Asianet Suvarna News Asianet Suvarna News

ಮೋದಿ ಜೊತೆ ಹೋಗ್ತಾರಂತೆ ನಿತೀಶ್ ಕುಮಾರ್ 3.0 | ಇಂಡಿಯಾ ಗೇಟ್

ಈಶ್ವರಪ್ಪ ದೆಹಲಿಯಲ್ಲಿ ರಾಮನಾಥ್ ಕೋವಿಂದ್ ಮನೆಗೆ ಹೋದಾಗ ಅವರು ಕೇಳಿದ ಮೊದಲ ಪ್ರಶ್ನೆಯೇ 'ಕ್ಯಾ ಈಶ್ವರಪ್ಪಜಿ ಆಪ್ ಕಾ ಯಡಿಯೂರಪ್ಪ ಜಿ ಕೆ ಸಾಥ್ ಝಗತಾ ಖತಂ ಹುವಾ' ಎಂದು. ಇದಕ್ಕೆ ಹರಕು ಮುರುಕು ಹಿಂದಿಯಲ್ಲಿ ಜವಾಬು ನೀಡಿದ ಈಶ್ವರಪ್ಪ ಒಳಗೆ ನಮ್ಮ ಮಧ್ಯೆ ಮಾತುಕತೆಯೇ ಇಲ್ಲ. ಆದರೆ ಅಮಿತ್ ಶಾ ಹೇಳಿರುವುದರಿಂದ ಹೊರಗಡೆ ಸರಿಯಿದೆ ಎಂದು ತೋರಿಸುತ್ತಿದ್ದೇವೆ ಎಂದು ಹೇಳಿದರಂತೆ.

