ಕಾನ್ಪುರ[ಜೂ.08]: 8ನೇ ತರಗತಿ ಓದುತ್ತಿರುವ ಸಾರ್ಥಕ್ ತ್ರಿಪಾಠಿ ಉತ್ತರ ಪ್ರದೇಶದ ನಿವಾಸಿ. ಈವರೆಗೂ ಪ್ರಧಾನಿ ಮೋದಿಗೆ ಬರೋಬ್ಬರಿ 37 ಪತ್ರಗಳನ್ನು ಬರೆದಿರುವ ಸಾರ್ಥಕ್ ತನ್ನ ತಂದೆಯ ನೌಕರಿ ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ವಿದ್ಯಾರ್ಥಿಯ ತಂದೆ ಉತ್ತರ ಪ್ರದೇಶದ ಶೇರು ಮಾರುಕಟ್ಟೆ[UPSE] ಯ ಉದ್ಯೋಗಿಯಾಗಿದ್ದರು.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಾರ್ಥಕ್ 'ತಂದೆ ಉದ್ಯೋಗ ಕಳೆದುಕೊಂಡ ಬಳಿಕ ನಮ್ಮ ಉಟುಂಬ ಬಹಳ ಕಷ್ಟಗಳನ್ನೆದುರಿಸುತ್ತಿದೆ. ಹೀಗಾಗಿ ನನ್ನ ತಂದೆಯ ಉದ್ಯೋಗ ಮರಳಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನ ತಂದೆಯನ್ನು ಯಾವುದೇ ಕಾರಣಗಳಿಲ್ಲದೆ ಕೆಲಸದಿಂದ ತೆಗೆದು ಹಾಕಲಾಗಿದೆ' ಎಂದಿದ್ದಾರೆ.

13 ವರ್ಷದ ಸಾರ್ಥಕ್ 2016ರಿಂದ ಪ್ರಧಾನಿ ಮೋದಿಗೆ ಪತ್ರಗಳನ್ನು ಬರೆದಿದ್ದಾರೆ. ಆದರೆ ಈವರೆಗೆ ಪ್ರಧಾನಿ ಮೋದಿ ಕಾರ್ಯಾಲಯದಿಂದ ಯಾವುದೇ ಉತ್ತರ ಸಿಕ್ಕಿಲ್ಲ..

ಮೋದಿಗೆ ಬರೆದ ಒಂದು ಪತ್ರದಲ್ಲಿ 'ಮೋದಿ ಇದ್ದರೆ ಎಲ್ಲವೂ ಸಾಧ್ಯ. ಹೀಗಾಗಿ ಒಂದು ಬಾರಿ ನನ್ನ ಮನವಿಯನ್ನು ಆಲಿಸಿ ಎಂದು ಬೇಡಿಕೊಳ್ಳುತ್ತಿದ್ದೇನೆ. UPSEಯ ಕೆಲ ಉದ್ಯೋಗಿಗಳು ನನ್ನ ತಂದೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನನ್ನ ತಂದೆಗೆ ನ್ಯಾಯ ಒದಗಿಸಿ' ಎಂದು ಸಾರ್ಥಕ್ ಬರೆದಿದ್ದಾರೆ.