ಕಾಂಗ್ರೆಸ್ ನಾಯಕರ ನಡುವೆ ಹೆಚ್ಚಿದೆಯಾ ಒಳಜಗಳ..?

First Published 16, Jan 2018, 1:26 PM IST
india gate article
Highlights

ಬಹಿರಂಗವಾಗಿ ಒಟ್ಟಾಗಿದ್ದರೂ ಕಾಂಗ್ರೆಸ್ ನಾಯಕರು ಒಳಗಡೆಯಿಂದ ಹೇಗೆ ಚುಚ್ಚುತ್ತಾರೆ, ಕೆಡವುತ್ತಾರೆ ಎನ್ನುವುದು ರಾಹುಲ್ ಗಾಂಧಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಮೊನ್ನೆ ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ, ಮುನಿಯಪ್ಪ ಅವರಿಗೆ ರಾಹುಲ್ ಪದೇ ಪದೇ ಒಟ್ಟಾಗಿ ಹೋಗಿ, ಜಗಳವಾಡಬೇಡಿ ಎಂದು ಹೇಳಿ ಕಳುಹಿಸಿದ್ದಾರೆ.

ಬೆಂಗಳೂರು (ಜ.16): ಬಹಿರಂಗವಾಗಿ ಒಟ್ಟಾಗಿದ್ದರೂ ಕಾಂಗ್ರೆಸ್ ನಾಯಕರು ಒಳಗಡೆಯಿಂದ ಹೇಗೆ ಚುಚ್ಚುತ್ತಾರೆ, ಕೆಡವುತ್ತಾರೆ ಎನ್ನುವುದು ರಾಹುಲ್ ಗಾಂಧಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಮೊನ್ನೆ ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ, ಮುನಿಯಪ್ಪ ಅವರಿಗೆ ರಾಹುಲ್ ಪದೇ ಪದೇ ಒಟ್ಟಾಗಿ ಹೋಗಿ, ಜಗಳವಾಡಬೇಡಿ ಎಂದು ಹೇಳಿ ಕಳುಹಿಸಿದ್ದಾರೆ.

ಹೀಗಾಗಿಯೇ ಮೊದಲಿಗೆ ಎಲ್ಲರೊಂದಿಗೆ ಪ್ರತ್ಯೇಕವಾಗಿ ತನ್ನ ಮನೆಯ ಗಾರ್ಡನ್’ನಲ್ಲಿ ವಾಕಿಂಗ್ ಮಾಡುತ್ತಾ ಮಾತನಾಡಿದ ರಾಹುಲ್ ಏಕಾಂತದಲ್ಲಿ ಮತ್ತು ನಂತರ ಜೊತೆಯಾಗಿರುವಾಗ ‘ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಗೆಲ್ಲೋದು ಹೇಗೆ ಎಂದು ನೋಡಿ’ ಎಂದು ಒತ್ತಿ ಒತ್ತಿ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ ಮೋದಿ ಮತ್ತು ಅಮಿತ್ ಶಾ, ಸಿದ್ದರಾಮಯ್ಯ ಮೇಲೆ ಟೀಕಾ ಪ್ರಹಾರ ನಡೆಸಿದರೆ ಕೂಡಲೇ ಪರಮೇಶ್ವರ್, ಖರ್ಗೆ ಕೂಡ ಮಾತನಾಡಬೇಕು ಎಂದು ಹೇಳುತ್ತಿದ್ದರಂತೆ.

ರಾಹುಲ್-ಅಮಿತ್ ಶಾ ಮುನಿಸು

ರಾಜಕಾರಣಿಗಳು ಸಂಸತ್ತಿನ ಒಳಗಡೆ ಎಷ್ಟೇ ಬೈದಾಡಿಕೊಂಡರೂವ ಸೆಂಟ್ರಲ್ ಹಾಲ್‌ಗೆ ಬಂದಾಗ ಒಟ್ಟಿಗೆ ಕುಳಿತು ಕಾಫಿ ಕುಡಿಯುವುದು, ಹರಟೆ ಹೊಡೆಯುವುದು ನೆಹರು ಕಾಲದಿಂದಲೂ ನಡೆದುಕೊಂಡು ಬಂದಿರುವ ರೂಢಿ. ಆದರೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಸೆಂಟ್ರಲ್ ಹಾಲ್‌ನಲ್ಲಿ ಎದುರು ಹಾದು ಹೋದರೂ ನಮಸ್ತೆ ಕೂಡ ಎನ್ನುವುದಿಲ್ಲ.

