ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿಜಯನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಮುಂಭಾಗದ ಮೆಟ್ರೋ ಆವರ​ಣದ ‘ಸಾ.ಶಿ. ಮರುಳಯ್ಯ ವೇದಿಕೆ'ಯಲ್ಲಿ ಶನಿವಾರ ಉದ್ಘಾಟನೆಗೊಂಡ 2 ದಿನಗಳ 11 ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.

ಮತ ಬ್ಯಾಂಕ್‌ಗಾಗಿ ಅನ್ಯಭಾಷಿಕರಿಗೆ, ವಲಸಿಗರಿಗೆ ವಿಶೇಷ ಉಪಚಾರ ನೀಡುವ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸಲು ಬೇಕಾದ ಕೆಲಸ ಮಾಡುವಲ್ಲಿ ಸಂ​ಪೂರ್ಣ ವಿಫಲವಾಗಿದ್ದಾರೆ. ಇನ್ನಾದರೂ ಈ ಸಂಬಂಧ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು 11ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜರಗನಹಳ್ಳಿ ಶಿವಶಂಕರ್‌ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿಜಯನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಮುಂಭಾಗದ ಮೆಟ್ರೋ ಆವರ​ಣದ ‘ಸಾ.ಶಿ. ಮರುಳಯ್ಯ ವೇದಿಕೆ'ಯಲ್ಲಿ ಶನಿವಾರ ಉದ್ಘಾಟನೆಗೊಂಡ 2 ದಿನಗಳ 11 ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.

ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದರೆ ನಾಡಿನ ಭಾಷೆ, ಸಂಸ್ಕೃತಿ ಕಲಿಯಬೇಕಾದ ಸನ್ನಿವೇಶ ಎದುರಾಗದ ಕಾರಣ ಅವರು ರಾಜಾರೋಷವಾಗಿ ಬದುಕುತ್ತಿದ್ದಾರೆ. ಮತಗಳಿಗಾಗಿ ಅನ್ಯಭಾಷಿಕರಿಗೆ ವಿಶೇಷ ಉಪಚಾರ ನೀಡುವ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು, ನಮ್ಮ ಭಾಷೆ, ಸಂಸ್ಕೃತಿ ಕಲಿಸಲು ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮತಗಳ ಆಶ್ರಯಕ್ಕಾಗಿ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳದ ಪರಿಸ್ಥಿತಿ ಪ್ರಜಾಪ್ರಭುತ್ವದಲ್ಲಿ ತಲೆದೋರಿದೆ ಎಂದರು.

ಕನ್ನಡ ಭಾಷೆ, ಸಂಸ್ಕೃತಿ, ಜನರ ಹಿತದೃಷ್ಟಿಯಿಂದ ಉತ್ತಮ ಅಂಶಗಳನ್ನೊಳಗೊಂಡ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ವಿಷಾದದ ಸಂಗತಿ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳ ಕೊರತೆ ಇಂದು ಎದ್ದು ಕಾಣುತ್ತಿದೆ. ಸರ್ಕಾರ ತುರ್ತಾಗಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕೇರಳ ಮಾದರಿ ಅನುಸರಿಸಿ: ಕೇರಳ ಸರ್ಕಾರ ರಾಷ್ಟ್ರಪತಿಗಳಿಂದ ಸುಗ್ರೀವಾಜ್ಞೆ ಪಡೆದುಕೊಳ್ಳುವ ಮೂಲಕ ಸದ್ದಿಲ್ಲದೆ ತಮ್ಮ ರಾಜ್ಯದಲ್ಲಿ ಮಲೆಯಾಳಂ ಭಾಷೆ ಕಲಿಕಾ ಮಾಧ್ಯಮವನ್ನು ಕಡ್ಡಾಯಗೊಳಿಸಿದೆ. ಕರ್ನಾಟಕ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡ ಇಂತಹ ತೀರ್ಮಾನಗಳಿಗೆ ಮುಂದಾಗಬೇಕು. ಆಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕರೂ, ಇದರಡಿ ಭಾಷೆಯ ಬೆಳವಣಿಗೆಗೆ ಆಗಬೇಕಿರುವ ಕೆಲಸಗಳು ಆಗುತ್ತಿಲ್ಲ. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿರುವುದು ಗಂಭೀರವಾದ ವಿಚಾರ. ಇದಕ್ಕೆ ಕಾರಣಗಳೇನು? ಪರಿಹಾರಗಳೇನು? ಎಂದು ಕಂಡುಹಿಡಿದು ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು. ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ ಹಾಗೂ ಕಾರಂತ, ಅ.ನ.ಕೃ, ಲಂಕೇಶ್‌ ಅವರುಗಳ ಸಾಹಿತ್ಯವನ್ನು ಸಮಾಜದ ಎಲ್ಲಾ ವರ್ಗದವರಿಗೂ ತಲುಪಿಸುವ ಜವಾಬ್ದಾರಿ ಇಂದಿನ ಶಿಕ್ಷಣ ಕ್ಷೇತ್ರದ ಮೇಲಿದೆ. ವೈಚಾರಿಕ ಪ್ರಜ್ಞೆ ಮೂಡಿಸುವ ಒಂದು ಬಲಿಷ್ಠ ಯುವಪಡೆ ಸಂಘಟಿತವಾಗಬೇಕಿದೆ ಎಂದು ಹೇಳಿದರು.

