Asianet Suvarna News Asianet Suvarna News

ಇಂಡಿಯಾ ಗೇಟ್: ತೇರದಾಳದ ಶಿಕಾರಿಗೆ ಹೊರಟ್ರು ಬಿಎಸ್'ವೈ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಭೆ ನಡೆಸುತ್ತಿದ್ದರು. ಆಗ ರಸ್ತೆ ಸುರಕ್ಷತೆ ಬಗ್ಗೆ ಜಾಹೀರಾತು ಮಾಡಲು ಯಾರನ್ನು ಕರೆತರಬೇಕು ಎಂಬ ಪ್ರಶ್ನೆ ಬಂತು. ಶಾರುಖ್, ರಣಬೀರ್ ಹೀಗೆ ಅನೇಕ ಹೆಸರನ್ನು ಅಧಿಕಾರಿಗಳು ಹೇಳಿದರೂ ಗಡ್ಕರಿ ಬೇಡ ಎನ್ನುತ್ತಿದ್ದರು. ಕೊನೆಗೆ ಸಭೆ ಅಂತ್ಯದಲ್ಲಿ ಗಡ್ಕರಿ ಅವರೇ ನನಗೇನು ಕಮ್ಮಿಯಾಗಿದೆ, ನಾನೇ ಮಾಡಬಹುದಲ್ಲ ಎಂದು ಕೇಳಿದಾಗ ಅಧಿಕಾರಿಗಳು ಸುಸ್ತಾದರಂತೆ.

india gate sep 26 bsy to contest from teradala

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸಚಿವೆ ಉಮಾಶ್ರೀ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನಿರ್ಧರಿಸಿದ್ದಾರೆಂಬ ಸುದ್ದಿ ದೆಹಲಿ ರಾಜಕೀಯ ವಲಯದಲ್ಲಿ ನಿಚ್ಚಳವಾಗಿದೆ. ನಿನ್ನೆ ದೆಹಲಿಗೆ ಬಂದಾಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಪಿಯೂಷ್ ಗೋಯಲ್ ಎದುರು ಯಡಿಯೂರಪ್ಪ ತೇರದಾಳದಿಂದ ಚುನಾವಣೆಗೆ ಸ್ಪರ್ಧಿಸುವ ವಿಷಯ ಹೇಳಿದ್ದು, ಅದು ಲಿಂಗಾಯತರು ಮತ್ತು ನೇಕಾರರು ಜಾಸ್ತಿ ಇರುವ ಕ್ಷೇತ್ರ, ಹೀಗಾಗಿ ನನಗೆ ಸುಲಭವಾಗಲಿದೆ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳವರೆಗೂ ಯಡಿಯೂರಪ್ಪಗೆ ತಾನು ಶಿಕಾರಿಪುರದಿಂದ ಸ್ಪರ್ಧಿಸಿ ಪುತ್ರ ರಾಘವೇಂದ್ರ ಅವರನ್ನು ರಾಣೆಬೆನ್ನೂರಿನಿಂದ ಕಣಕ್ಕಿಳಿಸಬೇಕು ಎಂದು ಮನಸ್ಸಿನಲ್ಲಿ ಇತ್ತಾದರೂ ಹೈಕಮಾಂಡ್ ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಯಲ್ಲಿ ಸ್ಪರ್ಧಿಸಿದರೆ ಅನುಕೂಲ. ಒಂದು ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದರಿಂದ ಯಡಿಯೂರಪ್ಪನವರು ತೇರದಾಳ ಕ್ಷೇತ್ರ ಆಯ್ದುಕೊಂಡಿದ್ದಾರೆ. ಯಡಿಯೂರಪ್ಪ ಅಲ್ಲಿನ ಮಾಜಿ ಶಾಸಕ ಸಿದ್ದು ಸವದಿ ಅವರನ್ನು ಕೂಡ ಕರೆಸಿಕೊಂಡು ನಿಮಗೆ ವಿಧಾನಪರಿಷತ್ ಟಿಕೆಟ್ ಕೊಡುತ್ತೇವೆ ಎಂದು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ಜಮಖಂಡಿಗೆ ಹತ್ತಿಕೊಂಡು ಇರುವ ತೇರದಾಳ ರಬಕವಿ, ಬನಹಟ್ಟಿಗಳನ್ನೊಳಗೊಂಡಿರುವ ಕ್ಷೇತ್ರದಲ್ಲಿ ನೇಕಾರರ ಸಂಖ್ಯೆ ಜಾಸ್ತಿ ಇರುವುದರಿಂದಲೇ 2008ರಲ್ಲಿ ಉಮಾಶ್ರೀ ಇಲ್ಲಿಗೆ ಬಂದು ಚುನಾವಣೆಗೆ ನಿಂತು, ಒಮ್ಮೆ ಸೋತು 2013ರಲ್ಲಿ ಗೆದ್ದಿದ್ದರು.