india gate 2017 july 11 nitish kumar 3 going with modi

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಮಂಗಳವಾರ ಬೆಳಗ್ಗೆ ಪಾಟ್ನಾದಲ್ಲಿ ನಿತೀಶ್‌'ಕುಮಾರ್ ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಲಾಲು ಪುತ್ರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಲಾಲು ಮತ್ತು ಕಾಂಗ್ರೆಸ್ ಜೊತೆಗಿನ ಮಹಾಘಟ್ ಬಂಧನ್ ಅನ್ನು ಕೊನೆಗಾಣಿಸುವ ಎಚ್ಚರಿಕೆಯನ್ನು ನೀಡಲಿದ್ದಾರೆ. ನಿತೀಶ್‌ಕುಮಾರ್ ಆಪ್ತ ಸಂಸದರೇ ಹೇಳುತ್ತಿರುವ ಪ್ರಕಾರ ಮುಂದಿನ ೪ ತಿಂಗಳಲ್ಲಿ ನಿತೀಶ್ ಬಿಜೆಪಿ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳಲಿದ್ದಾರೆ. ನೋಟು ರದ್ದತಿಯ ಸಮಯದಿಂದ ಹಿಡಿದು ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲದ ನಿರ್ಧಾರ ಲಾಲು ಮೈತ್ರಿಯಿಂದ ಹೊರಬಂದು ಬಿಜೆಪಿ ಜೊತೆ ಪಯಣಿಸುವ ನಿರ್ಣಯದ ತಯಾರಿ ಅಷ್ಟೇ ಅಂತೆ. ಅಂದ ಹಾಗೆ ಮೊದಲನೇ ಅವತಾರದಲ್ಲಿ ನಿತೀಶ್ ಕುಮಾರ್ ೧.೦ ಬಿಜೆಪಿ ಜೊತೆ ಸೇರಿಕೊಂಡು ಲಾಲು ಜಂಗಲ್ ರಾಜ್ ಕೊನೆಗಾಣಿಸುತ್ತೇನೆ ಎಂದು ಅಧಿಕಾರ ಹಿಡಿದಿದರು. ಎರಡನೇ ಅವತಾರದಲ್ಲಿ ನಿತೀಶ್ ೨.೦ ಲಾಲು ಜೊತೆ ಸೇರಿಕೊಂಡು ಮೋದಿ ರಥ ಮುಂದೆ ಹೋಗದಂತೆ ತಡೆಹಿಡಿದಿದರು. ಆದರೆ ಮೂರನೇ ಅವತಾರದಲ್ಲಿ ನಿತೀಶ್ ೩.೦ ಪುನರಪಿ ಬಿಜೆಪಿ ಜೊತೆ ಸೇರಿಕೊಂಡು ೨೦೧೯ರಲ್ಲಿ ಕಾಂಗ್ರೆಸ್ ದಿಲ್ಲಿ ಹಾದಿ ಹಿಡಿಯದಂತೆ ಮಾಡಲು ಮೋದಿಗೆ ನೆರವಾಗುತ್ತಿದ್ದಾರೆ. ಅಂದ ಹಾಗೆ ಮೇವು ಹಗರಣದಲ್ಲಿ ಲಾಲು ಮಾತ್ರ ಜೈಲಿಗೆ ಹೋಗಿದ್ದರು. ಆದರೆ ಈಗ ಬೆಳಕಿಗೆ ಬರುತ್ತಿರುವ ಭೂ ಹಗರಣದಲ್ಲಿ ಲಾಲು ಪತ್ನಿ ರಾಬ್ಡಿ ದೇವಿ, ಪುತ್ರರಾದ ತೇಜಸ್ವಿ ಮತ್ತು ತೇಜಪ್ರತಾಪ್, ಪುತ್ರಿ ವೀಸಾ ಭಾರತಿ, ರಾಗಿಣಿ ಮತ್ತು ಚಂದಾ ಹೀಗೆ ಎಲ್ಲರೂ ಸಿಲುಕಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆವರೆಗೆ ಲಾಲು ಜೊತೆ ಇದ್ದರೆ ಜೆಡಿಯು ನಿರ್ನಾಮವಾಗಿ ಆರ್‌ಜೆಡಿ ಏಕಾಂಗಿಯಾಗಿ ಅಧಿಕಾರಕ್ಕೆ ಬಂದರು ಬರಬಹುದು ಎಂಬ ಆತಂಕ ಇರುವ ನಿತೀಶ್ ಈಗಲೇ ಬಿಜೆಪಿ ಜೊತೆಗೆ ಬರುವ ನಿರ್ಣಯಕ್ಕೆ ಮುಂದಾಗುತ್ತಿದ್ದಾರೆ. ಇನ್ನು ನಿತೀಶ್ ಒಬ್ಬರನ್ನು ತಮ್ಮತ್ತ ಸೆಳೆದುಕೊಂಡರೆ ೨೦೧೯ರಲ್ಲಿ ಕಾಂಗ್ರೆಸ್ ರೂಪಿಸಬಹುದಾದ ಮಹಾಮೈತ್ರಿಯನ್ನು ತಡೆಯಬಹುದು ಎಂಬ ಲೆಕ್ಕಾಚಾರ ಮೋದಿ ಸಾಹೇಬರದು.

ಇಸ್ರೇಲ್ ಫಾರ್ಮುಲ:
ಪ್ರಧಾನಿ ಮೋದಿ ತಮ್ಮ ಇಸ್ರೇಲ್ ಪ್ರವಾಸಕ್ಕೂ ಮುನ್ನ ಕೆಲ ತಿಂಗಳುಗಳ ಹಿಂದೆ ಇಸ್ರೇಲ್ ಮಾಜಿ ಪ್ರಧಾನಿ ಶಿಮೊನ್ ಪೆರಿಸ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರಂತೆ. ಮಾತನಾಡುವಾಗ ಮೋದಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದಾಗ ಶಿಮೊನ್ ೭೦ ವರ್ಷಗಳ ವಿವಾದಕ್ಕೆ ಒಂದೇ ಪರಿಹಾರ ಕಾಶ್ಮೀರದಲ್ಲಿ ನಿಮ್ಮ ದೇಶದ ಬೇರೆ ರಾಜ್ಯಗಳ ಜನರನ್ನು ತುಂಬಿ ಎಂದು ಸಲಹೆ ಕೊಟ್ಟರಂತೆ. ಆದರೆ ಭಾರತದ ಸಂವಿಧಾನದ ಆರ್ಟಿಕಲ್ ೩೭೦ಅನ್ನು ಮೋದಿ ಶಿಮೊನ್‌ರಿಗೆ ವಿವರಿಸಬೇಕಾಯಿತಂತೆ.

