ಬೆಂಗಳೂರು :  ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡರನ್ನು ಟೀಕಿಸಿ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ನನ್ನ ಮೇಲೆ ಐಎಂಎ ಹಗರಣದಂತಹ ಆರೋಪಗಳು ಶುರುವಾಗಿವೆ. ವಿನಾಕಾರಣ ನನ್ನ ಹೆಸರು ತಂದು ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಆರೋಪ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮುಖಂಡರು ಎಸ್‌ಐಟಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡುತ್ತಾರೆ. ಈವರೆಗೂ ಅಲ್ಪಸಂಖ್ಯಾತ ಸಮುದಾಯಗಳು ವಂಚನೆಗೊಳಗಾದ ಹಲವು ಪ್ರಕರಣಗಳು ನಡೆದಿವೆ. ಆ್ಯಂಬಿಡೆಂಟ್‌, ಅಜ್ಮೇರಾ ಸೇರಿದಂತೆ ಹಲವು ವಂಚನೆ ಪ್ರಕರಣದಲ್ಲಿ ಸಾವಿರಾರು ಮಂದಿ ಅಮಾಯಕರು ಹಣ ಕಳೆದುಕೊಂಡಿದ್ದಾರೆ. ಆಗ ಏಕೆ ಅವರೆಲ್ಲ ಎಸ್‌ಐಟಿ ತನಿಖೆ ಮಾಡಿ ಎಂಬುದಾಗಿ ಒತ್ತಾಯಿಸಿಲ್ಲ ಎಂದು ಪ್ರಶ್ನಿಸಿದರು.

ಇದೇ ವೇಳೆ, ಬಹುಕೋಟಿ ವಂಚನೆ ನಡೆಸಿ ಪರಾರಿಯಾಗಿರುವ ಮೊಹಮ್ಮದ್‌ ಮನ್ಸೂರ್‌ ಖಾನ್‌ನನ್ನು ಪತ್ತೆ ಮಾಡಿ ಬಂಧಿಸಬೇಕಾಗಿದ್ದರೆ ಎಸ್‌ಐಟಿಗಿಂತಲೂ ಸಿಬಿಐ ತನಿಖೆ ನಡೆಯಬೇಕು. ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಪ್ರಕರಣವನ್ನು ಸಿಬಿಐಗೆ ವಹಿಸಿದರೆ ತಪ್ಪಿತಸ್ಥರ ವಿರುದ್ಧ ರೆಡ್‌ ಅಲರ್ಟ್‌ ಜಾರಿ ಮಾಡಲು ಅನುಕೂಲವಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಹಗರಣದ ಜಾಲ ಹೊಂದಿರುವ ತಪ್ಪಿತಸ್ಥರನ್ನು ಬಂಧಿಸಲು ಇಂಟರ್‌ಪೋಲ್‌ ಅಲರ್ಟ್‌ ಮಾಡಬಹುದು. ಕೇವಲ ಎಸ್‌ಐಟಿ ತನಿಖೆ ನಡೆಸಿದರೆ ಆರೋಪಿ ಪಾರಾಗಲು ಸಾಧ್ಯತೆಗಳಿರುತ್ತವೆ. ನನಗೆ ಎಸ್‌ಐಟಿ ಹಾಗೂ ಮುಖ್ಯಮಂತ್ರಿಗಳ ಮೇಲೆ ಪೂರ್ಣ ವಿಶ್ವಾಸವಿದೆ. ಆದರೆ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಾನು ಕಾಂಗ್ರೆಸ್‌ನ ಹಿರಿಯ ನಾಯಕರ ಬಗ್ಗೆ ಟೀಕೆ ಮಾಡಿದೆ. ಇದರ ಬೆನ್ನಲ್ಲೇ ದಿಢೀರ್‌ ಆಗಿ ಇಂತಹ ಬೆಳವಣಿಗೆಗಳು ಶುರುವಾಗಿವೆ. ನಾನು ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ನನ್ನ ಮೇಲೆ ಇಂತಹ ಆರೋಪಗಳು ಬಂದಿರುವುದರಿಂದ ಆಶ್ಚರ್ಯ ಉಂಟಾಗಿದೆ ಎಂದು ಹೇಳಿದರು.

