Asianet Suvarna News Asianet Suvarna News

ಮೋದಿ ವಿರುದ್ಧ ಅಡ್ವಾಣಿ ಮೈಕ್ ಟೆಸ್ಟಿಂಗ್? ಕೇಂದ್ರದ ವಿರುದ್ಧ ಬಿಜೆಪಿ ಹಿರಿಯರಿಂದ ಇನ್ನಷ್ಟು ಪ್ರಹಾರ..?

ಕುತೂಹಲದ ವಿಷಯ ಏನೆಂದರೆ, ಈ ಹಿರಿಯ ನಾಗರಿಕರ ಬಂಡಾಯದ ನಂತರ ಆರ್‌ಎಸ್‌ಎಸ್ ಸುಪ್ರಿಮೋ ಮೋಹನ ಭಾಗವತ್ ಅವರು ಅಡ್ವಾಣಿ ಅವರನ್ನು ದಸರೆಯ ದಿನ ಕರೆದು ಮಾತನಾಡಿಸಿರುವುದು. ಸಂಘದ ಮೂಲಗಳು ಹೇಳುವ ಪ್ರಕಾರ ಅಡ್ವಾಣಿ ಅವರನ್ನು ಮಾತನಾಡಿಸಿ ಸುಮ್ಮನಿರಿಸಿ ಎಂದು ಪ್ರಧಾನಿ ಮೋದಿ ಅವರೇ ಮೋಹತ್ ಭಾಗವತ್ ಅವರನ್ನು ಕೇಳಿಕೊಂಡಿದ್ದರಂತೆ. ಅಂದಹಾಗೆ ಟೀಂ ಅಡ್ವಾಣಿ ವೈಯಕ್ತಿಕವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಟೀಕೆ ನಡೆಸುತ್ತಿದ್ದರೂ ರಾಜಕೀಯವಾಗಿ ಗುಜರಾತ್ ಚುನಾವಣೆಗೂ ಮುನ್ನ ಮೋದಿ ಮತ್ತು ಅಮಿತ್ ಶಾ ಅವರಿಗೆ ನೀರಿಳಿಸುವ ಮನಸ್ಸು ಇದ್ದಂತಿದೆ.