ಹಾರಲು ನಾನೊಲ್ಲೆ:
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರಿಗೆ ಹಾರುವುದೆಂದರೆ ಆಗೋಲ್ಲ. ಆದಷ್ಟು ವಿಮಾನ ಹಾರಾಟ ಬೇಡ ಎನ್ನುವ ಉಮಾ ಭಾರತಿ ರಸ್ತೆ ಮತ್ತು ರೈಲು ಮೂಲಕವೇ ಪ್ರವಾಸ ಮಾಡಲು ಇಷ್ಟಪಡುತ್ತಾರಂತೆ. ಆದರೆ ತಾನು ಇಸ್ರೇಲ್ ಪ್ರವಾಸಕ್ಕೆ ಹೋಗುವ ಮುನ್ನ ದ್ವಿ-ಪಕ್ಷೀಯ ಮಾತುಕತೆಗಳ ಕರಡಿನ ತಯಾರಿಗಾಗಿ ಮೋದಿ ಉಮಾ ಭಾರತಿ ಅವರಿಗೆ ಟೆಲ್ ಅವೀವಾಗೆ ಹೋಗಲು ಹೇಳಿದ್ದರಂತೆ. ಪ್ರಧಾನಿ ಹೇಳಿದ್ದಕ್ಕೆ ಒಪ್ಪಿಕೊಂಡ ಉಮಾ ಭಾರತಿ ವಿಮಾನದಲ್ಲಿ ಹಾರುವ ದಿನ ಬಂದಾಗ ಮಾತ್ರ ಬೆಳಗ್ಗೆ ಏಮ್ಸ್ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆದರಂತೆ. ನಂತರ ತಮ್ಮ ಇಲಾಖಾ ಕಾರ್ಯದರ್ಶಿಗಳನ್ನು ವಿದೇಶಕ್ಕೆ ಕಳುಹಿಸಿದ ಉಮಾ ಮರುದಿನ ಆಸ್ಪತ್ರೆಯಿಂದ ಮನೆಗೆ ಬಂದರಂತೆ.

ಸಿನ್ಹಾ ಎಡವಟ್ಟು:
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ರೇಸ್‌ನಲ್ಲಿದ್ದ ಕೇಂದ್ರ ಸಚಿವ ಮನೋಜ್ ಸಿನ್ಹಾ ಸಂಪುಟ ವಿಸ್ತರಣೆಗೂ ಮುನ್ನ ಎಡವಟ್ಟು ಮಾಡಿಕೊಂಡು ಪ್ರಧಾನಿ ಮೋದಿ ಅವರಿಂದಲೇ ಬೈಸಿಕೊಂಡಿದ್ದಾರೆ. ಇತ್ತೀಚೆಗೆ ಮನೋಜ್ ಸಿನ್ಹಾ ಬಳಿ ಅವರ ಮಿತ್ರನೊಬ್ಬ ಬಂದು ದೇಶದ ಅತ್ಯಂತ ದೊಡ್ಡ ಟೆಲೆಕೋಮ್ ಕಂಪನಿಯಲ್ಲಿ ಮಗನಿಗೆ ಉದ್ಯೋಗ ಕೊಡಿಸಿ ಎಂದು ಗಂಟು ಬಿದ್ದನಂತೆ. ಅದಕ್ಕೇನಂತೆ ಎಂದು ಕೂಡಲೇ ದೇಶದ ಖ್ಯಾತ ಉದ್ಯೋಗಪತಿಗೆ ಫೋನಾಯಿಸಿದ ಸಿನ್ಹಾ ನಾನು ಹೇಳಿದ ವ್ಯಕ್ತಿಗೆ ಉದ್ಯೋಗ ಕೊಡಿಸಬೇಕು ಎಂದು ಹೇಳಿದರಂತೆ. ಆದರೆ ಮರುದಿನ ವಿಷಯ ಮೋದಿ ಸಾಹೇಬರಿಗೆ ತಿಳಿದು ಮನೋಜ್ ಸಿನ್ಹಾಗೆ ಕ್ಲಾಸ್ ತೆಗೆದುಕೊಂಡರಂತೆ. ಮುಂದಿನ ತಿಂಗಳು ನಡೆಯಬಹುದು ಎಂದು ಎಲ್ಲರೂ ಹೇಳುತ್ತಿರುವ ಸಂಪುಟ ವಿಸ್ತರಣೆಯಲ್ಲಿ ರಾಜ್ಯಸಚಿವ ಸ್ಥಾನದಿಂದ ಕ್ಯಾಬಿನೆಟ್‌ಗೆ ಸಿನ್ಹಾ ಬಡ್ತಿ ಪಡೆಯಬಹುದು ಎಂದು ಎಲ್ಲರೂ ಹೇಳುತ್ತಿರುವಾಗ ಈ ಎಡವಟ್ಟು ದಿಲ್ಲಿ ಪತ್ರಕರ್ತರ ವಲಯದಲ್ಲಿ ಮಾತ್ರ ಜೋರಾಗಿ ಹರಿದಾಡುತ್ತಿದೆ.