ಸಿದ್ಧಗಂಗಾ ಮಠದಿಂದ ಪರಿವರ್ತನೆ?
ನವೆಂಬರ್‌'ನಲ್ಲಿ ಪ್ರಾರಂಭವಾಗಲಿರುವ ಪರಿವರ್ತನಾ ಯಾತ್ರೆಯನ್ನು ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭಿಸಲು ಯಡಿಯೂರಪ್ಪ ಯೋಚಿಸುತ್ತಿದ್ದು, ದೆಹಲಿಯಲ್ಲಿ ಭಾನುವಾರ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಲಿಂಗಾಯತ- ವೀರಶೈವ ದಾಳವನ್ನು ಎಸೆದಿರುವುದರಿಂದ ದ್ವಂದ್ವದಲ್ಲಿರುವ ಲಿಂಗಾಯತ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಯಾತ್ರೆ ಹೊರಟರೆ ಸಮುದಾಯಕ್ಕೆ ಹೋಗಬೇಕಾದ ಸಂದೇಶ ಹೋಗುತ್ತದೆ ಎಂಬುದು ಯಡಿಯೂರಪ್ಪ ಮನಸ್ಸಿನಲ್ಲಿದೆ. ಆದರೆ, ಶಾ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಪಾಟೀಲರ ಫೈಟಿಂಗ್ ಸ್ಪಿರಿಟ್:
ನಿನ್ನೆ ಸಂಜೆ ಫಾಲಿ ನಾರಿಮನ್ ಅವರನ್ನು ಭೇಟಿಯಾಗಲು ಕರ್ನಾಟಕ ಭವನದಿಂದ ಹೊರಗೆ ಹೊರಟಿದ್ದ ಎಂಬಿ ಪಾಟೀಲರಿಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ ಬರುತ್ತಿದ್ದ ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಸಿಕ್ಕರು. ಸೋಮಣ್ಣ ಎದುರಿಗಿದ್ದರೂ ಮಾತನಾಡಿಸದ ಪಾಟೀಲರು ಬೊಮ್ಮಾಯಿ ಅವರಿಗೆ ಮಾತ್ರ ಬರ್ರೀ ನಾರಿಮನ್ ಕಡೆ ಹೋಗೋಣ ಎಂದು ಹೇಳಿದರು. ಬೊಮ್ಮಾಯಿ ಇಲ್ಲ ಇಲ್ಲ ಎಂದಾಗ ಪಕ್ಕದಲ್ಲಿಯೇ ಇದ್ದ ಬಿಜೆಪಿ ನಾಯಕರೊಬ್ಬರು ಎಲ್ಲವೂ ಸರಿಯಾದರೆ ಮುಂದಿನ ಜೂನ್ ನಂತರ ಬೊಮ್ಮಾಯಿ ಅವರೇ ಜಲ ಸಂಪನ್ಮೂಲ ಸಚಿವರಾಗಿ ನಾರಿಮನ್ ಭೇಟಿಗೆ ಹೋಗುತ್ತಾರೆ ಎಂದರು. ಆಗ ಪಾಟೀಲರು ಜೋರಾಗಿ ಇಲ್ಲ ಇಲ್ಲ ಸಾಧ್ಯವೇ ಇಲ್ಲ, ನಾವೇ ಗೆಲ್ಲೋದು ಎನ್ನಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ ಏನೋ ಹೇಳಲಾರಂಭಿಸಿದರು. ಒಂದು ರೀತಿಯಲ್ಲಿ ವಾದ ಪ್ರತಿವಾದ ಜೋರಾಗಿ ಆರಂಭವಾದಂತೆ ಕೇಳಿಸತೊಡಗಿತು. ಕೊನೆಗೆ ಲಕ್ಷ್ಮಣ್ ಸವದಿ ಏನೋ ಜೋಕ್ ಹೇಳಿದ ನಂತರ ಬೊಮ್ಮಾಯಿ ಪಾಟೀಲರನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ಜೊತೆಗೆ ಮಾತುಮಾತಿಗೆ ರೈಸ್ ಆಗಬೇಡ್ರಿ ಎಂದು ಎಷ್ಟು ಸಲ ಹೇಳಿದ್ದೇನೆ ಎಂದು ಕೂಡ ಚುಚ್ಚಿದರು.

