ಇಸ್ಲಾಮಾಬಾದ್(ಡಿ.08): 2008ರ ಮಂಬೈ ಭಯೋತ್ಪಾದಕ ದಾಳಿಯ ಹಿಂದೆ ಪಾಕ್ ಕೈವಾಡ ಇದೆ ಎಂದು ಈ ಭೂಮಿ ಮೇಲಿನ 194 ದೇಶಗಳು ಕೂಗಿ ಕೂಗಿ ಹೇಳುತ್ತಿದ್ದರೂ 1 ದೇಶ ಮಾತ್ರ ಅಯ್ಯಯ್ಯೋ ಎಲ್ಲಾದ್ರೂ ಉಂಟಾ ಅಂತಾ ಆರೋಪ ನಿರಾಕರಿಸುತ್ತಿತ್ತು. ಅದರ ಹೆಸರು ಪಾಕಿಸ್ತಾನ.

ಆದರೆ ಭೂಪಟದ ಉಳಿದ ಆ ಒಂದೂ ರಾಷ್ಟ್ರವೂ ಇದೀಗ ಹೌದು, ಮುಂಬೈ ದಾಳಿಯಲ್ಲಿ ನಮ್ಮ ಕೈವಾಡ ಇದೆ ಎಂದು ಒಪ್ಪಿಕೊಂಡಿದೆ. ಹೌದು, 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಖುದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಒಪ್ಪಿಕೊಂಡಿದ್ದಾರೆ.

 ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಒಪ್ಪಿಕೊಂಡಿದ್ದಾರೆ. 

‘2008ರ ಮುಂಬೈ ದಾಳಿ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಸುವಂತೆ ನಮ್ಮ ಸರ್ಕಾರವನ್ನು ಕೇಳಿದ್ದೇನೆ. ಇದೊಂದು ಭಯೋತ್ಪಾದಕ ದಾಳಿಯಾಗಿರುವುದರಿಂದ ವಿಶೇಷ ಕ್ರಮಗಳನ್ನು ಕೈಗೊಂಡು ಪ್ರಕರಣವನ್ನು ಇತ್ಯಾರ್ಥಗೊಳಿಸಲು ಹೇಳಿದ್ದೇನೆ’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 

ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ 9 ವರ್ಷಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ತಮ್ಮ ಸರ್ಕಾರದ ಅಧಿಕಾರಿಗಳಿಗೆ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

2008ರ ಮುಂಬೈ ದಾಳಿಯನ್ನು ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಸಂಘಟನೆ ನಡೆಸಿತ್ತು. ದಾಳಿಗೆ ಕುರಿತಂತೆ ಹಲವು ಮಹತ್ವದ ದಾಖಲೆಗಳನ್ನು ಪಾಕಿಸ್ತಾನ ಸರ್ಕಾರಕ್ಕೆ ಭಾರತ ಕೊಟ್ಟಿತ್ತು ಎಂದು ಇಮ್ರಾನ್ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ ಎಂಬ ಭಾರತದ ಆರೋಪಕ್ಕೆ ಇದೀಗ ಖುದ್ದು ಪಾಕಿಸ್ತಾನವೇ ಸಾಕ್ಷಿ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಕಾಪಾಡಣ್ಣ ಅಂತ ಭಾರತಕ್ಕೆ ಮೊರೆ ಇಡ್ತಿದೆ ಪಾಕ್ ಸೇನೆ!