ಈಶ್ವರಪ್ಪ ಮತ್ತು ನಿದ್ರೆ:
ರಾಜಕಾರಣಿಗಳು ನಿದ್ರೆ ಮಾಡುವುದು ಅಪರೂಪ. ಅದಕ್ಕಾಗಿ ಮಾತ್ರೆ ನುಂಗುವವರೇ ಜಾಸ್ತಿ. ಆದರೆ ನಮ್ಮ ಈಶ್ವರಪ್ಪ ಮಾತ್ರ ಸುಖ ಪುರುಷ. ಕಳೆದ ವಾರ ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಹರಟೆ ಹೊಡೆಯುತ್ತಿದ್ದಾಗ ಏನೇ ಜಂಜಾಟವಿರಲಿ, ಎಲ್ಲೇ ಇರಲಿ ಮಧ್ಯಾಹ್ನ ೨ ಗಂಟೆ ನಿದ್ರೆ ಮಾಡುವುದನ್ನು ಮಾತ್ರ ಮರೆಯೋಲ್ಲ ಎಂದು ಈಶ್ವರಪ್ಪ ಹೇಳಿಕೊಳ್ಳುತ್ತಿದ್ದರು. ನಾನು ಯಾವತ್ತೂ ಡಯಟ್ ಮಾಡಿದವನಲ್ಲ ಎಂದು ಹೇಳುತ್ತಿದ್ದ ಈಶ್ವರಪ್ಪ ಬೆಳಗ್ಗೆ ಮಾತ್ರ ತಪ್ಪದೆ ಒಂದು ಗಂಟೆ ಶಟಲ್ ಆಡುತ್ತಾರಂತೆ. ನೀವು ನಿದ್ದೆ ಮಾಡುತ್ತೀರಿ ಬಿಡಿ. ಆದರೆ ಆಗಾಗ ಪಾಪ ಯಡಿಯೂರಪ್ಪನವರ ನಿದ್ದೆ ಹಾರಿಸುತ್ತೀರಿ ಎಂದು ಪತ್ರಕರ್ತರೊಬ್ಬರು ಹೇಳಿದಾಗ ಈಶ್ವರಪ್ಪ ಖುಷಿಯಿಂದ ಜೋರಾಗಿ ಗಹಗಹಿಸಿ ನಕ್ಕರು. ಅಂದ ಹಾಗೆ ಈಶ್ವರಪ್ಪ ದೆಹಲಿಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಮನೆಗೆ ಹೋದಾಗ ಅವರು ಕೇಳಿದ ಮೊದಲ ಪ್ರಶ್ನೆಯೇ ‘ಕ್ಯಾ ಈಶ್ವರಪ್ಪ ಜಿ ಆಪ್ ಕಾ ಯಡಿಯೂರಪ್ಪ ಜಿ ಕೆ ಸಾಥ್ ಝಗಡಾ ಖತಂ ಹುವಾ’ ಎಂದು. ಇದಕ್ಕೆ ಹರಕು ಮುರಕು ಹಿಂದಿಯಲ್ಲಿ ಜವಾಬು ನೀಡಿದ ಈಶ್ವರಪ್ಪ ಒಳಗೆ ನಮ್ಮ ಮಧ್ಯೆ ಮಾತುಕತೆಯೇ ಇಲ್ಲ. ಆದರೆ ಅಮಿತ್ ಶಾ ಹೇಳಿರುವುದರಿಂದ ಹೊರಗಡೆ ಸರಿಯಿದೆ ಎಂದು ತೋರಿಸುತ್ತಿದ್ದೇವೆ ಎಂದು ಹೇಳಿದರಂತೆ.

