ಬೆಂಗಳೂರು (ಮೇ. 16):  ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ಪರ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಬಡ್ತಿ ಮೀಸಲಾತಿ ಕಾಯಿದೆ’ಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ಕಾಯಿದೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಅಧಿನಿಯಮ-2017 ಅನ್ವಯ ಅಧಿಕಾರಿಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು 30 ದಿನಗಳ ಒಳಗಾಗಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಸಂಬಂಧಪಟ್ಟಇಲಾಖಾ ಮುಖ್ಯಸ್ಥರಿಗೆ ಆದೇಶಿಸಿದೆ.

ಬಿ.ಕೆ. ಪವಿತ್ರ ಹಾಗೂ ನಾಗರಾಜ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಅಂತಿಮ ತೀರ್ಪನ್ನು ಉಲ್ಲೇಖಿಸಿ ಬುಧವಾರ ಆದೇಶ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ತೀರ್ಪಿನ ಅನ್ವಯ ತಾತ್ಕಾಲಿಕ ಹಾಗೂ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸುವುದು ಹಾಗೂ ಅಧಿಕಾರಿಗಳಿಗೆ ಬಡ್ತಿ, ಹಿಂಬಡ್ತಿಗೆ ಅರ್ಹತಾ ದಿನಾಂಕವನ್ನು ನಿಗದಿಪಡಿಸುವುದು, ಈಗಾಗಲೇ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡಿರುವುದನ್ನು ಪುನರವಲೋಕನ ಮಾಡುವುದು, ವೇತನ ಹಾಗೂ ಪಿಂಚಣಿ ನಿಗದಿಪಡಿಸುವುದು ಸೇರಿದಂತೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಆದೇಶ ಹೊರಡಿಸಿದ 30 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಅಲ್ಲದೆ, ಲೋಕಸಭಾ ಸಾರ್ವತ್ರಿಕ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ನೌಕರರಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ನೇಮಕ ಮಾಡಿರುವ ಸ್ಥಳಕ್ಕೆ ವರದಿ ಮಾಡಿಕೊಳ್ಳಲು ಅವಕಾಶ ನೀಡಬೇಕು.

ವಿಧಾನಸಭೆ ಉಪ ಚುನಾವಣೆ ನಡೆಯುತ್ತಿರುವ ಧಾರವಾಡ, ಕಲಬುರಗಿ ಜಿಲ್ಲೆಗಳು, ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಳಕ್ಕೆ ಅಥವಾ ಅಂತಹ ಸ್ಥಳದಿಂದ ಬೇರೆಡೆಗೆ ಅಧಿಕಾರಿ, ನೌಕರರ ಸ್ಥಳ ನಿಯುಕ್ತಿಗೊಳಿಸಬೇಕಾದ ಅನಿವಾರ್ಯತೆ ಇದ್ದರೆ ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ಬಳಿಕ ಹೊರಡಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಪ್ರತಿಯಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಅವರ ಆಡಳಿತ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯ, ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಈ ಆದೇಶವನ್ನು ಪಾಲಿಸಲು ಸೂಚನೆಗಳನ್ನು ನೀಡುವಂತೆ ತಿಳಿಸಲಾಗಿದೆ.

ಮಾ.3 ರ ಸರ್ಕಾರಿ ಆದೇಶ ರದ್ದು:

ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮವನ್ನು (2017) ಸುಪ್ರೀಂಕೋರ್ಟ್‌ ಅಂತಿಮ ತೀರ್ಪಿಗೆ ಒಳಪಟ್ಟು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಇದರಂತೆ 2019ರ ಫೆಬ್ರುವರಿ 27 ರಂದು ಸರ್ಕಾರ ಆದೇಶವನ್ನೂ ಹೊರಡಿಸಿತ್ತು ಬಳಿಕ ಮಾ.1 ರಂದು ಮದ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪಿನವರೆಗೆ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.

ಇದರಂತೆ ಮಾ.3 ರಂದು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಪತ್ರ ಕಳುಹಿಸಿದ್ದ ರಾಜ್ಯ ಸರ್ಕಾರ ಬಡ್ತಿ ಮೀಸಲಾತಿ ಕಾಯಿದೆ ಅಡಿ ಯಾರಿಗೂ ಹಿಂಬಡ್ತಿ-ಮುಂಬಡ್ತಿಗೆ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತ್ತು. ಇದೀಗ ಮೇ 10 ರಂದು ನೀಡಿರುವ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಮೀಸಲಾತಿ ವಿಧೇಯಕವನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮಾ.3ರ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.