ಜಮೀರ್‌ ವಿರುದ್ಧ ಪರೋಕ್ಷ ಆರೋಪ:

ಐಎಂಎ ಕಂಪನಿ ಜತೆ ನನಗೆ ಯಾವುದೇ ಹಣದ ವ್ಯವಹಾರ ಇಲ್ಲ. ಕ್ಷೇತ್ರದ ಶಾಸಕನಾಗಿ ಮಾತ್ರ ಅವರ ಜತೆ ಸಂಬಂಧ ಹೊಂದಿದ್ದೇನೆ. ಕ್ಷೇತ್ರದಲ್ಲಿ ನಾನು ಓದಿದ ಶಾಲೆಯನ್ನು ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಆದರೆ, ನಾನು ಬೇರೆಯವರ ರೀತಿಯಲ್ಲಿ ಆಸ್ತಿ ನೀಡಿ 5 ಕೋಟಿ ರು. ಹಣ ಪಡೆದಿಲ್ಲ ಎಂದು ಕಿಡಿಕಾರಿದರು.

ಆರೋಪಿ ಮನ್ಸೂರ್‌ ಖಾನ್‌ ಜತೆ ನಿಜವಾಗಿಯೂ ಯಾರು ಸಂಪರ್ಕ ಹೊಂದಿದ್ದರು ಎಂಬುದು ಹೊರಗಡೆ ಬರಬೇಕು. ನಾನು ದೆಹಲಿಯಲ್ಲಿದ್ದಾಗ ನನ್ನ ಮೇಲೆ ಆರೋಪಿಸಿರುವ ಆಡಿಯೋ ಹಾಗೂ ಪ್ರಕರಣ ಹೊರಗಡೆ ಬಂದಿದೆ. ಆಡಿಯೋದಲ್ಲಿ ರೋಷನ್‌ ಬೇಗ್‌ಗೆ 400 ಕೋಟಿ ರು. ಹಣ ನೀಡಿರುವುದಾಗಿ ಹೇಳಲಾಗಿದೆ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಲಾಗಿದೆ. ಒಂದು ವಾರ ಕಳೆದಿದ್ದು, ಈ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರೆ ಮಾಹಿತಿ ಹೊರಗಡೆ ಬರಬೇಕಾಗಿತ್ತು. ಹೀಗಾಗಿ ಪ್ರಕರಣ ಏನು? ಇದರ ಹಿಂದೆ ಯಾರಿದ್ದಾರೆ ಎಂಬುದು ಸಮಗ್ರವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಆರೋಪಿಯು ತನ್ನ ಮೊಬೈಲ್‌ನಿಂದ 36 ಗಂಟೆಗಳಲ್ಲಿ ಯಾರಾರ‍ಯರ ಬಳಿ ಮಾತನಾಡಿದ್ದಾನೆ? ಯಾರಾರ‍ಯರ ಬಳಿ ವಾಟ್ಸಾಪ್‌, ಸಂದೇಶ, ಕರೆಗಳ ಮೂಲಕ ಸಂಪರ್ಕ ಸಾಧಿಸಿದ್ದಾನೆ ಎಂಬುದು ತನಿಖೆಯಾಗಬೇಕು. ಸಾವಿರ ಕೋಟಿ ರು. ಹಣ ಅವರ ಕಂಪನಿಯಿಂದ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂಬ ಮಾತಿದೆ. ಅಂತಹ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಹಣವನ್ನು ಬಡವರಿಗೆ ಹಂಚಬೇಕು ಎಂದು ಬೇಗ್‌ ಒತ್ತಾಯಿಸಿದರು.