ವೇಣುಗೋಪಾಲ್ ಚಿಂತೆ:
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಹಳಷ್ಟು ದಿನ ಬೆಂಗಳೂರಿನಲ್ಲಿಯೇ ಇದ್ದು ಪಕ್ಷದ ಜಗಳ ಬಗೆಹರಿಸಿ ಚುನಾವಣೆಗೆ ಕಾಂಗ್ರೆಸ್‌ಅನ್ನು ರೆಡಿ ಮಾಡುತ್ತಿರುವುದು, ಕರ್ನಾಟಕದ ಬಹುತೇಕ ಬಿಜೆಪಿ ನಾಯಕರ ನಿದ್ದೆ ಗೆಡಿಸಿದ್ದು, ದಿಲ್ಲಿಗೆ ಬರುವ ಅನೇಕ ಹಿರಿಯ ಸಂಸದರು ಶಾಸಕರು ನೋಡಿ ವೇಣುಗೋಪಾಲ್ ಒಳ್ಳೆ ಆರ್‌ಎಸ್‌ಎಸ್ ಕಾರ್ಯಕರ್ತನಂತೆ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿ ಉಸ್ತುವಾರಿ ಆರ್‌ಎಸ್‌ಎಸ್ ಹಿನ್ನೆಲೆಯ ಮುರಳೀಧರ ರಾವ್ ಮಾತ್ರ ಒಳ್ಳೆ ಕಾಂಗ್ರೆಸ್ ದಿಲ್ಲಿ ನಾಯಕರ ಥರ ಬೆಳಗ್ಗೆ ಬರುತ್ತಾರೆ ಸಂಜೆ ಹಾರುತ್ತಾರೆ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ. ಬಿಜೆಪಿ ಮೂಲಗಳು ಹೇಳುವ ಪ್ರಕಾರ ಶ್ರೀಘ್ರದಲ್ಲಿಯೇ ರಾಜ್ಯ ಬಿಜೆಪಿಗೂ ಕೂಡ ಪ್ರತ್ಯೇಕವಾಗಿ ಚುನಾವಣಾ ಉಸ್ತುವಾರಿ ನೇಮಕಗೊಳ್ಳಬಹುದಂತೆ. ಆಗಸ್ಟ್‌ನಲ್ಲಿ ಅಮಿತ್ ಶಾ ಪ್ರವಾಸದಲ್ಲಿ ರಾಜ್ಯ ಬಿಜೆಪಿಯ ಚುನಾವಣಾ ರೋಡ್ ಮ್ಯಾಪ್ ತಯಾರಾಗಲಿದೆಯಂತೆ.

ಅಪ್ಪಾಜಿ ಕಾಣೆಯಾಗಿದ್ದಾರೆ!
ದೆಹಲಿ ಪ್ರತಿನಿಧಿಯಾಗಿ ನೇಮಕಗೊಂಡಾಗಿನಿಂದ ಅಪ್ಪಾಜಿ ನಾಡಗೌಡ ದೆಹಲಿಗೆ ಬಂದಿದ್ದೆ ಕಡಿಮೆ. ಅದು ಕೂಡ ಸಂಪುಟ ವಿಸ್ತರಣೆ ಸುದ್ದಿ ಎಂದಾಗ ಒಮ್ಮೆ ಬರುತ್ತಾರೆ. ಬಿಟ್ಟರೆ ಇತ್ತೀಚೆಗೆ ಮುಖ್ಯಮಂತ್ರಿಗಳು ದೆಹಲಿಗೆ ಬಂದಾಗಲೂ ಅಪ್ಪಾಜಿ ಮಾತ್ರ ಕಾಯಂ ಗೈರು ಹಾಜರು. ಪತ್ರಕರ್ತರು ಪ್ರಶ್ನೆ ಕೇಳಿದರೆ ಇಲ್ಲ ನಾನು ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಆಶ್ಚರ್ಯ ನೋಡಿ ಇತ್ತೀಚೆಗೆ ವಿಜಯಪುರ ಜಿಲ್ಲೆಯಿಂದ ಬಂದಿದ್ದ ಸಾಮಾನ್ಯ ರೈತರಿಗೆ ‘ಅಪ್ಪಾಜಿ ಜಿಲ್ಲೆಯಲ್ಲಿ ಸಿಕ್ತಾರೇನ್ರಿ’ ಎಂದು ಕೇಳಿದರೆ ‘ಅಯ್ಯೋ ಎಲ್ಲಿ ಸರ‌್ರ, ಅವರು ದೆಹಲಿ ಪ್ರತಿನಿಧಿ ನೋಡಿ ಅವರ ಕಾರ್ಯದರ್ಶಿಗಳು ಸಾಹೇಬರು ದಿಲ್ಯಾಗಾ ಇದಾರಾ, ಭಾಳ್ ಬಿಜಿ ಅದಾರಾ’ ಎಂದು ಹೇಳುತ್ತಾರಂತೆ. ಇದೊಂದು ರೀತಿ ಅಲ್ಲಿದ್ದವರಿಗೆ ಇಲ್ಲಿ, ಇಲ್ಲಿದ್ದವರಿಗೆ ಅಲ್ಲಿ ಎಂದು ಹೇಳುವ ಮಿಸ್ಸಿಂಗ್ ಸ್ಟೋರಿ.

