ದೇಶದ ಶಾಲೆಗಳಲ್ಲಿ ಶೇ.39 ರಷ್ಟು ದಲಿತರ ಮಕ್ಕಳಿಗೆ ಪ್ರತ್ಯೇಕ ಪಂಕ್ತಿಗಳಲ್ಲಿ ಬಿಸಿಯೂಟ ವಿತರಿಸಲಾಗುತ್ತಿದೆ. ಅಲ್ಲದೇ ದೇಶದ ಶೇ.24ರಷ್ಟು ದಲಿತರ ಮನೆಗಳಿಗೆ ಇವತ್ತಿಗೂ ಅಂಚೆ ಪತ್ರ ತಲುಪಿಸಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ಇದೆ ಎಂದು ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಡಿ. 27): ದೇಶದ ಶಾಲೆಗಳಲ್ಲಿ ಶೇ.39 ರಷ್ಟು ದಲಿತರ ಮಕ್ಕಳಿಗೆ ಪ್ರತ್ಯೇಕ ಪಂಕ್ತಿಗಳಲ್ಲಿ ಬಿಸಿಯೂಟ ವಿತರಿಸಲಾಗುತ್ತಿದೆ. ಅಲ್ಲದೇ ದೇಶದ ಶೇ.24ರಷ್ಟು ದಲಿತರ ಮನೆಗಳಿಗೆ ಇವತ್ತಿಗೂ ಅಂಚೆ ಪತ್ರ ತಲುಪಿಸಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ಇದೆ ಎಂದು ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ವಕೀಲರ ಸಂಘದ ಕರ್ನಾಟಕ ಸಮಿತಿ ಮಂಗಳವಾರ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂಘದ 9ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಅಪೌಷ್ಠಿಕತೆ, ಜಾತೀಯತೆ, ಮಾನವ ಹಕ್ಕುಗಳ ಉಲ್ಲಂಘನೆ, ದಲಿತರ ಮೇಲೆ ದೌರ್ಜನ್ಯದಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿದೆ. ಪ್ರತಿ 18 ನಿಮಿಷಕ್ಕೊಬ್ಬ ದಲಿತ ವ್ಯಕ್ತಿ ಹಲ್ಲೆಯಾಗುತ್ತಿದೆ ಎಂದು ಉಲ್ಲೇಖಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ 2012ರಲ್ಲಿ ಶೇ. 37ರಷ್ಟು ದಲಿತರು ಬಡತನದ ರೇಖೆಗಿಂತ ಕೆಳ ಮಟ್ಟದ ಜೀವನ ನಡೆಸುತ್ತಿದ್ದಾರೆ. ಶೇ.54 ರಷ್ಟು ಜನ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಒಂದು ಸಾವಿರದಲ್ಲಿ 83 ರಷ್ಟು ಮಕ್ಕಳು ಜನಿಸುವ ಮುನ್ನ ಸಾಯುತ್ತಿವೆ. ಶೇ 45ರಷ್ಟು ಜನ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 28 ರಷ್ಟು ದಲಿತರನ್ನು ಪೊಲೀಸ್ ಠಾಣೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ ಎಂದು ವರದಿಯಾಯಾಗಿದೆ. ಈ ಅಂಶಗಳು ದೇಶದ ಅಭಿವೃದ್ಧಿಗೆ ಮಾರಕ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ 2016 ಮಾರ್ಚ್‌ನಲ್ಲಿ ಮಾನವ ಸಂಪನ್ಮೂಲ ಸಚಿವರು ಉತ್ತರಿಸುವಂತೆ ದೇಶದಲ್ಲಿ 6 ದಶ ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರಲ್ಲಿ 4.5 ದಶ ಲಕ್ಷ ಮಕ್ಕಳು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ನ್ಯಾ.ರಾಜೇಂದ್ರ ಸಾಚಾರ್ ಸಮಿತಿ ವರದಿಯ ಪ್ರಕಾರ ಅಲ್ಪಸಂಖ್ಯಾತರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. 17 ವರ್ಷವಾದರೂ ಎಸ್‌ಎಸ್‌ಎಲ್‌ಸಿ ಮುಗಿಸಲಾಗುತ್ತಿಲ್ಲ ಎಂದರು.
