ನವದೆಹಲಿ[ಡಿ.23]: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಭಾರತದ ಟಾಪ್‌ 23 ಶ್ರೀಮಂತರ ಆಸ್ತಿಯಲ್ಲಿ ಭರ್ಜರಿ 1.50 ಲಕ್ಷ ಕೋಟಿ ರು. ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಚೀನಾ- ಅಮೆರಿಕ ಹಾಗೂ ಇತರೆ ಕೆಲವು ದೇಶಗಳ ನಡುವೆ ನಡೆದ ವ್ಯಾಪಾರ ಸಮರದಿಂದಾಗಿ ಈ ಸಿರಿವಂತರ ಕಂಪನಿಗಳ ಷೇರುಮೌಲ್ಯ ಭಾರೀ ಕುಸಿತ ಕಂಡ ಪರಿಣಾಮ ಅವರ ಸಿರಿವಂತಿಕೆಯಲ್ಲಿ ಇಳಿಕೆ ದಾಖಲಾಗಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ನಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಟಾಪ್‌ 128 ಸಿರಿವಂತರ ಆಸ್ತಿಯಲ್ಲಿ 9.50 ಲಕ್ಷ ಕೋಟಿ ರು. ಹಾಗೂ ವಿಶ್ವ ಟಾಪ್‌ 500 ಸಿರಿವಂತರ ಆಸ್ತಿಯಲ್ಲಿ ಒಟ್ಟಾರೆ 35 ಲಕ್ಷ ಕೋಟಿ ರು. ಇಳಿಕೆಯಾಗಿರುವುದು ಕಂಡುಬಂದಿದೆ.

ಇಳಿಕೆ: ಈ ವರ್ಷ ಅತ್ಯಂತ ಹೆಚ್ಚು ಹೊಡೆತ ತಿಂದಿರುವುದು ಸ್ಟೀಲ್‌ ಉದ್ಯಮದ ದಿಗ್ಗಜ ಲಕ್ಷ್ಮೇ ನಿವಾಸ್‌ ಮಿತ್ತಲ್‌. ಈ ವರ್ಷ ಅವರ ಆಸ್ತಿಯಲ್ಲಿ ಭರ್ಜರಿ 39200 ಕೋಟಿ ರು. ಇಳಿಕೆಯಾಗಿದೆ. ನಂತರದ ಸ್ಥಾನದಲ್ಲಿ ಸನ್‌ ಫಾರ್ಮಸ್ಯುಟಿಕಲ್ಸ್‌ನ ದಿಲೀಪ್‌ ಸಾಂಘ್ವಿ ಇದ್ದಾರೆ. ಅವರ ಆಸ್ತಿಯಲ್ಲಿ 32200 ಕೋಟಿ ರು. ಹಾಗೂ ಮೂರನೇ ಸ್ಥಾನದಲ್ಲಿರುವ ಗೌತಮ್‌ ಅದಾನಿ ಆಸ್ತಿಯಲ್ಲಿ 20000 ಕೋಟಿ ರು. ಇಳಿಕೆಯಾಗಿದೆ.

ಟಾಪ್‌ 23ರ ಪೈಕಿ ಈ ವರ್ಷ 5 ಸಿರಿವಂತರ ಆಸ್ತಿ ಮಾತ್ರ ಹೆಚ್ಚಳವಾಗಿದೆ. ಈ ಪೈಕಿ ಮುಖೇಶ್‌ ಅಂಬಾನಿ ಆಸ್ತಿ 20580 ಕೋಟಿ ರು. ಹೆಚ್ಚಳವಾಗಿದೆ. ದಮಾನಿ ಗ್ರೂಪ್‌ನ ರಾಧಾಕಿಷನ್‌ ದಮಾನಿ ಆಸ್ತಿ 14210 ಕೋಟಿ ರು. ಮತ್ತು ಉದಯ್‌ ಕೋಟಕ್‌ ಆಸ್ತಿ 5600 ಕೋಟಿ ರು. ಹೆಚ್ಚಳವಾಗಿದೆ.