ಬೆಂಗಳೂರು[ಆ.13]: ಕರಾವಳಿ, ಮಲೆನಾಡು, ಉತ್ತರ ಕರ್ನಾಟದಲ್ಲಿ ಭಾರೀ ನೆರೆ ಹಾವಳಿಯಿಂದ ಜನ ತತ್ತರಿಸಿದ್ದು, ಚೇತರಿಸಿಕೊಳ್ಳುವ ಮುನ್ನವೇ ಇದೀಗ ಕಾವೇರಿ, ತುಂಗಾಭದ್ರಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಪರಿಣಾಮ ಮೈಸೂರು, ಮಂಡ್ಯ, ಚಾಮರಾಜನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕಪಿಲಾ, ಕಾವೇರಿ ನದಿಯ ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯ ಟಿ.ನರಸೀಪುರ ನಲುಗಿದೆ. ಇಷ್ಟುದಿನ ಮಳೆ ಮತ್ತು ಪ್ರವಾಹದಿಂದಾಗಿ ಎಚ್‌.ಡಿ.ಕೋಟೆ, ಟಿ.ನಂಜನಗೂಡು ತಾಲೂಕಿನ ನದಿಯಂಚಿನ ಗ್ರಾಮ ಮತ್ತು ಪಟ್ಟಣಗಳು ಜಲಾವೃತಗೊಂಡು ಅಪಾರ ಹಾನಿಯುಂಟಾಗಿತ್ತು. ಆದರೆ, ಈಗ ಕಾವೇರಿಯನ್ನು ಸಂಧಿಸುವ ಟಿ.ನರಸೀಪುರದಲ್ಲಿ ಆತಂಕ ಸೃಷ್ಟಿಸಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಒಂದೆಡೆ ಕೆಆರ್‌ಎಸ್‌ನಿಂದ 1.63 ಕ್ಯುಸೆಕ್‌ ನೀರನ್ನು ನದಿಗೆ ಬಿಡುತ್ತಿರುವುದರಿಂದ ಟಿ.ನರಸೀಪುರದಲ್ಲಿ ಪ್ರವಾಹ ಆಂತಕ ಹೆಚ್ಚಿದೆ. ಈಗಾಗಲೇ ಮೈಸೂರು- ಕೊಳ್ಳೆಗಾಲ ಸಂಪರ್ಕಿಸುವ ಹೆದ್ದಾರಿ ಸಂಪೂರ್ಣ ಜಾಲವೃತಗೊಂಡಿದೆ. ರಸ್ತೆ ಬದಿಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಆವರಣ ಸಂಪೂರ್ಣ ಜಾಲವೃತವಾಗಿದೆ. ಕಪಿಲಾ ನದಿಗೆ ತಡೆಯಾಗಿ ನಿರ್ಮಿಸಿದ್ದ ವಾಕಿಂಗ್‌ ಪಾತ್‌ ಕೊಚ್ಚಿ ಹೋಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತಾಲೂಕಿನಲ್ಲಿ ದಾಸನಪುರ, ಹಂಪಾಪುರ, ಮುಳ್ಳೂರು ಸೇರಿದಂತೆ ನದಿ ಹಂಚಿನ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಹರಳೆ ಗ್ರಾಮಕ್ಕೆ ಜಲ ದಿಗ್ಬಂಧನ ಉಂಟಾಗಿದೆ. ಮುಳ್ಳೂರು ಗ್ರಾಮದಲ್ಲಿ 50ಮನೆಗಳಿಗೆ ನೀರು ನುಗ್ಗಿದೆ. ಮಂಡ್ಯ ಜಿಲ್ಲೆಯ ಸ್ನಾನ ಘಟ್ಟಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ. ಚೆಕ್‌ ಪೋಸ್ಟ್‌ ಬಳಿಯ ಸಾಯಿ ಮಂದಿರಕ್ಕೆ ನೀರು ನುಗ್ಗಿದೆ. ನಿಮಿಷಾಂಬ ದೇವಾಲಯದ ಮುಖ್ಯದ್ವಾರದ ಬಳಿವರೆಗೆ ನೀರು ನುಗ್ಗಿದೆ.

ರಂಗನತಿಟ್ಟು ವೀಕ್ಷಣೆ ನಿಷೇಧ:

ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆಯ ಭೀತಿಯಲ್ಲಿದೆ. ಬೋಟಿಂಗ್‌ ಟಿಕೆಟ್‌ ವಿತರಣೆ ಮಾಡುವ ಕಚೇರಿಗೆ ಸಂಪೂರ್ಣವಾಗಿ ಪ್ರವಾಹದ ನೀರಿನಿಂದ ಮುಚ್ಚಿಹೋಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ರಂಗನತಿಟ್ಟು ಪಕ್ಷಿಧಾಮ ವೀಕ್ಷಣೆಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.

ಮಂತ್ರಾಲಯಕ್ಕೆ ಬಂದ ತುಂಗೆ:

ಭಾನುವಾರ ಸಂಜೆಯವರೆಗೂ ಮಂತ್ರಾಲಯದ ತುಂಗಭದ್ರಾ ನದಿಯು ಖಾಲಿಯಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದಿದೆ. ಹೀಗಾಗಿ ಮಂತ್ರಾಲಯದಲ್ಲಿಯೂ ಪ್ರವಾಬ ಭೀತಿ ಎದುರಾಗಿದೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಜಪದಕಟ್ಟಿಯು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕೊಪ್ಪಳ ಜಿಲ್ಲೆಯ ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ 314 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಹಂಪಿಯ ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ, ಎದುರು ಬಸವಣ್ಣ ಪ್ರದೇಶ ಸೇರಿದಂತೆ ವಿವಿಧ ಸ್ಮಾರಕಗಳಲ್ಲಿದ್ದ ನೀರು ಭಾನುವಾರಕ್ಕೆ ಹೋಲಿಸಿದರೆ ಕಡಿಮೆಯಾಗುತ್ತಿದೆ. ಆದರೆ, ಭಾಗಶಃ ನೀರು ಆವರಿಸಿಕೊಂಡಿದ್ದ ಸ್ಮಾರಕಗಳ ಬಳಿ ಪ್ರವಾಸಿಗರು ತೆರಳುವ ಸ್ಥಿತಿಯಿಲ್ಲ. ಕಡ್ಲೆಕಾಳು ಗಣಪ, ಸಾಸಿವೆಕಾಳು ಗಣಪ, ಎದುರು ಬಸವಣ್ಣ ಪ್ರದೇಶದಲ್ಲಿ ನೀರಿನ ಇಳಿಮುಖವಾಗಿದ್ದು ಓಡಾಟಕ್ಕೆ ಅಡ್ಡಿಯಾಗಿಲ್ಲ. ಕಲ್ಲಿನ ತೇರು ಬಳಿಯ ವಿಜಯವಿಠಲ ದೇವಸ್ಥಾನದ ಬಳಿಕ ಹೆಚ್ಚಿನ ನೀರು ಇಲ್ಲವಾದರೂ ರಸ್ತೆಯಲ್ಲಿ ನೀರು ಇರುವುದರಿಂದ ಪ್ರವಾಸಿಗರು ತೆರಳಲು ಸಾಧ್ಯವಾಗುತ್ತಿಲ್ಲ.