ಅಮಿತ್ ಶಾಗೂ ಗೊತ್ತಿರಲಿಲ್ಲ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗುವ ವಿಷಯ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೂ ಕೂಡ ಗೊತ್ತಿರಲಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು. ವಿಷಯ ಏನಪ್ಪಾ ಎಂದರೆ ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರಾಜನಾಥ್ ಸಿಂಗ್ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಅಮಿತ್ ಶಾ ಬಳಿ ಅವರಿಗೆ ಯಾವ ಖಾತೆ ಎಂದು ಕೇಳಿದ್ದಾರೆ. ಆಗ ಶಾ ನಗರಾಭಿವೃದ್ಧಿ ಖಾತೆ ಎಂದು ಹೇಳಿದರಂತೆ. ಆದರೆ ಸಂಜೆ ನೋಡುವಾಗ ನಿರ್ಮಲಾ ರಕ್ಷಣಾ ಸಚಿವರಾಗಿದ್ದರು. ಬಿಜೆಪಿ ಮೂಲಗಳ ಪ್ರಕಾರ ಅಮಿತ್ ಶಾ ಅವರು ರಾಜನಾಥ್‌'ರಂತಹ ಸೀನಿಯರ್ ನಾಯಕರ ಬಳಿ ಹಾಗೆಯೇ ಏನೋ ಹೇಳಿರಲಕ್ಕಿಲ್ಲ. ಆದರೆ ನಿರ್ಮಲಾಗೆ ರಕ್ಷಣಾ ಖಾತೆ ಕೊಟ್ಟಿರುವುದು ಬಿಜೆಪಿ ನಾಯಕರಿಗೆ ತೀರಾ ಇರಿಸುಮುರುಸು ಆಗಿದ್ದು, ನಿತಿನ್ ಗಡ್ಕರಿ ಅಂತೂ ಇದು ಸರಿಯಾಗಲಿಲ್ಲ ಎಂದು ನೇರವಾಗಿಯೇ ಸಂಘದ ನಾಯಕರ ಬಳಿ ಹೇಳಿಕೊಂಡಿದ್ದಾರೆ.

ಮೇರೆ ಪ್ಯಾರೆ ದೇಶ ವಾಸಿಯೋ:
ದೆಹಲಿಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬೆಳಿಗ್ಗೆ 10:30ಕ್ಕೆ ಒಳಗಡೆ ಬಂದ ಪ್ರಧಾನಿ ನರೇಂದ್ರ ಮೋದಿ ಸಂಜೆ ತಮ್ಮ ಭಾಷಣದ ಸರದಿ ಬರುವವರೆಗೂ ಕುಳಿತೇ ಇದ್ದರು. ಸ್ವಯಂ ಮೋದಿ ಸಾಹೇಬರೇ ಅಲ್ಲಿ ಕುಳಿತ ಮೇಲೆ ಬೇರೆ ನಾಯಕರು ಬೇರೆ ದಾರಿಯಿಲ್ಲದೆ ಅಲ್ಲಿಯೇ ಇರಬೇಕಾಯಿತು. ಸಂಜೆ ಭಾಷಣ ಮಾಡುವಾಗ ತಮ್ಮ ಮೇರೆ ಪ್ಯಾರೆ ದೇಶ ವಾಸಿಯೋ ಎಂಬ ಸಂಬೋಧನೆ ಎನ್ನುವುದು ಹೇಗೆ ಹಾಸ್ಯಕ್ಕೆ ಒಳಗಾಗಿದೆ ಎನ್ನುವುದು ಗೊತ್ತಿದೆ ಎಂದು ಜೋರಾಗಿ ನಕ್ಕರು ಮೋದಿ. ಆದರೆ, ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ನನ್ನ ಕಪ್ಪು ಹಣದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ನಿಶ್ಯಬ್ದ ಮೌನವಿತ್ತು. ಅಂದಹಾಗೆ ಮೋದಿ ನವರಾತ್ರಿಯಲ್ಲಿ ಉಪವಾಸವಿರುತ್ತಾರೆ. ಒಂಭತ್ತೂ ದಿನ ಕೇವಲ ನಿಂಬೆಹಣ್ಣು ಹಾಗೂ ಬಿಸಿನೀರು ಸೇವಿಸಿಕೊಂಡಿರುತ್ತಾರೆ.