india gate oct 3 advani mike testing against modi

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ರಾಜಕಾರಣದಲ್ಲಿ ಟೈಮಿಂಗ್‌'ಗೆ ಬಹಳ ಮಹತ್ವವಿದೆ. ಕಳೆದ ಮೂರೂವರೆ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಿರುಗಿಬೀಳಲು ಸಮಯ ಕಾಯುತ್ತಿದ್ದ ಬಿಜೆಪಿಯ ಸೀನಿಯರ್ ಸಿಟಿಜನ್‌'ಗಳು ಈಗ ಸರಿಯಾಗಿ ಜನಸಾಮಾನ್ಯ ಬೆಲೆ ಏರಿಕೆಯಿಂದ ತತ್ತರಿಸಿರುವಾಗ ಮೋದಿ ಮತ್ತವರ ಮಂತ್ರಿಗಳ ವಿರುದ್ಧ ತಿರುಗಿಬಿದ್ದಂತಿದೆ. ಬಿಜೆಪಿ ಮೂಲಗಳು ಹೇಳುವ ಪ್ರಕಾರ ಯಶವಂತ್ ಸಿನ್ಹಾ ಟೀಕೆಗಳ ಹಿಂದೆ ಅಡ್ವಾಣಿ ಇದ್ದಾರಂತೆ. ಕಳೆದ ಮೂರೂವರೆ ವರ್ಷಗಳಿಂದ ನಿರಂತರವಾಗಿ ಮುಜುಗರ ಅನುಭವಿಸುತ್ತಿದ್ದ ಲಾಲ್'ಕೃಷ್ಣ ಅಡ್ವಾಣಿ, ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಈಗ ಒಟ್ಟಾಗಿ ತಿರುಗಿಬೀಳಲು ತೀರ್ಮಾನಿಸಿದ್ದು, ಯಶವಂತ್ ಸಿನ್ಹಾ ನೇರವಾಗಿ ಮೋದಿಯವರ ಆರ್ಥಿಕ ಕ್ರಮಗಳ ಮೇಲೆಯೇ ಬಾಣ ಬಿಡುತ್ತಿದ್ದಾರೆ ಎಂಬ ಗುಸುಗುಸು ಮೋದಿ ಬೆಂಬಲಿಗರ ಕಡೆಯಿಂದಲೂ ಕೇಳಿಬರುತ್ತಿದೆ. ಮೊದಲ ಹಂತದಲ್ಲಿ ಯಶವಂತ್ ಸಿನ್ಹಾ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಸ್ವತಃ ಅಡ್ವಾಣಿ ಅವರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುವ ಸಾಧ್ಯತೆಯಿದೆಯಂತೆ. ಅರುಣ್ ಶೌರಿ ಕೂಡ ಯಶವಂತ್ ಸಿನ್ಹಾರ ಮಾತುಗಳನ್ನೇ ಪುನರುಚ್ಚರಿಸಿದ್ದಾರೆ. ನೋಟ್ ಬ್ಯಾನ್ ಮತ್ತು ಜಿಎಸ್'ಟಿ ವಿಚಾರದಲ್ಲಿ ಮೋದಿ ಸರಕಾರವನ್ನು ಶೌರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮುರಳಿ ಮನೋಹರ ಜೋಶಿ ಕೂಡ ಟೈಮಿಂಗ್‌'ಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಕುತೂಹಲದ ವಿಷಯ ಏನೆಂದರೆ, ಈ ಹಿರಿಯ ನಾಗರಿಕರ ಬಂಡಾಯದ ನಂತರ ಆರ್‌ಎಸ್‌ಎಸ್ ಸುಪ್ರಿಮೋ ಮೋಹನ ಭಾಗವತ್ ಅವರು ಅಡ್ವಾಣಿ ಅವರನ್ನು ದಸರೆಯ ದಿನ ಕರೆದು ಮಾತನಾಡಿಸಿರುವುದು. ಸಂಘದ ಮೂಲಗಳು ಹೇಳುವ ಪ್ರಕಾರ ಅಡ್ವಾಣಿ ಅವರನ್ನು ಮಾತನಾಡಿಸಿ ಸುಮ್ಮನಿರಿಸಿ ಎಂದು ಪ್ರಧಾನಿ ಮೋದಿ ಅವರೇ ಮೋಹತ್ ಭಾಗವತ್ ಅವರನ್ನು ಕೇಳಿಕೊಂಡಿದ್ದರಂತೆ. ಅಂದಹಾಗೆ ಟೀಂ ಅಡ್ವಾಣಿ ವೈಯಕ್ತಿಕವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಟೀಕೆ ನಡೆಸುತ್ತಿದ್ದರೂ ರಾಜಕೀಯವಾಗಿ ಗುಜರಾತ್ ಚುನಾವಣೆಗೂ ಮುನ್ನ ಮೋದಿ ಮತ್ತು ಅಮಿತ್ ಶಾ ಅವರಿಗೆ ನೀರಿಳಿಸುವ ಮನಸ್ಸು ಇದ್ದಂತಿದೆ.

ಹೆಚ್ಚಾದ ವಿರೋಧದ ಸ್ವರಗಳು:
ಕಳೆದ ಮೂರೂವರೆ ವರ್ಷ ಮೋದಿ ಸರ್ಕಾರದ ಜಯಜಯಕಾರಕ್ಕೆ ಮೀಸಲಾಗಿದ್ದ ಸೋಷಿಯಲ್ ಮೀಡಿಯಾದಲ್ಲಿ ಈಗ ನಿಧಾನವಾಗಿ ಮೋದಿ ವಿರುದ್ಧದ ಸ್ವರಗಳು ಜಾಸ್ತಿಯಾಗಿವೆ. ಹೀಗೆ ಹೇಳುವವರು ಪತ್ರಕರ್ತರೋ ವಿರೋಧ ಪಕ್ಷದವರೋ ಅಲ್ಲ, ಬದಲಾಗಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಏಜೆನ್ಸಿಗಳು. ಈ ಏಜೆನ್ಸಿಗಳೀಗ ವಿರೋಧದ ಸ್ವರಗಳ ಬಗ್ಗೆ ಸರ್ವೇ ಮಾಡುತ್ತಿವೆ. ಏಕ್‌'ದಂ ವಿರೋಧಕ್ಕೆ ಕಾರಣವೇನೆಂಬ ಬಗ್ಗೆಯೂ ಸ್ಟಡಿ ನಡೆಯುತ್ತಿದೆ.

