ಬೀಜಿಂಗ್‌[ಅ.09]: ಕಾಶ್ಮೀರ ವಿಷಯ ಸಂಬಂಧ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ಚೀನಾ ಸರ್ಕಾರ ಪ್ರತಿಪಾದಿಸಿದೆ. ಎರಡು ದಿನಗಳ ಭೇಟಿಗಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಬೀಜಿಂಗ್‌ಗೆ ಆಗಮಿಸಿದ ಬೆನ್ನಲ್ಲೇ ಚೀನಾದಿಂದ ಈ ಹೊರಹೇಳಿಕೆ ಹೊರಬಿದ್ದಿದೆ. ಮತ್ತೊಂದೆಡೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಶುಕ್ರವಾರ ಮೋದಿ ಜೊತೆಗಿನ ಅನೌಪಚಾರಿಕ ಸಭೆಗಾಗಿ ಭಾರತಕ್ಕೆ ಆಗಮಿಸುತ್ತಿರುವ ಮುನ್ನಾ ದಿನಗಳಲ್ಲಿ ಇಂಥದ್ದೊಂದು ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ.

ಚೀನಾ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಜಿಂಪಿಂಗ್‌ ಜತೆ ಮಾತುಕತೆ ನಡೆಸಿದ ಬಳಿಕ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್‌ ಶುವಾಂಗ್‌, ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಮಾತುಕತೆ ನಡೆಸುವ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಚೀನಾ ನಿಲುವು. ಎರಡೂ ರಾಷ್ಟ್ರಗಳಿಗೆ ಈ ಬಗ್ಗೆ ನಾವು ಕರೆ ನೀಡುತ್ತಿದ್ದು, ಇದು ಎರಡೂ ದೇಶಗಳ ಹಿತಾಸಕ್ತಿ ಹಾಗೂ ವಿಶ್ವ ರಾಷ್ಟ್ರಗಳ ಆಕಾಂಕ್ಷೆಗೆ ತಕ್ಕನಾಗಿರುತ್ತದೆ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟಹಾಗೂ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯ ಮಹಾಧಿವೇಶನದ ವೇಳೆ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಚೀನಾ ಭಾರತದ ಆಕ್ಷೇಪವನ್ನು ಎದುರಿಸಿತ್ತು. ಪಾಕಿಸ್ತಾನದೊಂದಿಗೆ ತನ್ನ ಗೆಳೆತನಕ್ಕೆ ಉದಾಹರಣೆಯಾಗಿ ಚೀನಾ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದು, ಸಹಜವಾಗಿಯೇ ಭಾರತದ ಕೆಂಗಣ್ಣಿಗೂ ಗುರಿಯಾಗಿತ್ತು. ಈ ವೇಳೆ ಭಾರತ ಕೂಡಾ ಚೀನಾ ಹೇಳಿಕೆಗೆ ಸೂಕ್ಷ್ಮವಾಗಿ ತಿರುಗೇಟು ನೀಡುವ ಮೂಲಕ ಅದರ ಬಾಯಿ ಮುಚ್ಚಿಸುವ ಯತ್ನ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ನೀಡಿರುವ ಹೇಳಿಕೆ, ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಯಸುವ ಪಾಕಿಸ್ತಾನದ ಬೇಡಿಕೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ.