ಯುದ್ಧ, ಭಯೋತ್ಪಾದನೆಯಿಂದ ಜರ್ಝರಿತವಾಗಿರುವ ಆಫ್ಘಾನಿಸ್ತಾನಕ್ಕೆ ಈಗ ಆರ್ಥಿಕ ಪುನಶ್ಚೇತನದ ದಾರಿಯಲ್ಲಿದೆ. ಇದಕ್ಕೆ ಅದು ಭಾರತ ಮೊದಲಾದ ಬೃಹತ್ ಮಾರುಕಟ್ಟೆಯ ದೇಶಗಳ ಅಗತ್ಯವಿದೆ.
ಅಮೃತಸರ(ಡಿ. 04): ಭಾರತ ಮತ್ತು ಆಫ್ಘಾನಿಸ್ತಾನದ ನಡುವೆ ಏರ್ ಕಾರಿಡಾರ್ ನಿರ್ಮಾಣ ಮಾಡಲು ಎರಡೂ ದೇಶಗಳು ಯೋಜಿಸಿವೆ. ಇದರೊಂದಿಗೆ ಪಾಕಿಸ್ತಾನದ ನೆರವಿಲ್ಲದೆಯೇ ಎರಡೂ ದೇಶಗಳ ಮಧ್ಯೆ ವ್ಯಾಪಾರ-ವ್ಯವಹಾರ ಸಂಪರ್ಕ ಸಾಧ್ಯವಾಗಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘಾನಿ ಅವರು ಇಂದು ಈ ಬಗ್ಗೆ ಮಾತುಕತೆ ನಡೆಸಿದರು. 6ನೇ 'ಹಾರ್ಟ್ ಆಫ್ ಏಷ್ಯಾ' ಸಮ್ಮೇಳನದ ಉದ್ಘಾಟನೆಗೆ ಮುನ್ನ ಎರಡೂ ದೇಶಗಳ ಮುಖ್ಯಸ್ಥರು ಭೇಟಿಯಾಗಿ ಚರ್ಚೆ ನಡೆಸಿದರು.
ಪಾಕ್ ಯಾಕೆ ಬೇಕಿತ್ತು?
ಆಫ್ಘಾನಿಸ್ತಾನ ಮತ್ತು ಭಾರತದ ಮಧ್ಯೆ ಪಾಕಿಸ್ತಾನ ಬರುವುದರಿಂದ ಎರಡೂ ದೇಶಗಳ ನಡುವೆ ನೇರ ಸಂಪರ್ಕ ಸಾಧ್ಯವಿರಲಿಲ್ಲ. ಭಾರತದೊಂದಿಗೆ ಸಂಪರ್ಕ ಹೊಂದಲು ತನ್ನ ದೇಶದ ರಸ್ತೆ, ರೈಲು ಮಾರ್ಗಗಳನ್ನು ಉಪಯೋಗಿಸುವ ಅವಕಾಶವನ್ನು ಪಾಕಿಸ್ತಾನ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಏರ್ ಕಾರಿಡಾರ್ ನಿರ್ಮಾಣ ಮಾಡುವುದರಿಂದ ಪಾಕಿಸ್ತಾನದ ಮೇಲಿನ ಅವಲಂಬನೆಯನ್ನು ನೀಗಿಸಬಹುದಾಗಿದೆ. ವಾಯು ಮಾರ್ಗಗಳ ಮೂಲಕ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ.
ಅಷ್ಟೇ ಅಲ್ಲ, ಇರಾನ್'ನಲ್ಲಿ ನಿರ್ಮಾಣವಾಗಲಿರುವ ಛಬಾಹಾರ್ ಬಂದರು ನಿರ್ಮಾಣವಾದರೆ ಆಫ್ಘಾನಿಸ್ತಾನ ಹಾಗೂ ಭಾರತದ ನಡುವಿನ ವ್ಯಾಪಾರ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗುತ್ತದೆ. ಮಧ್ಯ ಏಷ್ಯನ್ ರಾಷ್ಟ್ರಗಳೊಂದಿಗೆ ಭಾರತ ಸುಲಭವಾಗಿ ವ್ಯಾಪಾರ ಸಂಬಂಧವಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಯುದ್ಧ, ಭಯೋತ್ಪಾದನೆಯಿಂದ ಜರ್ಝರಿತವಾಗಿರುವ ಆಫ್ಘಾನಿಸ್ತಾನಕ್ಕೆ ಈಗ ಆರ್ಥಿಕ ಪುನಶ್ಚೇತನದ ದಾರಿಯಲ್ಲಿದೆ. ಇದಕ್ಕೆ ಅದು ಭಾರತ ಮೊದಲಾದ ಬೃಹತ್ ಮಾರುಕಟ್ಟೆಯ ದೇಶಗಳ ಅಗತ್ಯವಿದೆ. ಬಹಳ ಕಾಲದಿಂದಲೂ ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಒಳ್ಳೆಯ ಸ್ನೇಹ ಸಂಬಂಧವಿದೆ. ಹೀಗಾಗಿ, ಆಫ್ಘಾನಿಸ್ತಾನವು ಭಾರತದೊಂದಿಗೆ ಕೈಜೋಡಿಸುವುದು ಸಹಜವೇ ಆಗಿದೆ.