ಮೋದಿಗೆ ಆರ್ಥಿಕ ಹಿಂಜರಿಕೆ:
ಭೀತಿ ರಾಷ್ಟ್ರೀಯ ಕಾರ್ಯಕಾರಿಣಿಗೆ ದೆಹಲಿಗೆ ಬಂದಿದ್ದ ಬಹುತೇಕ ಬಿಜೆಪಿ ಸಂಸದರು, ಶಾಸಕರನ್ನು ಪತ್ರಕರ್ತರು ಖಾಸಗಿಯಾಗಿ ಮಾತನಾಡಿಸಿದಾಗ ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಗ್ಗೆಯೇ ಆತಂಕ ವ್ಯಕ್ತಪಡಿಸುತ್ತಾರೆ. ಇದು ಹೀಗೆಯೇ ಮುಂದುವರಿದರೆ ರಾಜಕೀಯವಾಗಿ ಬಹಳ ನಷ್ಟವಾಗಬಹುದು ಎಂಬುದು ಸಂಸದರ ಚಿಂತೆಗೆ ಮುಖ್ಯ ಕಾರಣ. ಆದರೆ ಯಾವ ಸಂಸದರಿಗೂ ನೇರವಾಗಿ ಪ್ರಧಾನಿ ಮೋದಿ ಬಳಿಯೋ ಅಥವಾ ಅಮಿತ್ ಶಾ ಬಳಿಯೋ ಹೋಗಿ ತಮ್ಮ ಅನಿಸಿಕೆ ಹೇಳುವ ಧೈರ್ಯ ಇದ್ದಂತೆ ಕಾಣುತ್ತಿಲ್ಲ. ಕೆಲ ಸಂಸದರು ಹಾಗೂಹೀಗೂ ಮೋದಿಯ ಆಪ್ತ ಸಚಿವರ ಬಳಿ ವಿಷಯ ಪ್ರಸ್ತಾಪಿಸಿದರೂ ಕೂಡ ಜಿಎಸ್‌'ಟಿ ಜಾರಿಯಾಗಿದೆ, ಈಗ ಕಷ್ಟ ನಿರೀಕ್ಷಿತ, ಮುಂದಿನ ಬಜೆಟ್ ಮಂಡನೆಯಾಗಲಿ, ಎಲ್ಲವೂ ಸರಿಯಾಗುತ್ತದೆ, ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಚೆನ್ನಾಗಿ ಆಗುತ್ತದೆ ಎಂಬ ಸಿದ್ಧ ಉತ್ತರ ಬರುತ್ತದೆಯಂತೆ. ಅಂದಹಾಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಹಿಡಿದು ಬೇಳೆಯವರೆಗೆ ಎಲ್ಲವೂ ತುಟ್ಟಿಯಾಗಿದೆ. ಅಷ್ಟೇ ಅಲ್ಲ, ರಿಯಲ್ ಎಸ್ಟೇಟ್‌'ನಿಂದ ಹಿಡಿದು ಗಣಿಗಾರಿಕೆ, ಟೆಲಿಕಾಂವರೆಗೆ ಎಲ್ಲ ವ್ಯಾಪಾರಗಳು ಮಂದವಾಗಿವೆ ಎಂದು ಸ್ವತಃ ಬಿಜೆಪಿ ಸಂಸದರೇ ಪತ್ರಕರ್ತರ ಎದುರು ಹೇಳಿಕೊಳ್ಳುತ್ತಾರೆ. ಇದು ಸದಾ ಜನಸಾಮಾನ್ಯರ ನಾಡಿಮಿಡಿತ ಅರಿತು ನಿರ್ಣಯ ತೆಗೆದುಕೊಳ್ಳುವ ಮೋದಿ ಅವರಿಗೂ ಗೊತ್ತಿಲ್ಲ ಎಂದೇನಿಲ್ಲ. ಕುಸಿಯುತ್ತಿರುವ ಆರ್ಥಿಕ ಸ್ಥಿತಿ ನೋಡಿಯೇ ಮೋದಿ ಸಾಹೇಬರು ತಮಗೆ ಸಲಹೆ ನೀಡುವ ಆರ್ಥಿಕ ತಜ್ಞರ ಸಮಿತಿ ಪುನಾರಚಿಸಿದ್ದಾರೆ. ಇವೆಲ್ಲ ಗುಸುಗುಸುಗಳು ಗುಜರಾತ್ ಚುನಾವಣಾ ಫಲಿತಾಂಶ ಬರುವವರೆಗೆ ಮುಂದುವರೆಯುತ್ತವೆ. ಒಂದು ವೇಳೆ ಗುಜರಾತ್ ಗೆದ್ದರೆ ಗುಸು ಗುಸು ಮಾಡುವವರೇ ಬಹುಪರಾಕ್ ಹೇಳುತ್ತಾರೆ. ಸೋತರೆ ಗುಸು ಗುಸು ಹೇಳುವವರೇ ಬಂಡಾಯದ ಗಂಟೆ ಮೊಳಗಿಸುತ್ತಾರೆ. ರಾಜಕೀಯವೆಂದರೆ ಹೀಗೆ, ಇಲ್ಲಿ ಯಶಸ್ಸು ಮತ್ತು ವೈಫಲ್ಯ ಮುಂದಿನ ಚುನಾವಣೆಯ ಸೋಲು ಗೆಲುವನ್ನು ಅವಲಂಬಿಸಿರುತ್ತದೆ.

