ನವದೆಹಲಿ[ಜು.17]: ವಿಷಕಂಠ ತಾನು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅತ್ತಿದ್ದು ದೇಶದ ತುಂಬೆಲ್ಲ ಸುದ್ದಿಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎನ್ನುತ್ತಿವೆ ಟೆನ್ ಜನಪಥ್ ಮೂಲಗಳು. 

ಕುಮಾರಸ್ವಾಮಿ ಅತ್ತ ನಂತರ ರಾಜ್ಯ ಉಸ್ತುವಾರಿ ವೇಣುಗೋಪಾಲರನ್ನು ಕರೆಸಿಕೊಂಡಿದ್ದ ರಾಹುಲ್ ಗಾಂಧಿ ಕರ್ನಾಟಕದ ಅಷ್ಟೂ ಬೆಳವಣಿಗೆಗಳ ಮಾಹಿತಿ ಪಡೆದಿದ್ದು, ಕುಮಾರ ಸ್ವಾಮಿ ಜೊತೆಗೆ ದೆಹಲಿಗೆ ಬಂದಾಗ ಮೀಟಿಂಗ್ ಫಿಕ್ಸ್ ಮಾಡಿಸುವಂತೆ ಸೂಚಿಸಿದ್ದಾರೆ. ಅಂದಹಾಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಒಂದು ಕಡೆ ರಾಹುಲ್ ಗಾಂಧಿ, ಮತ್ತೊಂದು ಕಡೆ ದೇವೇಗೌಡರಿಬ್ಬರೂ ಉತ್ಸುಕರಾಗಿದ್ದಾರೆ. ಆದರೆ ಉಸ್ತುವಾರಿ ವೇಣುಗೋಪಾಲ್ ಮಾತ್ರ ಸಿದ್ದರಾಮಯ್ಯ, ಖರ್ಗೆ, ಮುನಿಯಪ್ಪ ಹೀಗೆ ಎಲ್ಲ ರಾಜ್ಯ ನಾಯಕರು ಶತಾಯಗತಾಯ ಮೈತ್ರಿ ಬೇಡ ಎನ್ನುತ್ತಿದ್ದಾರೆ ಎಂದು ರಾಹುಲ್‌ಗೆ ವರದಿ ನೀಡಿದ್ದಾರೆ. 

ಮೈತ್ರಿ ಮಾಡಿಕೊಂಡರೆ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಿ ಜೆಡಿಎಸ್‌ಗೆ ಲಾಭವಾಗುತ್ತದೆಯೇ ಹೊರತು ಒಕ್ಕಲಿಗರ ಮತಗಳು ಕಾಂಗ್ರೆಸ್‌ಗೆ ಶಿಫ್ಟ್ ಆಗುವ ಸಾಧ್ಯತೆ ಇರುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆಯಂತೆ. ನೋಡೋಣ, ಮೈತ್ರಿ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊಳ್ಳಬೇಕಿಲ್ಲ, ಲೋಕಸಭಾ ಚುನಾವಣೆ ಘೋಷಣೆ ಆದ ನಂತರವೇ ಮೈತ್ರಿ ಮಾತುಕತೆ ಎಂದು ರಾಹುಲ್ ಹೇಳಿ ಕಳುಹಿಸಿದ್ದಾರೆ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]