ಭಾರತ ಪ್ರತಿಕ್ರಿಯೆ ನೀಡಿದಾಗ ತಪ್ಪು ಎಣಿಕೆಯಿಂದ ಪರಮಾಣು ಯುದ್ಧ ನಡೆಯಬಹುದು: ಜ| ಜೋಸೆಫ್‌ ವೊಟೆಲ್‌ ಆತಂಕ

ವಾಷಿಂಗ್ಟನ್‌: ಭಾರತ ಹಾಗೂ ಪಾಕಿಸ್ತಾನ ನಡುವೆ ನಿರಂತರ ತ್ವೇಷಮಯ ಪರಿಸ್ಥಿತಿ ಇದ್ದು, ತಪ್ಪು ಎಣಿಕೆಯಿಂದಾಗಿ ಎರಡೂ ದೇಶಗಳ ನಡುವೆ ಅಣ್ವಸ್ತ್ರ ಸಮರ ನಡೆಯಬಹುದು ಎಂದು ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಿ, ಅದಕ್ಕೆ ಭಾರತ ಪ್ರತಿಕ್ರಿಯೆ ನೀಡಿದಾಗ ತಪ್ಪು ಎಣಿಕೆಯಿಂದ ಪರಮಾಣು ಯುದ್ಧ ನಡೆಯಬಹುದು. ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತ ಕೇಂದ್ರಿತ ದಾಳಿಗಳನ್ನು ನಡೆಸುತ್ತಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಚಿಂತೆ ಭಾರತಕ್ಕಿದೆ. ತನ್ನ ಭೂಭಾಗದಲ್ಲಿರುವ ಭಯೋತ್ಪಾದಕರನ್ನು ಮಟ್ಟಹಾಕಲು ವರ್ಷಾರಂಭದಲ್ಲಿ ಸೇನೆಯನ್ನೂ ಬಳಕೆ ಮಾಡಿಕೊಂಡಿದೆ ಎಂದು ಸಂಸತ್ತಿನ ಸಶಸ್ತ್ರ ಸೇವೆಗಳ ಸಮಿತಿ ಎದುರು ಅಮೆರಿಕದ ಕೇಂದ್ರೀಯ ಕಮಾಂಡ್‌ನ ಕಮಾಂಡರ್‌ ಆಗಿರುವ ಜನರಲ್‌ ಜೋಸೆಫ್‌ ವೊಟೆಲ್‌ ಹೇಳಿಕೆ ನೀಡಿದ್ದಾರೆ. ಭಯೋತ್ಪಾದಕರೆಂದು ಅಮೆರಿಕ ಘೋಷಿಸಿರುವ 20 ವ್ಯಕ್ತಿಗಳಲ್ಲಿ 7 ಮಂದಿ ಪಾಕಿಸ್ತಾನದಲ್ಲೇ ಇದ್ದಾರೆ ಎಂದಿದ್ದಾರೆ.

ಕಾಶ್ಮೀರ ಇತ್ಯರ್ಥಕ್ಕೆ ವಿಶ್ವಸಂಸ್ಥೆ ಒಲವು
ವಿಶ್ವಸಂಸ್ಥೆ: ಹಲವು ವರ್ಷಗಳಿಂದ ಭಾರತ- ಪಾಕಿಸ್ತಾನದ ನಡುವಿನ ಶಾಂತಿ ಸಾಮರಸ್ಯಕ್ಕೆ ಅಡ್ಡಿಯಾಗಿರುವ ಕಾಶ್ಮೀರ ವಿಚಾರವನ್ನು ಉಭಯ ರಾಷ್ಟ್ರಗಳ ಹಿರಿಯ ಅಧಿಕಾರಿ ಗಳೊಂದಿಗೆ ಸಮಾಲೋಚಿಸುವ ಬಗ್ಗೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯಾ ಗುಟೆ ರ್ರಸ್‌ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. 
ಈ ವೇಳೆ ‘ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಅಗತ್ಯವಿರುವ ಎಲ್ಲ ವಿಚಾರಗಳನ್ನು ಅವರು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ' ಎಂದು ಉತ್ತರಿಸಿದರು. 

