ನವದೆಹಲಿ[ಸೆ.22]: ಅಪರೂಪದ ಪ್ರಕರಣವೊಂದರಲ್ಲಿ ಅಕ್ರಮ ಹಣ ವರ್ಗಾವಣೆ ತೆಡೆ ಕಾಯ್ದೆಯಡಿ ಪ್ರಾಣಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಕಾಡು ಪ್ರಾಣಿಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ 3 ಜಿಂಪಾಂಜಿ ಹಾಗೂ 4 ಮಾರ್ಮೋಸೆಟ್‌ (ದಕ್ಷಿಣ ಅಮೆರಿಕದ ಉದ್ದ ಬಾಲದ ಮಂಗ)ಗಳನ್ನು ಇಡಿ ವಶ ಪಡಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಇಂಥ ಪ್ರಸಂಗ ನಡೆದಿದೆ.

ಸುಪ್ರದೀಪ್‌ ಗುಹಾ ಎಂಬಾತ ಕಾಡು ಪ್ರಾಣಿಗಳನ್ನು ಕಳ್ಳತನ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ. ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಆತನ ಮೇಲೆ ದೂರು ದಾಖಲಿಸಿತ್ತು. ಎಫ್‌ಐಆರ್‌ ಆಧರಿಸಿ, ಇದು ಅಕ್ರಮ ವರ್ಗಾವಣೆಯಾಗಿದ್ದರಿಂದ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಲಾಗಿತ್ತು.

ಗುಹಾ ವ್ಯವಸ್ಥಿತ ಕಾಡುಪ್ರಾಣಿಗಳ ಕಳ್ಳತನ ದಂಧೆಯಲ್ಲಿ ತೊಡಗಿದ್ದು, ವಿಚಾರಣೆ ವೇಳೆ ಸುಂಕ ಹಾಗೂ ಅರಣ್ಯಾಧಿಕಾರಿಗಳೊಂದಿಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಅಲ್ಲದೇ ಮೂರು ಜಿಂಪಾಂಜಿಗಳ ನಕಲಿ ಜನನ ಪ್ರಮಾಣ ಪತ್ರ ಕೂಡ ತಯಾರಿಸಿದ್ದಾನೆ ಎಂದು ಇಡಿ ಹೇಳಿದೆ. ಏಳು ಪ್ರಾಣಿಗಳ ಮೌಲ್ಯ ಒಟ್ಟು 81 ಲಕ್ಷ ಎಂದು ಅಂದಾಜಿಸಲಾಗಿದ್ದು, ಮೂರು ಚಿಂಪಾಂಜಿಗಳ ಮೌಲ್ಯ ತಲಾ 25 ಲಕ್ಷ ಹಾಗೂ 4 ಮಾರ್ಮೋಸೆಟ್‌ಗಳ ಮೌಲ್ಯ ತಲಾ 1.5 ಲಕ್ಷ ಎಂದು ನಿಗದಿ ಪಡಿಸಲಾಗಿದೆ. ಸದ್ಯ ಈ ಪ್ರಾಣಿಗಳನ್ನು ಅಲಿಪುರ ಪ್ರಾಣಿ ಸಂಗ್ರಾಹಾಲಯದಲ್ಲಿ ಇರಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಆದಾಯಕ್ಕೂ ಮೂಲವಾಗಿದೆ.