ಪರಿಚಯವೇ ಇಲ್ಲವೇನೋ ಎನ್ನುವ ಥರ ಮುಖದಲ್ಲಿ ಯಾವುದೇ ಭಾವನೆ ತೋರಿಸದೆ ಹೋಗುತ್ತಾರೆ. ರಾಹುಲ್ ಗಾಂಧಿಯವರು ಅಡ್ವಾಣಿ, ಮುರಳಿ ಮನೋಹರ ಜೋಶಿ ಬಂದರೆ ಕೈ ಮುಗಿಯುತ್ತಾರೆ. ಅಮಿತ್ ಶಾ ಕೂಡ ದೇವೇಗೌಡರು, ಮುಲಾಯಂ, ಖರ್ಗೆ ಸಿಕ್ಕರೆ ನಕ್ಕು ನಮಸ್ಕಾರ ಎನ್ನುತ್ತಾರೆ. ಹಿಂದೊಮ್ಮೆ ಅಮಿತ್ ಶಾ ಮಗನ ಮದುವೆ ಆಮಂತ್ರಣವನ್ನು ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಹೇಳಿದರೂ ಕೂಡ ಸೋನಿಯಾ ಗಾಂಧಿಗೆ ಕೊಡುವುದು ನನ್ನಿಂದ ಆಗೋಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದರಂತೆ.

1996ರಲ್ಲಿ ಪಾರ್ಲಿಮೆಂಟ್‌ಗೆ ಆರಿಸಿ ಬಂದ ರಾಹುಲ್ ತಾಯಿ ಸೋನಿಯಾ ಗಾಂಧಿ ಕೂಡ ಎದುರಿಗೆ ವಾಜಪೇಯಿ ಸಿಕ್ಕರೂ ಹಲೋ ಎನ್ನುತ್ತಿರಲಿಲ್ಲವಂತೆ. ಆದರೆ 1998 ರಲ್ಲಿ ಒಂದು ಮತದಿಂದ ವಿಶ್ವಾಸಮತ ಸೋತು ರಾಷ್ಟ್ರಪತಿ ಭವನಕ್ಕೆ ಹೋಗಿ ರಾಜೀನಾಮೆ ಕೊಟ್ಟು ಮರಳಿ ಸಂಸತ್ತಿನ ಕಾರಿಡಾರ್‌ಗೆ ಬಂದ ಅಟಲ್ ಅವರು ಸೋನಿಯಾ ಸಿಕ್ಕಾಗ ಜೋರಾಗಿ ನಗುತ್ತಾ ‘ಮೊಹತರಮಾ ತಾಜ್ ತೋ ಉತಾರ ಹಿ ದಿಯಾ ಅಬ್ ತೋ ಮುಸ್ಕುರಾದೋ’ ಎಂದು ಹೇಳಿದ್ದರಂತೆ.

ಕಸಿ ವಿಸಿ ಮುನಿಯಪ್ಪ

ಚುನಾವಣೆಗೆ ಮೊದಲು ಹೇಗಾದರೂ ಮಾಡಿ ಸದಾಶಿವ ಆಯೋಗದ ವರದಿ ಜಾರಿಗೆ ಪ್ರಯತ್ನ ನಡೆಸಿರುವ ಎಡಗೈ ದಲಿತ ಸಂಸದ ಕೆ.ಎಚ್ ಮುನಿಯಪ್ಪ ರಾಹುಲ್ ಗಾಂಧಿ ನಿವಾಸದಿಂದ ಕರ್ನಾಟಕದ ನಾಯಕರ ಜೊತೆಗೆ ಹೊರಗೆ ಬಂದಾಗ ಬಹಳ ಕಸಿವಿಸಿಯಲ್ಲಿದ್ದರು. ಸಭೆಯ ಒಳಗಡೆ ಕೂಡ ಇದನ್ನು ಮುನಿಯಪ್ಪ ಪ್ರಸ್ತಾಪಿಸಿದರೂ, ರಾಹುಲ್ ಮಾತ್ರ ಸ್ಥಳೀಯವಾಗಿ ನೀವೇ ನಿರ್ಣಯ ತೆಗೆದುಕೊಳ್ಳಿ. ಖರ್ಗೆಜೀ ಇದ್ದಾರಲ್ಲ ಎಲ್ಲರೂ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ. ನೇರವಾಗಿ ಖರ್ಗೆ, ಪರಮೇಶ್ವರ್ ಸದಾಶಿವ ಆಯೋಗದ ಬಗ್ಗೆ ಏನೂ ಪತ್ರಕರ್ತರ ಎದುರಿಗೆ ಹೇಳಿಕೊಳ್ಳಲು ತಯಾರಿರಲಿಲ್ಲ.