ವೃಷಭಾವತಿ ನದಿ ಹುಡುಕಿ, ಮೇಕೆದಾಟು ಶೀಘ್ರ ಆರಂಭಿಸಿ: ಸಮ್ಮೇಳನಾಧ್ಯಕ್ಷ

ಕೇಂದ್ರ ಸರ್ಕಾರ ಕಲುಷಿತಗೊಂಡಿರುವ ಗಂಗಾನದಿಯನ್ನು ಶುದ್ಧಗೊಳಿಸಲು ‘ಗಂಗಾ ಸೇವಾ ಅಭಿಯಾನ' ರೂಪಿಸಿರುವಂತೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಣ್ಮರೆಯಾಗುತ್ತಿರುವ ವೃಷಭಾವತಿ ನದಿಯನ್ನು ಹುಡುಕಿ ಸ್ವಚ್ಛಗೊಳಿಸುವ ಪವಿತ್ರ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕೈಗೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷ ಜರಗನಹಳ್ಳಿ ಶಿವಶಂಕರ್‌ ಮನವಿ ಮಾಡಿದರು. ಬೆಂಗಳೂರಿನಲ್ಲಿ ಜಲಕ್ಷಾಮ ಮುಂ​ದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ. ಇಲ್ಲಿ ಕೊಳವೆ ಬಾವಿ ಬಿಟ್ಟರೆ ಬೇರಾವ ನೀರು ಸಂಗ್ರಹ ಮಾರ್ಗಗಳಿಲ್ಲ. ಹಾಗಾಗಿ ವೃಷಭಾವತಿ ನದಿಯನ್ನು ಹುಡುಕಿ ಪುನರು​ಜ್ಜೀವನ​ಗೊಳಿಸ​ಬೇಕು. ಅದೇ ರೀತಿ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಗೆ ನೀರು ನೀಡಲು ಮೇಕೆದಾಟು ಯೋಜನೆ​ಯನ್ನು ಶೀಘ್ರ ಕೈಗೊಳ್ಳಬೇಕು. ಎತ್ತಿನಹೊಳೆ ಯೋಜನೆಯ ಮೂಲಕ ಬಯಲುಸೀಮೆ ಪ್ರದೇ​ಶ​​ಗಳಿಗೆ ಆದಷ್ಟುಬೇಗ ನೀರುಣಿಸಬೇಕು. ಅದೇ ರೀತಿ ಬೆಂಗಳೂರಿನ ಸುತ್ತಮುತ್ತ ಸಣ್ಣ ಬೆಟ್ಟ, ಗುಡ್ಡ​ಗಳನ್ನು, ಕೆರೆಗಳನ್ನು ಕಬಳಿಸಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಕೂಡ ಸರ್ಕಾರ ​ತಡೆಯ​ಬೇಕು. ನಾಶವಾಗಿರುವ ಸಸ್ಯ ಸಂಪತ್ತನ್ನು ಮರು ಸ್ಥಾಪಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಪರಿಸರ ಮಾಲಿನ್ಯ, ಆಮ್ಲಜನಕ ಕೊರತೆಯಂತಹ ಸಮಸ್ಯೆಗಳಿಂದ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.