ಬ್ರೀಫಿಂಗ್ ನಿರ್ಮಲಾ:
ರಕ್ಷಣಾ ಸಚಿವರಾದ ಮೇಲೆ ನಿರ್ಮಲಾ ಸೀತಾರಾಮನ್ ದಿನವೂ ಸೌತ್‌'ಬ್ಲಾಕ್‌'ನಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ. ದಿನಕ್ಕೆ 4 ಗಂಟೆ ಆರ್ಮಿ ಅಧಿಕಾರಿಗಳಿಂದ ನಿರ್ಮಲಾ ಬ್ರೀಫಿಂಗ್ ತೆಗೆದುಕೊಳ್ಳುತ್ತಾರಂತೆ. ಸ್ವತಃ ಪ್ರಧಾನಿ ಮೋದಿ ನಿರ್ಮಲಾರನ್ನು ಕರೆದು ಮುಂದಿನ 3 ತಿಂಗಳು ರಕ್ಷಣಾ ಇಲಾಖೆ ಬಗ್ಗೆ ಚೆನ್ನಾಗಿ ಅರಿತುಕೊಳ್ಳಿ, ಅಲ್ಲಿಯವರೆಗೆ ಮಾಧ್ಯಮಗಳ ಜೊತೆ ಮಾತನಾಡಬೇಡಿ ಎಂದು ಹೇಳಿದ್ದರಂತೆ. ಹೀಗಾಗಿ ದಿನವೂ 8ರಿಂದ 9 ಗಂಟೆ ರಕ್ಷಣಾ ಇಲಾಖೆಯ ಫೈಲ್‌'ಗಳ ಅಭ್ಯಾಸ ನಡೆಸಿರುವ ನಿರ್ಮಲಾ ಈಗಾಗಲೇ ಒಂದು ತಿಂಗಳಲ್ಲಿ ಸಿಯಾಚಿನ್ ಬೇಸ್ ಕ್ಯಾಂಪ್ ಸೇರಿದಂತೆ 6 ರಾಜ್ಯಗಳ 7 ಯುದ್ಧ ಸನ್ನದ್ಧ ಪೋಸ್ಟ್‌'ಗಳಿಗೆ ಭೇಟಿ ನೀಡಿದ್ದಾರೆ.

ಹೊರಗಿನವರು ಬೇಡ:
ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಕುಲ್ ರಾಯ್ ಅವರನ್ನು ಪಕ್ಷದಲ್ಲಿ ಸೇರಿಸಿಕೊಳ್ಳಲು ಬಿಜೆಪಿಯೊಳಗೆ ಆಯಾ ರಾಜ್ಯಗಳಲ್ಲಿ ಬಹಳ ವಿರೋಧ ಎದ್ದಿದೆ. ಬಿಜೆಪಿ ನೀಡಿದ ಭರವಸೆಯ ಮೇಲೆ ಕಾಂಗ್ರೆಸ್‌ನಿಂದ ಹೊರಗೆ ಬಂದ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಪ್ರಬಲರಾಗಿರುವ ನಾರಾಯಣ ರಾಣೆ ಅವರನ್ನು ಸೇರಿಸಿಕೊಳ್ಳಲು ಗಡ್ಕರಿ ಎಷ್ಟೇ ಪ್ರಯತ್ನಿಸಿದರೂ ಕೂಡ ಸ್ಥಳೀಯ ನಾಯಕರ ವಿರೋಧದಿಂದಾಗಿ ಸಾಧ್ಯವಾಗದೆ ರಾಣೆ ತಮ್ಮದೇ ಸ್ವಾಭಿಮಾನಿ ಪಕ್ಷ ಸ್ಥಾಪಿಸಿದ್ದಾರೆ. ಇನ್ನು ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಮುಕುಲ್ ರಾಯ್ ಕೊನೆಗೂ ತೃಣಮೂಲದಿಂದ ಹೊರಬಂದಿದ್ದರೂ ಬಿಜೆಪಿ ಒಳಗೆ ತೆಗೆದುಕೊಳ್ಳಲು ಮಾತ್ರ ಬಹಳ ವಿರೋಧವಿದೆ. ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲು ಕೂಡ ಆಗುತ್ತಿಲ್ಲ.

ಇದನ್ನೂ ಓದಿ: ರಾಹುಲ್ ಬಗ್ಗೆ ಗಡ್ಕರಿ 'ಬಂಡು'; ರಾಹುಲ್ ಮಂದಿರ ಯಾತ್ರೆ

- ಪ್ರಶಾಂತ್ ನಾತು, ಸುವರ್ಣನ್ಯೂಸ್
epaperkannadaprabha.com

Follow Us:
Download App:
  • android
  • ios