ಸಭೆ ಮುಗಿದು ಪತ್ರಿಕಾಗೋಷ್ಠಿ ಬಳಿಕ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಗಡಿಬಿಡಿಯಲ್ಲಿ ಹೊರಟಿದ್ದರೂ, ಹತ್ತು ನಿಮಿಷ ಮಾತನಾಡಲೇಬೇಕು ಎಂದು ಅವರ ಕಾರು ಹತ್ತಿದ ಮುನಿಯಪ್ಪ ಸಿಟ್ಟಿನಿಂದ ತೆಲುಗಿನಲ್ಲಿ ಇನ್ನೊಬ್ಬ ಜಂಟಿ ಉಸ್ತುವಾರಿ ಮಧುಯಾಕ್ಷಿ ಗೌಡನನ್ನು ಬೇಗ ಬಾ ಮಾರಾಯ ನಮ್ಮ ಜನರ ನೋವನ್ನು ಹೇಳಬೇಕು ಎಂದು ಕೂಗಿ ಕಾರ್ ಹತ್ತಿಸಿಕೊಂಡರು. ರಾಹುಲ್ ನಿವಾಸದಲ್ಲಿಯೇ ಏನೋ ಬಿಸಿ ಬಿಸಿ ಮಾತು ನಡೆದಿದ್ದು, ಸಿದ್ದರಾಮಯ್ಯನವರು ವಾಪಸ್ ಹೋಗುವಾಗ ಕೂಡ ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್‌ರನ್ನು ಬೇರೆ ವಿಮಾನದಲ್ಲಿ ಬನ್ನಿ ಎಂದು ಹೇಳಿ ವಿಶೇಷ ವಿಮಾನದಲ್ಲಿ ಖರ್ಗೆ ಮತ್ತು ಮುನಿಯಪ್ಪ ಅವರನ್ನು ಕರೆದುಕೊಂಡು ಹೋದರು. \

ಯಾರೂ ಕೂಡ ಈ ಬಗ್ಗೆ ತುಟಿ ಪಿಟಕ್ ಅನ್ನುತ್ತಿಲ್ಲವಾದರೂ ಕೂಡ ಕೆಲವರು ಮೆಲ್ಲನೆ ಹೇಳುತ್ತಿರುವ ಪ್ರಕಾರ, ‘ಈಗ ಚುನಾವಣೆಯ ಲ್ಲಿ ಇಂಥದನ್ನು ಮಾಡಲು ಹೋದರೆ ಬಿಜೆಪಿಗೆ ಲಾಭವಾಗಬಹುದು. ಜೊತೆಗೆ ಆಂಧ್ರ ಸರ್ಕಾರ ಇದನ್ನು ಮಾಡಿದ್ದಾಗಲೂ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು’ ಎಂದು ಮುನಿಯಪ್ಪನವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ನಡೆಯುತ್ತಿದೆ. ಆದರೆ ಅವರು ಒಪ್ಪುತ್ತಿಲ್ಲ. ಹಳೆ ಮೈಸೂರಿನ ಒಬ್ಬ ಹಿರಿಯ ಕಾಂಗ್ರೆಸ್ಸಿಗ ಹೇಳುವ ಪ್ರಕಾರ ‘ಅಯ್ಯೋ ಮುನಿಯಪ್ಪನವರಿಗೂ ಇದು ಈಗ ಆಗೋಲ್ಲ ಎಂದು ಗೊತ್ತಿದೆ, ಆದರೆ ಈಗ ಇದನ್ನು ಗಟ್ಟಿ ಹಿಡಿದರೆ ನಂತರ ಒಂದಿಷ್ಟು ಟಿಕೆಟ್ ಉದುರುತ್ತವೆ’ ಎಂದು ತಮಾಷೆ ಮಾಡುತ್ತಿದ್ದರು.

loader