ಸಾಮಾಜಿಕ ನ್ಯಾಯ ಸರಿಯಾಗಿ ಪಾಲನೆಯಾಗಬೇಕಾದರೆ ಆರ್ಥಿಕ ವಲಯದಲ್ಲೂ ಸಮಾನ ಅವಕಾಶ ಮತ್ತು ಸೌಲಭ್ಯಗಳು ದೊರೆಯಬೇಕು. ಆದರೆ ದೇಶದಲ್ಲಿನ ಶೇ. 45ರಷ್ಟು ಸಂಪತ್ತು ಶೇ.1 ರಷ್ಟಿರುವ ಶ್ರೀಮಂತರ ಕೈಯಲ್ಲಿ ಅಡಗಿದೆ. ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆ ಮತ್ತು ಅಸ್ಪಷ್ಯತೆ ಮುಂದುವರೆಯಲು ಕಾರಣವಾಗಿದೆ ಎಂದರು.
ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪ್ರಬಲ ಶಕ್ತಿಯಾಗಿದ್ದು, ಕಾಲಕಾಲಕ್ಕೆ ಸುಪ್ರೀಂಕೋರ್ಟ್ ಕೂಡ ನ್ಯಾಯದ ಪರಿಕಲ್ಪನೆ ಪೂರಕವಾಗಿ ಸ್ಪಂಸುತ್ತಿದೆ. ಇದಕ್ಕೆ ಅನುಗುಣವಾಗಿ ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕು ಎನ್ನುವ ಅರಿವು ಬಂದಿದೆ.

ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು, ಸಾಂಸ್ಕೃತಿಕ ಅಲ್ಪಸಂಖ್ಯಾತರು, ಮಹಿಳೆಯರು, ನಿರಾಶ್ರಿತರು, ಬಡವರು ಸೇರಿದಂತೆ ದೇಶದ ಎಲ್ಲ ಜನರಿಗೆ ಸಾಮಾಜಿಕ ನ್ಯಾಯ ಸಮಾನವಾಗಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯಪಾಲ ವಜುಬಾಯ್ ವಾಲಾ ಮಾತನಾಡಿ, ವಕೀಲರು, ನ್ಯಾಯಾೀಶರು ಮತ್ತು ನ್ಯಾಯಾಂಗ ಅಕಾರಿಗಳು ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಬೇಕು. ಧರ್ಮ, ನೀತಿಯನ್ನು ಯಾವುದೇ ಕಾರಣಕ್ಕೂ ಮೀರಬಾರದು. ಶೋಷಿತರು ಹಾಗೂ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜಾತೀಯತೆ ಹಾಗೂ ಅಸ್ಪಶ್ಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಹೀಗಾಗಿ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ, ಉದ್ಯೋಗ, ವಸತಿ, ಅಕಾರ ಹಂಚಿಕೆ ಎಲ್ಲರಿಗೂ ಸಿಕ್ಕಾಗ ಮಾತ್ರ ಸಮಾನ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ, ಖಾಸಗಿ ವಲಯದಲ್ಲೂ ಮೀಸಲಾತಿಯ ಅಗತ್ಯವಿದೆ. ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಕಲ್ಪಿಸಲು ಬದ್ಧವಾಗಿದೆ ಎಂದರು.
ಎಲ್ಲ ಜಾತಿಯ ಜನರಿಗೂ ಅವುಗಳ ಜನಸಂಖ್ಯೆಯನ್ನು ಆಧರಿಸಿ, ಸರಿಯಾದ ಸಂವಿಧಾನಾತ್ಮಕ ಸೌಲಭ್ಯಗಳು ಸಿಗಬೇಕು. ಈ ಸದುದ್ದೇಶದಿಂದಲೇ ರಾಜ್ಯದಲ್ಲಿ ಜಾತಿಗಣತಿ ನಡೆಸಲಾಗಿದೆ. 1931ರ ನಂತರ ಈ ಕೆಲಸವನ್ನು ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರಕಾರ ಎತ್ತಿಕೊಂಡಿದೆ. ಸಮಾನತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸುವುದು ಇದರ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಭಾರತೀಯ ವಕೀಲರ ಅಧ್ಯಕ್ಷ ಜಿತೇಂದ್ರ ಶರ್ಮಾ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ಆರ್.ಎಸ್. ಚೀಮ, ಪಿ.ಪಿ.ರಾವ್ ಇದ್ದರು.