ಕಲ್ಲು ಹೊಡೆಯುವ ಹಬ್ಬದ ಆಟ : 400 ಮಂದಿಗೆ ಗಾಯ!
ಕಲ್ಲೆಸೆಯುವ ಗೋಟ್‌ಮಾರ್ (ಗೋಟ್-ಕಲ್ಲು, ಮಾರ್-ಹೊಡೆ) ಹಬ್ಬದಲ್ಲಿ 400ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರಲ್ಲಿ 12 ಜನರು ತೀವ್ರವಾಗಿ ಗಾಯಗೊಂಡರೆ, ಇನ್ನಿಬ್ಬರು ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ
ಮಧ್ಯಪ್ರದೇಶ [ಸೆ.02]: ಇಲ್ಲಿನ ಛಿಂಡ್ವಾರಾ ಜಿಲ್ಲೆಯಲ್ಲಿ ನಡೆಯುವ ಕಲ್ಲೆಸೆಯುವ ಗೋಟ್‌ಮಾರ್ (ಗೋಟ್-ಕಲ್ಲು, ಮಾರ್-ಹೊಡೆ) ಹಬ್ಬದಲ್ಲಿ 400ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರಲ್ಲಿ 12 ಜನರು ತೀವ್ರವಾಗಿ ಗಾಯಗೊಂಡರೆ, ಇನ್ನಿಬ್ಬರು ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ. 400 ವರ್ಷಗಳ ಇತಿಹಾಸವಿರುವ ಈ ಹಬ್ಬವನ್ನು ಪಂದುರ್ನಾ ಮತ್ತು ಸಾವರ್‌ಗಾಂವ್ ಗ್ರಾಮಸ್ಥರು ಪ್ರತಿವರ್ಷ ಆಚರಿಸುತ್ತಾರೆ.
ಉಭಯ ಗ್ರಾಮಗಳ ಮಧ್ಯೆ ಜಾಮ್ ನದಿ ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿರುವ ಸೇತುವೆ ಮೇಲೆ ಧ್ವಜವೊಂದನ್ನು ಕಟ್ಟುತ್ತಾರೆ. ಈ ಧ್ವಜವನ್ನು ವಶಪಡಿಸಿಕೊಂಡವರು ವಿಜಯಶಾಲಿಗಳು. ಈ ರೀತಿ ಧ್ವಜ ಪಡೆಯುವಾಗ ಇತ್ತಂಡಗಳು ಕಲ್ಲು ಎಸೆದು ತಡೆಯುತ್ತಾರೆ. ಈ ಬಾರಿ ಪಂದುರ್ನಾ ಗ್ರಾಮಸ್ಥರು ವಶಕ್ಕೆ ಧ್ವಜ ಪಡೆದು ವಿಜಯ ಗಳಿಸಿದ್ದಾರೆ.
ಹಿಂದಿನಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಜನರ ನಂಬಿಕೆಯ ಪ್ರತಿರೂಪವಾಗಿರುವ ಈ ಹಬ್ಬ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಸ್ಪರ್ಧೆಯ ಸ್ಥಳದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಡ್ರೋನ್ ಮತ್ತು ಸಿಸಿಟಿವಿ ನಿಗಾ ವಹಿಸಲಾಗಿದೆ. ಹಬ್ಬದ ವೇಳೆ ಮದ್ಯ ಸೇವನೆ ನಿಷೇಧಿಸಲಾಗುತ್ತದೆ. ಕಲ್ಲೆಸೆಯುವಾಗ ಹಗ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರಾಯ್ ತಿಳಿಸಿದ್ದಾರೆ.