ವಯನಾಡು[ಜೂ.09]: ವಯನಾಡಿನಿಂದ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕ್ಷೇತ್ರದ ಪ್ರವಾಸದಲ್ಲಿದ್ದಾರೆ. ಕಳೆದ ಮೂರು ದಿನಗಳಿಂದ ವಯನಾಡಿನಲ್ಲಿರುವ ರಾಹುಲ್ ರೋಡ್ ತನಗೆ ಮತ ನೀಡಿ ಗೆಲ್ಲಿಸಿರುವ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಶನಿವಾರದಿಂದಲೇ ತನ್ನ ಕ್ಷೇತ್ರದ ಪರ ಕೆಲಸ ಆರಂಭಿಸಿದ್ದಾರೆ. ಇಂದು ಭಾನುವಾರ ರಾಹುಲ್ ಗಾಂಧಿ ತಾನು ಮಗುವಾಗಿದ್ದಾಗ ತನ್ನನ್ನು ಆರೈಕೆ ಮಾಡಿದ್ದ ನರ್ಸ್ ಭೇಟಿಯಾಗಿದ್ದಾರೆ. 

ಈಗಾಗಲೇ ತನ್ನ ಪಕ್ಷೇತ್ರದ ಪರ ಕೆಲಸ ಆರಂಭಿಸಿರುವ ರಾಹುಲ್ ಗಾಂಧಿ ವಯನಾಡಿನ ಸಂಸದರ ಸಮಾಲೋಚನಾ ಕೇಂದ್ರದಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರಿಂದ ಕುಂದು ಕೊರತೆ ಮತ್ತು ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಮ್ಮ ಹಾಗೂ ಅವರ ಕುಟುಂಬ ರಾಹುಲ್ ಅವರನ್ನು ಭೇಟಿಯಾಗಲು ಬಂದಿದ್ದರು. ಅವರನ್ನು ನೋಡುತ್ತಿದ್ದಂತೆಯೇ 49 ವರ್ಷಗಳ ಹಿಂದೆ ತಮ್ಮನ್ನು ಅತ್ಯಂತ ಮುತುವರ್ಜಿಯಿಂದ ಶುಶ್ರೂಷೆ ಮಾಡಿದ್ದ 72 ವರ್ಷದ ನಿವೃತ್ತ ನರ್ಸ್ ರಾಜಮ್ಮ ವವತ್ತಿಲ್ ರನ್ನು ರಾಹುಲ್ ಆತ್ಮೀಯವಾಗಿ ಆಲಂಗಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. ತನ್ನ ಆರೈಕೆ ಮಾಡಿದ್ದ ನರ್ಸ್ ರಾಜಮ್ಮ ಕೈ ಹಿಡಿದು ಭಾವೋದ್ವೇಗಗೊಂಡಿದ್ದಾರೆ.

1970ರ ಜೂನ್ 19 ರಂದು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಜನಿಸಿದ್ದರು. ಆಗ ಆ ಆಸ್ಪತ್ರೆಯಲ್ಲಿ ಟ್ರೈನಿ ನರ್ಸ್ ಆಗಿದ್ದ ರಾಜಮ್ಮರಿಗೆ ನವಜಾತ ರಾಹುಲ್‍ರನ್ನು ನೋಡಿಕೊಳ್ಳುವ ಹೊಣೆ ವಹಿಸಲಾಗಿತ್ತು. ಆ ಸಂದರ್ಭವನ್ನು ರಾಹುಲ್ ಬಳಿ ರಾಜಮ್ಮ ಹಂಚಿಕೊಂಡಿದ್ದಾರೆ.