ಪದೇಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಭಾರತ ಎರಡನೇ ಬಾರಿ ಸರ್ಜಿಕಲ್ ದಾಳಿ ನಡೆಸುತ್ತದೆ ಎಂಬಂತಹ ಸುದ್ದಿ ಮಾತ್ರ ಬಲವಾಗಿ ಕೇಳಿಬರುತ್ತಿದೆ.

ನವದೆಹಲಿ(ಡಿ. 26): ಭಾರತದ ಗಡಿಯಲ್ಲಿ ಎಡಬಿಡದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಎರಡನೇ ಬಾರಿ ಸರ್ಜಿಕಲ್ ದಾಳಿ ನಡೆಸಲು ತಯಾರಿ ನಡೆಸಿದೆ ಎಂಬಂತಹ ವರದಿ ಝೀನ್ಯೂಸ್'ನಲ್ಲಿ ಪ್ರಸಾರವಾಗಿದೆ. ಆದರೆ, ಈ ಬಾರಿ ಅತ್ಯಾಧುನಿಕ ಹೈಟೆಕ್ ಶಸ್ತ್ರಾಸ್ತ್ರಗಳೊಂದಿಗೆ ಅತ್ಯಂತ ಪ್ರಬಲ ಕಮಾಂಡೋಗಳು ಪಾಕ್ ಗಡಿಭಾಗದೊಳಗೆ ನುಗ್ಗಿ ದಾಳಿ ನಡೆಸಲಿದ್ದಾರಂತೆ.

Add Asianetnews Kannada as a Preferred SourcegooglePreferred

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಕೇಂದ್ರ ಸರಕಾರ 6 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸುತ್ತಿದೆ. ಇದರಲ್ಲಿ 6 ಹೊಸ ಯುದ್ಧವಿಮಾನಗಳು ಸರ್ಜಿಕಲ್ ಸ್ಟ್ರೈಕ್'ಗೋಸ್ಕರ ಆಮದಾಗುತ್ತಿವೆ. ಅತ್ಯಾಧುನಿಕ ರೈಫಲ್, ಮೆಷೀನ್ ಗನ್, ಗ್ರಿನೇಡ್ ಲಾಂಚರ್ ಇತ್ಯಾದಿ ಶಸ್ತ್ರಗಳನ್ನು ಕೊಳ್ಳಲು ನೂರಾರು ಕೋಟಿ ಹಣವನ್ನು ಮೀಸಲಿರಿಸಲಾಗಿದೆ.

ಪಾಕ್ ವಿರುದ್ಧ ಸರ್ಜಿಕಲ್ ದಾಳಿ ನಡೆಸಲು ಈ ಶಸ್ತ್ರಾಸ್ತ್ರ ಖರೀದಿ ನಡೆಯುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸೇನೆಯಿಂದ ಯಾವುದೇ ಸ್ಪಷ್ಟನೆ ಇಲ್ಲ. ಝೀನ್ಯೂಸ್ ವರದಿಯಲ್ಲೂ ಸ್ಪಷ್ಟತೆ ಇಲ್ಲ. ಶಸ್ತ್ರಾಸ್ತ್ರ ಖರೀದಿಯು ಸೇನೆಯ ಮಾಮೂಲಿಯ ಕ್ರಮವಾಗಿರುತ್ತದೆ. ಆದರೆ, ಪದೇಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಭಾರತ ಎರಡನೇ ಬಾರಿ ಸರ್ಜಿಕಲ್ ದಾಳಿ ನಡೆಸುತ್ತದೆ ಎಂಬಂತಹ ಸುದ್ದಿ ಮಾತ್ರ ಬಲವಾಗಿ ಕೇಳಿಬರುತ್ತಿದೆ. ಆದರೆ, ಸರ್ಜಿಕಲ್ ದಾಳಿಯ ವಿಚಾರವು ಅತ್ಯಂತ ರಹಸ್ಯವಾಗಿಟ್ಟಿರಲಾಗುತ್ತದೆ. ಮಾಧ್ಯಮಗಳಿಗೆ ಈ ಮಾಹಿತಿ ಲಭಿಸಿರುವುದು ಅದರ ಸತ್ಯಾಸತ್ಯತೆಯ ಮೇಲೆ ಅನುಮಾನ ಮೂಡುವುದು ಸಹಜವೇ.

ಮೂರು ತಿಂಗಳ ಹಿಂದೆ ಸೆಪ್ಟಂಬರ್'ನಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿ ಅಲ್ಲಿದ್ದ ಏಳು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಿ ಬಂದಿದ್ದರು. ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಂಡ ಈ ದಾಳಿಯಲ್ಲಿ ಹಲವು ಪಾಕ್ ಸೈನಿಕರು ಮತ್ತು ಉಗ್ರರು ಹತರಾಗಿದ್ದರು. ಅದಾದ ಬಳಿಕವೂ ಪಾಕಿಸ್ತಾನವು ಗಡಿತಂಟೆಯನ್ನು ಮುಂದುವರಿಸಿಕೊಂಡು ಬರುತ್ತಲೇ ಇದೆ.

ಇದನ್ನೂ ಓದಿ: ಪಾಕ್, ಚೀನಾ ಮಾತ್ರವಲ್ಲ, ಇಡೀ ಏಷ್ಯಾದ ಮೂಲೆಮೂಲೆಯನ್ನೂ ತಲುಪಬಲ್ಲುದು ಅಗ್ನಿ-5. ಇದರ ವಿಶೇಷತೆಗಳೇನು? ಅಗ್ನಿ ಸರಣಿಯ ಮುಂದಿನ ಕ್ಷಿಪಣಿ ಅಮೆರಿಕವನ್ನ ಟಾರ್ಗೆಟ್ ಮಾಡಬಲ್ಲುದಾ?