ಬೆಂಗಳೂರು :  ಐಎಂಎ ಸಂಸ್ಥೆಯ ಮೂಲಕ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಹಣಕಾಸು ರವಾನೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ್ಯೂಲರ್‌ ಫ್ರಂಟ್‌ ಆಫ್‌ ಇಂಡಿಯಾ ಜೊತೆ ಮನ್ಸೂರ್‌ ಖಾನ್‌ ಜೊತೆ ಸಂಬಂಧವಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಈ ಸಂಬಂಧ ಕಳೆದ ಒಂದು ವರ್ಷದ ಹಿಂದೆ ಕೇರಳದ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದರು. ಆದ್ದರಿಂದ ನಮಗೆ ಪರಿಚಯ ಇದ್ದ ಕೆಲವರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು ಎಂದು ಹೇಳಿದರು.

ಮನ್ಸೂರ್‌ಗೆ ಭಯೋತ್ಪಾದಕರ ಜೊತೆ ನಂಟಿರುವ ಸಂಶಯವೂ ಇದೆ. ಆತನಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು. ಈ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡರಾದ ರೋಷನ್‌ ಬೇಗ್‌, ಜಮೀರ್‌ ಅಹಮದ್‌ ಖಾನ್‌ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷದ ಮುಖಂಡರ ಆಸ್ತಿ ಜಪ್ತಿ ಮಾಡಬೇಕು. ಅಲ್ಲದೆ, ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಸಿಎಂ ರಾಜೀನಾಮೆ ನೀಡಬೇಕು:

ರೈತರ ಸಾಲ ಮನ್ನಾ ಹಣ ವಾಪಸ್‌ ಹೋಗಿರುವ ವಿಚಾರವು ಸಹ ಐಎಂಎ ಜ್ಯುವೆಲ್ಸ್‌ ಗ್ರಾಹಕರಿಗೆ ಮೋಸ ಮಾಡಿದಂತಹ ರೀತಿ ನಡೆದಿದೆ. 49 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವುದಾಗಿ ಚುನಾವಣಾ ಸಮಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. ಅಲ್ಲದೆ, ಅಧಿಕಾರಿಗಳ ಸಭೆಯನ್ನೂ ನಡೆಸಿದ್ದರು. ಆದರೆ, ಚುನಾವಣೆ ಮುಗಿದ ಮೇಲೆ ಹಣ ವಾಪಸ್‌ ತೆಗೆದುಕೊಂಡಿದ್ದಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದ ಅವರು, ತಕ್ಷಣ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಆ್ಯಪ್‌ ಕಾರ್ಯ ಸ್ಥಗಿತ

ಬಹುಕೋಟಿ ವಂಚನೆ ಪ್ರಕರಣದ ಸುಳಿಗೆ ಸಿಲುಕಿ ಐಎಂಎ ಮಾಲೀಕ ಮನ್ಸೂರ್‌ ಖಾನ್‌ ನಾಪತ್ತೆಯಾದ ಬೆನ್ನೆಲ್ಲೆ ಆ ಸಂಸ್ಥೆಯ ಆ್ಯಪ್‌ ಸಹ ಕಾರ್ಯಸ್ಥಗಿತಗೊಳಿಸಿದೆ.

ತನ್ನ ಸಂಸ್ಥೆಯ ಹಣಕಾಸು ವ್ಯವಹಾರ ಹಾಗೂ ಕಾರ್ಯನಿರ್ವಹಣೆ ಕುರಿತು ಹೂಡಿಕೆದಾರರಿಗೆ ಮಾಹಿತಿ ನೀಡುವ ಸಲುವಾಗಿ ಮನ್ಸೂರ್‌ ಖಾನ್‌, ‘ಐಎಂಎ’ ಎಂಬ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿದ್ದ. ಇದರಲ್ಲಿ ಐಎಂಎ ಸಂಸ್ಥೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಗ್ರಾಹಕರಿಗೆ ಲಭ್ಯವಾಗುತ್ತಿದ್ದವು. ಇನ್ನೂ ಈ ಆ್ಯಪ್‌ ಮೂಲಕವೇ ಹಣಕಾಸು ವ್ಯವಹಾರದ ಕುರಿತು ಆಗ್ಗಿಂದಾಗೆ ಮಾಹಿತಿಯನ್ನು ಸಹ ಮನ್ಸೂರ್‌ ಹಂಚಿಕೊಳ್ಳುತ್ತಿದ್ದ. ಆದರೆ ರಂಜಾನ್‌ ಹಬ್ಬದ ಬಳಿಕ ಆ್ಯಪ್‌ ಸಹ ಕಾರ್ಯಸ್ಥಗಿತಗೊಳಿಸಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.