ಪಾಕ್'ನ ಇಬ್ಬರು ಬಂಧಿತರು ತವರಿಗೆ:
ವಾಘಾ: 19 ಸೈನಿಕರ ಬಲಿ ಪಡೆದ ಜಮ್ಮು- ಕಾಶ್ಮೀರದ ಉರಿ ಸೇನಾ ಕೇಂದ್ರದ ಮೇಲಿನ ದಾಳಿ ಪ್ರಕರಣದಲ್ಲಿ ಬಂಧನವಾಗಿದ್ದ ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕರನ್ನು ಎನ್‌ಐಎ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
ಉರಿ ದಾಳಿಯಲ್ಲಿ ಪಿತೂರಿ ಮಾಡಿದ್ದಾರೆ ಎಂಬ ಆರೋಪ ಕೈಬಿಟ್ಟಹಿನ್ನೆಲೆಯಲ್ಲಿ 6 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಬಾಲಕರಾದ ಫೈ ಸಲ್‌ ಹುಸೇನ್‌ ಅವಾನ್‌ ಮತ್ತು ಅಹ್ಸಾನ್‌ ಖುರ್ಷಿದ್‌ರನ್ನು ಬಿಡುಗಡೆ ಮಾಡಲಾಗಿದೆ. ಉಗ್ರರ ಮಾರ್ಗದರ್ಶಕರಾಗಿದ್ದರು ಎಂಬುದಕ್ಕಾಗಿ ಬಾಲಕರನ್ನು ಬಂಧಿಸಲಾಗಿತ್ತು.

ಪಾಕ್ ಉಗ್ರದೇಶ: ಮಸೂದೆ ವಾಪಸ್
ನವದೆಹಲಿ: ನೆರೆಯ ಪಾಕಿಸ್ತಾನವನ್ನು ಗುರಿ ಯಾಗಿಸಿಕೊಂಡು ಉಗ್ರರಿಗೆ ಸಹಕಾರ ನೀಡುವ ರಾಷ್ಟ್ರಗಳನ್ನು ‘ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರ'ಗಳೆಂದು ಘೋಷಿಸ ಬೇಕೆಂಬ ಖಾಸಗಿ ಮಸೂದೆಯನ್ನು ಪಕ್ಷೇತರ ಸಂಸದ ರಾಜೀವ್‌ ಚಂದ್ರಶೇಖರ್‌ ಹಿಂಪಡೆದಿದ್ದಾರೆ.

ಈ ಹಿಂದೆ ರಾಜೀವ್‌ ಅವರು ರಾಜ್ಯಸಭೆ ಯಲ್ಲಿ ಮಂಡಿಸಿದ್ದ ‘ಭಯೋತ್ಪಾದನಾ ಪ್ರಾಯೋಜಕ' ಮಸೂದೆಗೆ ಇತರ ರಾಜ್ಯ ಸಭಾ ಸದಸ್ಯರು ಪಕ್ಷಾತೀತ ಬೆಂಬಲ ನೀಡಿದ್ದರು. ಆದರೆ, ಇದೀಗ ಅಂಥ ಕಾಯಿದೆಯ ಅಗತ್ಯವಿಲ್ಲ. ಭಯೋತ್ಪಾದನೆ ನಿಗ್ರಹಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಉಗ್ರ ಚಟುವಟಿಕೆ ನಿಯಂತ್ರಿಸಲು ಬೇಕಾದ ಅಗತ್ಯ ಕಾನೂನುಗಳು ಈಗಾಗಲೇ ಅಸ್ತಿತ್ವದಲ್ಲಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಗಂಗಾರಾಮ್‌ ಅಹಿರ್‌ ಸ್ಪಷ್ಟಪಡಿಸಿದರು. ಬಳಿಕ ಖಾಸಗಿ ಮಸೂದೆಯನ್ನು ವಾಪಸ್‌ ಪಡೆಯುವಂತೆ ರಾಜೀವ್‌ ಚಂದ್ರಶೇಖರ್‌ ಅವರಿಗೆ ಕೋರಿದರು. ಇದಕ್ಕೆ ರಾಜೀವ್‌ ಒಪ್ಪಿದರು.

epaper.kannadaprabha.in