದರೆ, ಇನ್ನು ಕೆಲವು ಭಾರ ಎತ್ತುವುದಕ್ಕೆ ಕಷ್ಟಪಟ್ಟವು.

ಪಾರ್ಮೇಷನ್‌ ಪ್ಲೈಯಿಂಗ್‌ ಅಂದ್ರೆ ಏನು?

ಐದು, ಏಳು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳು ಆಗಸಲ್ಲಿ ಒಂದೇ ಸಮನಾಗಿ ಹಾರಾಟ ನಡೆಸಬೇಕು. ಅಲ್ಲದೆ ವಿ, ಎಕ್ಸ್‌ , ಫ್ಲಸ್‌, ಮೈನಸ್‌ ಸೇರಿದಂತೆ ವಿವಿಧ ಆಕಾರದಲ್ಲಿ ಚಿತ್ತಾರಗಳನ್ನು ರೂಪಿಸಬೇಕು. ಯಾವ ಡ್ರೋನ್‌ ತುಂಬಾ ಚೆನ್ನಾಗಿ ಹಾಗೂ ನಿರ್ದಿಷ್ಟ ಸ್ಥಳದಲ್ಲಿ ನಿಂತು ಹಾರಾಟ ನಡೆಸುತ್ತದೆ. ಅಂತಹ ಡ್ರೋನ್‌ಗಳು ಪ್ರಶಸ್ತಿಗೆ ಆಯ್ಕೆ ಆಗುತ್ತವೆ.

ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ

ಬೆಂಗಳೂರಿನ ಮಾಡಲ್‌ ಏವಿಯೇಷನ್‌ ಹಾಗೂ ಚೆನ್ನೈನ ಅಣ್ಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ಡ್ರೋನ್‌ (ಯುಎವಿ) ಪ್ರದರ್ಶನ ಗಮನಿಸಿದ ಭಾರತೀಯ ವಾಯುಸೇನೆ ಹಾಗೂ ವಿದೇಶಿ ವಾಯುಸೇನೆಗಳ ಅಧಿಕಾರಿಗಳು ಡ್ರೋನ್‌ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಹೇಗೆ ತಯಾರಿಸಲಾಗಿದೆ, ಎಷ್ಟುಕಿ.ಮೀ ವೇಗದಲ್ಲಿ ಚಲಿಸಬಲ್ಲದು ಸೇರಿ ವಿವಿಧ ಮಾಹಿತಿ ಸಂಗ್ರಹಣೆ ಮಾಡಿದರು.

- ವಿಶ್ವ​ನಾಥ್‌ ಮಲೆಬೆನ್ನೂ​ರು