ಬೆಂಗಳೂರು (ಜು.11): IMA ಬಹುಕೋಟಿ ಹಗರಣದಲ್ಲಿ ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹೆಸರು ಥಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ SITಯು ಸಮನ್ಸ್ ನೀಡಿದೆ. 

ಕೋಟ್ಯಂತರ ರೂ. ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ SIT ತಂಡವು, ವಿಚಾರಣೆಗೆ ಹಾಜರಾಗಲು ರೋಷನ್ ಬೇಗ್‌ಗೆ ನಾಲ್ಕು ದಿನಗಳ ಗಡುವು ಕೊಟ್ಟಿದೆ. ತಪ್ಪಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ SIT ತಿಳಿಸಿದೆ. 

ಆದರೆ,  ಅನಾರೋಗ್ಯ ಹಾಗೂ ತೀರ್ಥಯಾತ್ರೆ ಕಾರಣ ನೀಡಿರುವ ಬೇಗ್ ಮೂರು ವಾರಗಳ ಸಮಯಾವಕಾಶ ಕೇಳಿದ್ದಾರೆ.  ಬೇಗ್ ಆಪ್ತ ಕೃಷ್ಣಗೌಡ ಎಂಬಾತನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ | ಸರ್ಕಾರ ಬೀಳಿಸುವುದರ ಹಿಂದೆ ಪ್ರಭಾವಿ ಸಚಿವನ ‘ಕೈ’ವಾಡ?

ಇತ್ತೀಚೆಗೆ ಕಾಂಗ್ರೆಸ್‌ನಿಂದ ಅಮಾನತ್ತು ಮಾಡಲ್ಪಟ್ಟ ರೋಷನ್ ಬೇಗ್ ಕಳೆದ ಮಂಗಳವಾರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. 

ಹಲಾಲ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ಸುಮಾರು 2000 ಕೋಟಿ ರೂ. ವಂಚಿಸಿ IMA ಮಾಲೀಕ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ. ಕಂಪನಿಯ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಸೇರಿದಂತೆ ಹಲವರನ್ನು ಈಗಾಗಲೇ SITಯು ಬಂಧಿಸಿದೆ.

ಮನ್ಸೂರ್ ಖಾನ್ ತಲೆ ಮರೆಸಿಕೊಳ್ಳುವ ವೇಳೆ ಬಿಡುಗಡೆ ಮಾಡಿದ್ದ ಆಡಿಯೋ ಕ್ಲಿಪ್‌ನಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪಿಸಿದ್ದ. ಪಡೆದ 400 ಕೋಟಿ ಸಾಲ ಹಿಂತಿರುಗಿಸುತ್ತಿಲ್ಲ ಎಂದು ರೋಷನ್ ಬೇಗ್ ವಿರುದ್ಧ ಆರೋಪ ಮಾಡಿದ್ದ.