ಮುಂಬೈ[ಏ.28]: 11000 ಕೋಟಿ ರು. ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿ ಜೆಟ್‌ ಏರ್‌ವೇಸ್‌ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದ ಬೆನ್ನಲ್ಲೇ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜೆಟ್‌ ಏರ್‌ವೇಸ್‌ನ ತಾಂತ್ರಿಕ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೈಲೇಶ್‌, ಶನಿವಾರ ಪಾಲಘರ್‌ ಜಿಲ್ಲೆಯ ಪೂರ್ವ ನಲಸೊಪಾರಾದಲ್ಲಿದ್ದ ತಮ್ಮ 4ನೇ ಮಹಡಿಯ ಮನೆಯ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶೈಲೇಶ್‌ಸಿಂಗ್‌ (45) ಆತ್ಮಹತ್ಯೆಗೆ ಅವರು ಕ್ಯಾನ್ಸರ್‌ಗೆ ತುತ್ತಾಗಿ, ಖಿನ್ನತೆ ಒಳಗಾಗಿದ್ದೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದರೆ, ಹಲವು ತಿಂಗಳಿನಿಂದ ವೇತನ ಪಾವತಿಯಾಗದ ಕಾರಣ, ಶೈಲೇಶ್‌ ಚಿಕಿತ್ಸೆಗೂ ಹಣ ಇಲ್ಲದೆ ಸಂಕಷ್ಟಕ್ಕೆ ಸಿಕ್ಕಿದ್ದರು ಎಂದು ಆಪ್ತರು ಆರೋಪಿಸಿದ್ದಾರೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಜೆಟ್‌ ಏರ್‌ವೇಸ್‌ ಸಿಬ್ಬಂದಿ ಹಾಗೂ ನೌಕರರ ಸಂಘಟನೆ, ‘ಆರ್ಥಿಕ ಬಿಕ್ಕಟ್ಟಿನಿಂದಾಗಿ ಜೆಟ್‌ ಏರ್‌ವೇಸ್‌ ವಿಮಾನ ತನ್ನ ನೌಕರರಿಗೆ ಹಲವು ತಿಂಗಳಿಂದ ವೇತನವನ್ನೇ ನೀಡಿರಲಿಲ್ಲ. ಇದರಿಂದಾಗಿ ಹಲವು ನೌಕರರು ಸಂಕಷ್ಟಕ್ಕೆ ಸಿಲುಕಿದ್ದರು.

ಅದೇ ರೀತಿ ಸಿಂಗ್‌ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು,’ ಎಂದು ಹೇಳಿದ್ದಾರೆ. ಜೆಟ್‌ ಏರ್‌ವೇಸ್‌ ಸೇವೆ ಸ್ಥಗಿತಗೊಳಿಸಿದ ಬಳಿಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 23000 ಸಿಬ್ಬಂದಿಗಳು ಉದ್ಯೋಗ ವಂಚಿತರಾಗಿದ್ದಾರೆ.