ಇನ್ನೊಂದು ಮೊಟ್ಟೆಯ ಕಥೆ:
ಬಾಲ್ಡಿಗಳ ಬಗೆಗಿನ ಚಿತ್ರ ಒಂದು ಮೊಟ್ಟೆಯ ಕಥೆ ರಾಜಧಾನಿ ದೆಹಲಿಯಲ್ಲಿಯೂ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಕಾಯಂ ಬಾಲ್ಡಿಯಾಗಿರುವ ಇಂದ್ರಜಿತ್ ಲಂಕೇಶ್ ಬಗ್ಗೆ. ಕಳೆದ ತಿಂಗಳು ವಿಧಾನಪರಿಷತ್ ನಾಮನಿರ್ದೇಶನ ಪ್ರಕ್ರಿಯೆ ಮುಗಿಯುವವರೆಗೆ ಸಿದ್ದರಾಮಯ್ಯ ದೆಹಲಿಗೆ ಬಂದಾಗೊಮ್ಮೆ ಕರ್ನಾಟಕ ಭವನಕ್ಕೆ ಇಂದ್ರಜಿತ್ ಮತ್ತವರ ಜೊತೆ ಪತ್ರಕರ್ತರೊಬ್ಬರು ಹಾಜರಾದರು. ಸಿದ್ದರಾಮಯ್ಯ ಇವರನ್ನು ಇಂದ್ರ-ಚಂದ್ರ ಎಂದೆಲ್ಲ ಹೊಗಳುತ್ತಿದ್ದರು. ಲಿಂಗಾಯತ ಕೋಟಾದಲ್ಲಿ ಪತ್ರಕರ್ತ ಎಂದು ವಿಧಾನಪರಿಷತ್ತಿಗೆ ನೇಮಿಸಿ ಎಂದು ಇಂದ್ರಜಿತ್ ದಿಗ್ವಿಜಯ್ ಸಿಂಗ್ ಅವರನ್ನು ಒಪ್ಪಿಸಿದ್ದರಂತೆ. ಆದರೆ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಯಾವುದೇ ಕಾರಣಕ್ಕೂ ಇಂದ್ರಜಿತ್‌ಗೆ ಶಾಸಕ ಸ್ಥಾನ ಕೊಡಬೇಡಿ ಎಂದು ಸಹೋದರಿ ಗೌರಿ ಲಂಕೇಶ್ ಮುಖ್ಯಮಂತ್ರಿಗಳಿಗೆ ಫೋನ್ ಮಾಡುತ್ತಿದ್ದರಂತೆ. ತೆಂಡೂಲ್ಕರ್ ಮಗ ತೆಂಡೂಲ್ಕರ್‌ನಷ್ಟೇ ಶ್ರೇಷ್ಠ ಬ್ಯಾಟ್ಸಮನ್ ಆಗಬೇಕು ಎಂದು ಬಯಸುವುದು ನಮ್ಮ ತಪ್ಪು ಅಲ್ಲವೇ?

- ಪ್ರಶಾಂತ್ ನಾತು, ಸುವರ್ಣನ್ಯೂಸ್
epaper.kannadaprabha.in

Follow Us:
Download App:
  • android
  • ios