ಕಾರ್ಯಕರ್ತ ಯೋಗಿ:
ಬಿಜೆಪಿ ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಭಾಷಣಕ್ಕಾಗಿ ಇಟ್ಟಿದ್ದ ಪೋಡಿಯಮ್ ಮೇಲೆ ಅಂಟಿಸಿದ್ದ ಪಂಡಿತ್ ದೀನದಯಾಳ್ ಅವರ ಭಾವಚಿತ್ರ ಬೀಳುತ್ತಿತ್ತು. 4-5 ಬಾರಿ ತಾನೇ ಕೆಳಗೆ ಕುಳಿತು ಆ ಭಾವ ಚಿತ್ರವನ್ನು ಸರಿಯಾಗಿ ಅಂಟಿಸುತ್ತಿದ್ದರು ದೇಶದ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಅಂದಹಾಗೆ, ಇಡೀ ದಿನದ ಕಾರ್ಯಕಾರಿಣಿಯಲ್ಲಿ ದೇಶದೆಲ್ಲೆಡೆಯಿಂದ ಬಂದಿದ್ದ ಬಿಜೆಪಿ ನಾಯಕರು ಸೆಲ್ಫಿಗಾಗಿ ಅತೀ ಹೆಚ್ಚು ಬೆನ್ನು ಹತ್ತಿದ್ದು ಯೋಗಿಯನ್ನು.

ನಾನೇಕೆ ಬೇಡ?
ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಅಭಿಯಾನ ನಡೆಸಲಿದೆಯಂತೆ. ಇದಕ್ಕಾಗಿ ಜಾಹೀರಾತು ನಿರ್ಮಿಸಲು ಯಾರನ್ನು ಕರೆತರುವುದು ಸೂಕ್ತ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರಂತೆ. ಆಗ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣಬೀರ್ ಕಪೂರ್, ಶಾಹಿದ್ ಕಪೂರ್ ಹೀಗೆ ಅನೇಕ ಹೆಸರುಗಳು ಚರ್ಚೆಗೆ ಬಂದವಂತೆ. ಆದರೆ ಯಾವ ಹೆಸರು ಹೇಳಿದರೂ ನಿತಿನ್ ಗಡ್ಕರಿ ಮಾತ್ರ ಇವರು ಬೇಡ ಎಂದು ತಲೆ ಅಲ್ಲಾಡಿಸುತ್ತಿದ್ದರಂತೆ. ಕೊನೆಗೆ ಸಭೆ ಅಂತ್ಯದಲ್ಲಿ ನಿತಿನ್ ಗಡ್ಕರಿ ನನಗೇನು ಕಮ್ಮಿಯಾಗಿದೆ, ನಾನೇ ಜಾಹೀರಾತು ಮಾಡಬಹುದಲ್ಲ, ನಾನೇಕೆ ಬೇಡ ಎಂದು ಕೇಳಿದರಂತೆ. ಅಧಿಕಾರಿಗಳು ಎಂದಾದರೂ ಬಾಸ್‌'ಗೆ ಇಲ್ಲ ಎನ್ನುವುದುಂಟೇ. ಹೌದು ಸಾರ್ ನೀವೇ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದರಂತೆ.

ಸಾಲು ಸಾಲು ವಕೀಲರು:
ಕಳೆದ ವಾರ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಪ್ರಕರಣ ಸುಪ್ರೀಂಕೋರ್ಟ್‌'ನಲ್ಲಿ ವಿಚಾರಣೆಗೆ ಬಂದಾಗ ನಿರಾಶ್ರಿತರ ಪರವಾಗಿ ವಾದಿಸಲು ಸಾಲು ಸಾಲು ವಕೀಲರ ದಂಡೇ ಸುಪ್ರೀಂಕೋರ್ಟ್‌'ನಲ್ಲಿ ನೆರೆದಿತ್ತು. ಫಾಲಿ ನಾರಿಮನ್, ಕಪಿಲ್ ಸಿಬಲ್, ರಾಜೀವ್ ಧವನ್, ಪ್ರಶಾಂತ್ ಭೂಷಣ್ ಸೇರಿದಂತೆ ದೇಶದ ಖ್ಯಾತನಾಮ ವಕೀಲರು ನಿರಾಶ್ರಿತರ ಹಕ್ಕುಗಳ ವಾದ ಮಂಡನೆಗಾಗಿ ನ್ಯಾಯಪೀಠದ ಎದುರು ನಿಂತಿದ್ದರು. ಅಂದ ಹಾಗೆ ಮೇಲೆ ಹೆಸರಿಸಿದ ಸುಪ್ರೀಂಕೋರ್ಟ್‌'ನ ಹಿರಿಯ ವಕೀಲರು ಒಮ್ಮೆ ಕೋರ್ಟ್‌'ನಲ್ಲಿ ವಾದಿಸಲು ಒಂದು ದಿನಕ್ಕೆ 5ರಿಂದ 7 ಲಕ್ಷ ರು. ಮುಂಗಡ ಫೀಸ್ ಪಡೆಯುತ್ತಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com

Follow Us:
Download App:
  • android
  • ios